ಸಾರಾಂಶ
ಹಾವೇರಿ: ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ, ಬ್ಲಾಕ್ ಪ್ರಚಾರ ಸಮಿತಿ ಹಾಗೂ ಪಂಚಾಯಿತಿ ಮಟ್ಟದ ಪ್ರಚಾರ ಸಮಿತಿಯಲ್ಲಿ ತಲಾ 23 ಜನ ಸದಸ್ಯರನ್ನೊಳಗೊಂಡ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಪಿಸಿಸಿ ಪ್ರಚಾರ ಸಮಿತಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರ ಮಾಡುತ್ತದೆ ಎಂಬ ಮಾತಿತ್ತು. ಈಗ ಪಕ್ಷದ ಹೈಕಮಾಂಡ್ ನಿರಂತರವಾಗಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದೆ. ಅದರಂತೆ ರಾಜ್ಯಾದ್ಯಂತ ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲ ಜಿಲ್ಲೆಯಲ್ಲೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಪ್ರವಾಸವನ್ನು ಕೈಗೊಂಡಿದ್ದೇವೆ. ಜಿಲ್ಲಾ ಸಮಿತಿಗೆ 23 ಜನ, ಬ್ಲಾಕ್ ಸಮಿತಿಗೆ 23 ಜನ ಹಾಗೂ ಪಂಚಾಯಿತಿ ಮಟ್ಟದಲ್ಲಿ ಒಂದೊಂದು ಬೂತ್‌ನಲ್ಲಿ 2 ಜನರಂತೆ ಸೇರ್ಪಡೆ ಮಾಡಿಕೊಂಡು ಸಮಿತಿ ರಚಿಸಲಾಗುತ್ತದೆ. ಸ್ಥಳೀಯ ಶಾಸಕರ ಜತೆ ಚರ್ಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.ಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬರಲಿದ್ದು, ಇವು ಕಾರ್ಯಕರ್ತರ ಚುನಾವಣೆಗಳಾಗಿವೆ. ಕಾರ್ಯಕರ್ತರನ್ನು ಸಜ್ಜುಗೊಳಿಸುವ ಅಗತ್ಯತೆ ಇದೆ. ಈ ಹಿನ್ನೆಲೆ ಸಂಘಟನಾ ಶಕ್ತಿಯನ್ನು ಹೆಚ್ಚಿಸಿ ಪ್ರತಿ ಜಿಲ್ಲೆಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಶೀರ್ಷಿಕೆಯಡಿ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಗುವುದು. ಕಾರ್ಯಾಗಾರದಲ್ಲಿ ಪಕ್ಷದ ಸಿದ್ಧಾಂತ ಬಗ್ಗೆ ಅರಿವು ಮೂಡಿಸುವುದು, ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡುವುದು, ವಿಪಕ್ಷಗಳ ತಪ್ಪು ನಿರ್ಧಾರಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವಂತೆ ಮಾಹಿತಿ ನೀಡಲಾಗುತ್ತದೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಾಧಿಕಾರ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಪ್ರಚಾರ ಸಮಿತಿ ಅಧ್ಯಕ್ಷ ಎಸ್.ವಿ. ಪಾಟೀಲ, ಸಮಿತಿ ರಾಜ್ಯ ಉಪಾಧ್ಯಕ್ಷ ಜೆ.ಡಿ. ನಾಯಕ, ಅಬ್ಧುಲ್ ಮುನಿರೆ, ಎಂ.ಎಂ. ಮೈದೂರ, ಬಸವರಾಜ ಹೆಡಿಗ್ಗೊಂಡ, ಶ್ರೀಧರ ದೊಡ್ಡಮನಿ ಇದ್ದರು.