ವಾಲ್ಮೀಕಿ ನಿಗಮ ಅಕ್ರಮ ತನಿಖೆ ಎಸ್‌ಐಟಿಗೇಕೆ?

| Published : Jun 01 2024, 01:46 AM IST / Updated: Jun 01 2024, 10:01 AM IST

Karnataka Valmiki Maharshi

ಸಾರಾಂಶ

ಮಹರ್ಷಿ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಅಕ್ರಮ ಬಗ್ಗೆ ಸಿಬಿಐ ತನಿಖೆ ನಡೆಯುವ ಸಾಧ್ಯತೆಯಿದ್ದರೂ ರಾಜ್ಯ ಸರ್ಕಾರವು ಹಗರಣದ ಆಳ-ಅಗಲದ ಬಗ್ಗೆ ವ್ಯವಸ್ಥಿತವಾಗಿ ತನಿಖೆ ನಡೆಸಿ ಸರ್ಕಾರಕ್ಕೆ ಉಪಯುಕ್ತ ಮಾಹಿತಿ ಸಂಗ್ರಹಿಸಲು ಎಸ್‌ಐಟಿ ರಚನೆ ಮಾಡಿ ಆದೇಶಿಸಿದೆ.

  ಬೆಂಗಳೂರು :  ಮಹರ್ಷಿ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಅಕ್ರಮ ಬಗ್ಗೆ ಸಿಬಿಐ ತನಿಖೆ ನಡೆಯುವ ಸಾಧ್ಯತೆಯಿದ್ದರೂ ರಾಜ್ಯ ಸರ್ಕಾರವು ಹಗರಣದ ಆಳ-ಅಗಲದ ಬಗ್ಗೆ ವ್ಯವಸ್ಥಿತವಾಗಿ ತನಿಖೆ ನಡೆಸಿ ಸರ್ಕಾರಕ್ಕೆ ಉಪಯುಕ್ತ ಮಾಹಿತಿ ಸಂಗ್ರಹಿಸಲು ಎಸ್‌ಐಟಿ ರಚನೆ ಮಾಡಿ ಆದೇಶಿಸಿದೆ.

ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಇದರಲ್ಲಿ ಸರ್ಕಾರಕ್ಕೆ ಹಾನಿಯಾಗಬಹುದಾದ ಅಂಶಗಳಿವೆಯೇ ಎಂಬುದನ್ನು ಪತ್ತೆ ಹಚ್ಚಿ ಸರ್ಕಾರವನ್ನು ಸುರಕ್ಷಿತವನ್ನಾಗಿಸಿಕೊಳ್ಳುವ ಜತೆಗೆ ಅಕ್ರಮವಾಗಿ ವರ್ಗಾವಣೆ ಆಗಿರುವ ಹಣವನ್ನು ಪುನರ್‌ ಸಂಗ್ರಹಿಸಲು ಆರ್ಥಿಕ ಅಪರಾಧಗಳ ವಿಭಾಗದ ಅಡಿ ಎಸ್‌ಐಟಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ ಎನ್ನಲಾಗಿದೆ.

ಇನ್ನು ಮೂಲಗಳ ಪ್ರಕಾರ, ಹಿಂದಿನ ಸರ್ಕಾರಗಳಲ್ಲೂ ನಿಗಮದಲ್ಲಿ ಹಣದ ಅಕ್ರಮ ವರ್ಗಾವಣೆ, ದುರ್ಬಳಕೆಗಳು ನಡೆದಿವೆ. ಇದರಲ್ಲಿ ಮಧ್ಯವರ್ತಿಗಳು ವ್ಯವಸ್ಥಿತವಾಗಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ಸರ್ಕಾಗಳಲ್ಲಿ ಸಕ್ರಿಯರಾಗಿದ್ದವರೇ ಈಗಲೂ ಹಗರಣದಲ್ಲಿ ಭಾಗವಹಿಸಿರುವ ಸಾಧ್ಯತೆಯಿದೆ. ಹೀಗಾಗಿ ಮೂಲ ಕೆದಕಿ ಹಿಂದಿನ ಅವಧಿಯಲ್ಲಿ ಆಗಿರಬಹುದಾದ ಅಕ್ರಮಗಳನ್ನು ಕೆದಕಿ ಪ್ರತಿ ಅಸ್ತ್ರ ಸಿದ್ಧಪಡಿಸಿಕೊಳ್ಳಲು ರಾಜ್ಯ ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.

ನಾಗೇಂದ್ರ ರಾಜೀನಾಮೆ ಬಗ್ಗೆ ಇಂದು ನಿರ್ಧಾರ?

 ಬೆಂಗಳೂರು :  ವಾಲ್ಮೀಕಿ ನಿಗಮದ ಅವ್ಯವಹಾರ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಕಂಟಕವಾಗಿ ಬದಲಾಗುತ್ತಿದ್ದು, ಸಚಿವ ಬಿ. ನಾಗೇಂದ್ರ ರಾಜೀನಾಮೆ ಕುರಿತು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಈ ವೇಳೆ ಲೋಕಸಭೆ ಅಂತಿಮ ಹಂತದ ಚುನಾವಣೆ ಮುಗಿಯುವವರೆಗೂ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ತನ್ಮೂಲಕ ಜೂ.1ರವರೆಗೆ ನಾಗೇಂದ್ರ ಅವರಿಗೆ ಜೀವದಾನ ದೊರತಂತಾಗಿದ್ದು, ಜೂ.2ರ ಬಳಿಕ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಮಾಡುವುದಾಗಿ ತಿಳಿದು ಬಂದಿದೆ.

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನಕ್ಕೂ ಮುನ್ನ (ಅಂದರೆ ಶುಕ್ರವಾರ) ರಾಜೀನಾಮೆ ಪಡೆದರೇ ಅದು ಮತದಾನದ ದಿನವಾದ ಶನಿವಾರ ದೊಡ್ಡ ಸದ್ದು ಮಾಡುವ ಸಾಧ್ಯತೆಯಿರುತ್ತದೆ. ಹೀಗಾಗಿ ಶನಿವಾರ ಸಂಜೆಯ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಕೆಲ ಸಚಿವರು, ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರ ಇದ್ದರೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಲಿ. ನಿರ್ದೋಷಿ ಎಂದು ಸಾಬೀತಾರೆ ಮತ್ತೆ ಸಂಪುಟಕ್ಕೆ ಬರಲಿ ಎಂಬ ಸಲಹೆ ನೀಡಿದರೆ, ಮತ್ತೊಂದೆಡೆ ಬಿಜೆಪಿ ಒತ್ತಡ ಹೇರುತ್ತದೆ ಎಂಬ ಕಾರಣಕ್ಕೆ ಸಕಾರಣವಿಲ್ಲದೆ ನಾಗೇಂದ್ರ ರಾಜೀನಾಮೆ ನೀಡುವ ಅಗತ್ಯವಿಲ್ಲ. ಅವರ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿಲ್ಲ. ಸಿಬಿಐ ತನಿಖೆ ನಡೆಯುವುದಾದರೇ ನಡೆಯಲಿ ಕಾದು ನೋಡೋಣ ಎಂದು ಕೆಲವರು ಸಲಹೆ ನೀಡಿದರು ಎನ್ನಲಾಗಿದೆ.

ಸಿಬಿಐನಿಂದಲೂ ತನಿಖೆ ನಿಶ್ಚಿತ?

  ಯೂನಿಯನ್‌ ಬ್ಯಾಂಕ್‌ನಲ್ಲಿ ನಡೆದಿರುವ ವಾಲ್ಮೀಕಿ ನಿಗಮದ 87 ಕೋಟಿ ರು. ಅಕ್ರಮ ಹಣ ವರ್ಗಾವಣೆ ಕುರಿತು ಬ್ಯಾಂಕ್‌ ಈಗಾಗಲೇ ಸಿಬಿಐಗೆ ದೂರು ನೀಡಿದ್ದು, ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಳ್ಳುವುದೇ ಎಂಬ ಕುತೂಹಲ ಮೂಡಿದೆ.

ಆರ್‌ಬಿಐ ನಿಯಮಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಮನಿಸಿದರೆ 87 ಕೋಟಿ ರು. ಹಣ ಅಕ್ರಮ ವರ್ಗಾವಣೆಯಾಗಿರುವುದರಿಂದ ಸಹಜವಾಗಿಯೇ ಸಿಬಿಐ ತನಿಖೆಗೆ ಮುಂದಾಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ಆರ್‌ಬಿಐ ನಿಯಮಗಳ ಪ್ರಕಾರ 25 ರಿಂದ 50 ಕೋಟಿ ರು. ಮೊತ್ತದ ಯಾವುದೇ ಬ್ಯಾಂಕ್‌ ವಂಚನೆ ಪ್ರಕರಣವನ್ನು ಕಡ್ಡಾಯವಾಗಿ ಸಿಬಿಐನ ಬ್ಯಾಂಕಿಂಗ್‌ ಸುರಕ್ಷತೆ ಮತ್ತು ವಂಚನೆ ವಿಭಾಗ (ಬಿಎಸ್ಎಫ್‌ಸಿ) ಹಾಗೂ 50 ಕೋಟಿಗೂ ಹೆಚ್ಚಿನ ಮೊತ್ತದ ವಂಚನೆಯನ್ನು ಸಿಬಿಐ ಜಂಟಿ ನಿರ್ದೇಶಕರೇ ತನಿಖೆ ನಡೆಸಬೇಕು.2018ರಲ್ಲಿ ಆರ್‌ಬಿಐ ನೀಡಿರುವ ಸೂಚನೆ ಪ್ರಕಾರ, ಬ್ಯಾಂಕ್‌ಗಳಲ್ಲಿ ನಡೆಯುವ 10 ಸಾವಿರದಿಂದ 1 ಲಕ್ಷ ರು.ವರೆಗಿನ ಅವ್ಯವಹಾರವನ್ನು ರಾಜ್ಯ ಪೊಲೀಸ್, 1 ಲಕ್ಷ ರು.ಗಳಿಂದ 3 ಕೋಟಿ ರು.ಗಳನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗ, 3 ರಿಂದ 25 ಕೋಟಿ ರು.ಗಳನ್ನು ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ, 25 ಕೋಟಿ ರು.ಗಳಿಂದ 50 ಕೋಟಿ ರು.ಗಳವರೆಗೆ ಸಿಬಿಐನ ಬಿಎಸ್‌ಎಫ್‌ಸಿ ಹಾಗೂ 50 ಕೋಟಿಗೂ ಹೆಚ್ಚಿನ ಮೊತ್ತದ ಹಗರಣವನ್ನು ಸಿಬಿಐ ಜಂಟಿ ನಿರ್ದೇಶಕರು ತನಿಖೆ ನಡೆಸಬೇಕು ಎಂದು ಹೇಳಿದೆ.

ಇನ್ನು 100 ಕೋಟಿಗೂ ಹೆಚ್ಚು ಮೊತ್ತದ ಹಗರಣವನ್ನು ಕಡ್ಡಾಯವಾಗಿ ಸಿಬಿಐಗೆ ವಹಿಸಬೇಕು ಎಂದು ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ ಈ ಪ್ರಕರಣದಲ್ಲಿ 87 ಕೋಟಿ ರು.ಗಳ ಅವ್ಯವಹಾರ ನಡೆದಿದ್ದು, ಬ್ಯಾಂಕಿಂಗ್‌ ಅವ್ಯವಹಾರ ಆಗಿರುವುದರಿಂದ ಆರ್‌ಬಿಐ ನಿಯಮಗಳ ಪ್ರಕಾರ ಸಿಬಿಐ ತನಿಖೆಗೆ ಮುಂದಾಗುವ ಸಾಧ್ಯತೆಯೇ ಹೆಚ್ಚು.

ಹೀಗಾದಲ್ಲಿ ರಾಜ್ಯ ಸರ್ಕಾರವು ಪ್ರಕರಣದ ತನಿಖೆಗೆ ನೇಮಕ ಮಾಡಿರುವ ಎಸ್‌ಐಟಿ ಹಾಗೂ ಸಿಬಿಐ ಎರಡೂ ತನಿಖಾ ಸಂಸ್ಥೆಗಳೂ ಒಂದೇ ಸಮಯದಲ್ಲಿ ತನಿಖೆ ನಡೆಯುವ ಪರಿಸ್ಥಿತಿ ನಿರ್ಮಾಣ‍ವಾಗುವ ಸಾಧ್ಯತೆಯಿದೆ.