ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವ ಹುನ್ನಾರ ಮಾಡಿದೆ. ಈ ಯೋಜನೆ ವಿರುದ್ಧ ಪೋಷಕರು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಬೇಕು. ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದ್ದಾರೆ.
- ಕುಣಿಬೆಳಕೆರೆಯಲ್ಲಿ ವೃತ್ತಿ ಅವಕಾಶಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ವಿನಯಕುಮಾರ್
- - -ಕನ್ನಡಪ್ರಭ ವಾರ್ತೆ ಹರಿಹರ
ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವ ಹುನ್ನಾರ ಮಾಡಿದೆ. ಈ ಯೋಜನೆ ವಿರುದ್ಧ ಪೋಷಕರು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಬೇಕು. ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದರು.ತಾಲೂಕಿನ ಕುಣಿಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಗ್ರಾಮೀಣ ಪ್ರದೇಶ ಮಕ್ಕಳಿಗೆ ಏರ್ಪಡಿಸಿದ್ದ ವೃತ್ತಿ ಅವಕಾಶಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸರ್ಕಾರದ ಜನವಿರೋಧಿ, ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಪೋಷಕರು ಹೋರಾಡುವ ಜೊತೆಗೆ ಪ್ರಶ್ನಿಸಬೇಕು. ಸಂಘಟಿತರಾಗಿ ಪ್ರತಿಭಟಿಸಿದಾಗ ಮಾತ್ರ ಸರ್ಕಾರದ ನೀತಿಗಳು ಬದಲಾಗಲು ಸಾಧ್ಯ. ಸರ್ಕಾರಿ ಶಾಲೆಗಳ ವಿಲೀನೀಕರಣ ಹೆಸರಿನಲ್ಲಿ ಸರ್ಕಾರ ಗ್ರಾಮೀಣ ಸರ್ಕಾರಿ ಶಾಲೆಗಳ ಮುಚ್ಚುವ ಹುನ್ನಾರಕ್ಕೆ ನನ್ನ ವಿರೋಧವಿದೆ. 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಕನಿಷ್ಠ ಏಳು ಶಾಲೆಗಳನ್ನು ಸೇರಿಸಿ ಒಂದು ಮ್ಯಾಗ್ನೆಟ್ ಶಾಲೆಗೆ ವಿಲೀನ ಮಾಡುವ ನೀತಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಲಿದೆ ಎಂದರು.ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಒಂದೂವರೆಯಿಂದ 2 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲಾಗುತ್ತದೆ. ನರ್ಸರಿಯಿಂದ ಪಿಯುಸಿವರೆಗೆ ಒಂದೇ ಶಾಲೆ ಇರುತ್ತದೆ. ಇದೇ ಶಾಲೆಗೆ ನೀವು ಕಳುಹಿಸಬೇಕು. ಈಗಿರುವ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಯೋಜನೆಯಿಂದ ರಾಜ್ಯದಲ್ಲಿ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತದೆ. ಇದಕ್ಕೆ ನಾವು ಆಸ್ಪದ ಕೊಡಬಾರದು. ಈಗಿರುವ ಸರ್ಕಾರಿ ಶಾಲೆಗಳನ್ನೇ ಅಭಿವೃದ್ಧಿಪಡಿಸಬೇಕು. ಪುಸ್ತಕ, ಗ್ರಂಥಾಲಯ, ಡಿಜಿಟಲ್ ಬೋರ್ಡ್, ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಾಗಿ ನಡೆಯುವಂತಾಗಬೇಕು. ಸರ್ಕಾರಿ ಶಾಲೆಗಳ ಮಕ್ಕಳೂ ಉನ್ನತ ವ್ಯಕ್ತಿಗಳಾಗಬೇಕು. ಅತ್ಯುತ್ತಮ ಶಿಕ್ಷಣ ಇವರಿಗೂ ಸಿಗುವಂತಾಗಬೇಕು. ವಿಜ್ಞಾನಿಗಳು, ಐಎಎಸ್, ಕೆಎಎಸ್, ರಾಜಕಾರಣಿಗಳು ಸೇರಿದಂತೆ ಅತ್ಯುನ್ನತ ಹುದ್ದೆಗೆ ಹೋಗುವಂಥ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣ ನೀಡಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಕುಣಿಬೆಳಕೆರೆ ಗ್ರಾಮಸ್ಥರು ಹಾಜರಿದ್ದರು.
- - -(ಕೋಟ್) ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಬೇಕು. ಸ್ವಯಂಪ್ರೇರಿತರಾಗಿ ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನ ಸಂಪಾದನೆ ಮಾಡಲು ಸುಲಭವಾಗುತ್ತದೆ. ಇಂಥ ವಿದ್ಯಾರ್ಥಿಗಳನ್ನು ಐಎಎಸ್ ಮತ್ತು ಕೆಎಎಸ್ ನಂಥ ಉನ್ನತ ಹುದ್ದೆಗೇರಲು ತರಬೇತಿ ನೀಡಲು ಕಷ್ಟವಾಗದು. ಸಾಹಿತ್ಯ, ಸಂಸ್ಕೃತಿ, ನಾಡಿನ ಸಾಧಕರ ಜೀವನಗಾಥೆಯಂಥ ಪುಸ್ತಕ ಓದಲು ಶುರು ಮಾಡಿದರೆ ಅಭಿರುಚಿ ಬದಲಾಗುತ್ತಾ ಹೋಗುತ್ತದೆ.
- ಜಿ.ಬಿ. ವಿನಯ್ ಕುಮಾರ್, ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ.- - -
-07HRR.05:ಹರಿಹರ ತಾಲೂಕಿನ ಕುಣಿಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಗ್ರಾಮೀಣ ಪ್ರದೇಶ ಮಕ್ಕಳಿಗೆ ಏರ್ಪಡಿಸಿದ್ದ ವೃತ್ತಿ ಅವಕಾಶಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ಅವರನ್ನು ಗೌರವಿಸಲಾಯಿತು.