ರಾಮನಗರ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಕಡ್ಡಾಯವಾಗಿ ಮಕ್ಕಳನ್ನು ಸೇರಿಸಬೇಕೆಂದು ಒತ್ತಾಯಪೂರ್ವಕವಾಗಿ ಪೋಷಕರಿಂದ ಸಹಿ ಪಡೆಯುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಸಂಘಟನೆ ಭಾನುವಾರ ಹಲವು ಸರ್ಕಾರಿ ಶಾಲೆಗಳ ಬಳಿ ಪ್ರತಿಭಟನೆ ನಡೆಸಿದರು.
ತಾಲೂಕಿನ ನೆಲೆಮಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕೋಟಾಹಳ್ಳಿ ಕಿರಿಯ ಪ್ರಾಥಮಿಕ ಶಾಲೆಗಳ ಉಳಿವಿಗಾಗಿ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಸಿ.ಎಂ.ಅಪೂರ್ವ, ಅಮ್ಮನಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳಿವಿಗಾಗಿ ಸಂಘಟನೆ ರಾಜ್ಯ ಸೆಕ್ರೆಟೇರಟ್ ಸದಸ್ಯ ಕಲ್ಯಾಣ ಕುಮಾರ್ ಹಾಗೂ ಫಾಲಬೋವಿದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಳಿವಿಗಾಗಿ ಸಂಘಟನೆಯ ಜಿಲ್ಲಾ ಸಂಚಾಲಕ ರೋಹಿತ್ ನೇತೃತ್ವದಲ್ಲಿ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟಿಸಿದರು.ಸಂಘಟನೆ ಜಿಲ್ಲಾ ಸಂಚಾಲಕ ರೋಹಿತ್ ಮಾತನಾಡಿ, ರಾಜ್ಯ ಸರ್ಕಾರ ಅತ್ಯಂತ ವೇಗವಾಗಿ ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ’ಯನ್ನು ರಾಮನಗರದಲ್ಲಿ ಜಾರಿಗೆ ತರುತ್ತಿದ್ದು, ಇದು ಸರ್ಕಾರಿ ಶಾಲೆಗಳ ಮಾರಣಹೋಮಕ್ಕೆ ಹಾದಿಮಾಡಿಕೊಡುತ್ತಿದೆ. ಊರಾಚೆಯಿರುವ ಮ್ಯಾಗ್ನೆಟ್ ಶಾಲೆಗಳಿಗೆ ಹಲವಾರು ಸೌಕರ್ಯಗಳನ್ನು ಒದಗಿಸುವ ಹಾಗೂ ಉಚಿತ ಬಸ್ ಸೌಲಭ್ಯ ನೀಡುವ ಸುಳ್ಳು ಭರವಸೆಗಳನ್ನು ನೀಡಿ, ಈ ಯೋಜನೆಯ ಕರಾಳ ಮುಖವನ್ನು ಮರೆಮಾಚಿ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ದೂರಿದರು.
ಪಾದರಹಳ್ಳಿ ಕೆಪಿಎಸ್ ಮ್ಯಾಗ್ನೆಟ್, ಅವ್ವೇರಹಳ್ಳಿ ಕೆಪಿಎಸ್ ಮ್ಯಾಗ್ನೆಟ್ ಹಾಗೂ ಜಾಲಮಂಗಲ ಕೆಪಿಎಸ್ ಮ್ಯಾಗ್ನೆಟ್ ಗಳಲ್ಲಿ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ, ಮಕ್ಕಳನ್ನು ಕಡ್ಡಾಯವಾಗಿ ಮ್ಯಾಗ್ನೆಟ್ ಶಾಲೆಗಳಿಗೇ ಸೇರಿಸಬೇಕೆಂದು ಪೋಷಕರ ಮೇಲೆ ಒತ್ತಡ ಹೇರಿ ಸಹಿ ಪಡೆದುಕೊಳ್ಳುತ್ತಿದ್ದಾರೆ. ಕೇವಲ ರಾಮನಗರದ ಶಿಕ್ಷಕರು, ಮುಖ್ಯ ಶಿಕ್ಷಕರು, ಸಿಆರ್‌ಪಿ, ಬಿಇಒ ಅಥವಾ ಡಿಡಿಪಿಐ ಗಳಷ್ಟೇ ಅಲ್ಲದೆ, ಈಗ ಶಾಸಕರಿಂದಲೂ ಪೋಷಕರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.ಇಂದಿಗೂ ಎಷ್ಟೋ ಕಾಡಂಚಿನ ಗ್ರಾಮಗಳಿಗೆ ಕನಿಷ್ಠ ಬಸ್ ಸೌಕರ್ಯವೇ ಇಲ್ಲದಿರುವಾಗ, ಮ್ಯಾಗ್ನೆಟ್ ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಬಸ್ ಒದಗಿಸಲು ಹೇಗೆ ಸಾಧ್ಯ? ಕರ್ನಾಟಕದ ಮೊದಲ ಪ್ರಾಯೋಗಿಕ(ಪೈಲಟ್) ಪ್ರಾಜೆಕ್ಟ್ ಆದ ಹೊಂಗನೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಯೇ ದೊಡ್ಡ ವೈಫಲ್ಯಕ್ಕೆ ಸಾಕ್ಷಿಯಾಗಿರುವಾಗ, ಈ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಇದು ರೈತರು ಮತ್ತು ಕಾರ್ಮಿಕರ ಮಕ್ಕಳಿಂದ ಸಾರ್ವಜನಿಕ ಶಿಕ್ಷಣವನ್ನು ಶಾಶ್ವತವಾಗಿ ಕಸಿದುಕೊಳ್ಳುವ ವಿಷಪೂರಿತ ಯೋಜನೆಯಾಗಿದೆ. ಈಗಾಗಲೇ ಪ್ರತಿ ಹಳ್ಳಿಗಳಲ್ಲಿ ಪೋಷಕರು-ಗ್ರಾಮಸ್ಥರು ಕಳೆದ ಒಂದು ತಿಂಗಳಿಂದ ಹೋರಾಡುತ್ತಾ, ಮನವಿ ಪತ್ರಗಳನ್ನು ಸಲ್ಲಿಸಿದರು ಸಹ, ಸರ್ಕಾರವು ಅತ್ಯಂತ ಮೊಂಡುತನದಿಂದ ತನ್ನ ಕಾರ್ಯವನ್ನು ಮುಂದುವರಿಸುತ್ತ ಬಂದಿದೆ ಎಂದು ರೋಹಿತ್ ಟೀಕಿಸಿದರು.
17ಕೆಆರ್ ಎಂಎನ್ 2.ಜೆಪಿಜಿ
ಕೋಟಾಹಳ್ಳಿ ಸರ್ಕಾರಿ ಶಾಲೆ ಬಳಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.