ಕರ್ನಾಟಕ ಲೋಕ ಸೇವಾ ಆಯೋಗದ(ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಕೆಪಿಎಸ್ಸಿಯ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಮತ್ತು ಹಾಲಿ ಸದಸ್ಯೆ ಬಿ.ವಿ.ಗೀತಾ ಅವರನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಲಯ 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ.) ವಶಕ್ಕೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಲೋಕ ಸೇವಾ ಆಯೋಗದ(ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಕೆಪಿಎಸ್ಸಿಯ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಮತ್ತು ಹಾಲಿ ಸದಸ್ಯೆ ಬಿ.ವಿ.ಗೀತಾ ಅವರನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಲಯ 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ.) ವಶಕ್ಕೆ ನೀಡಿದೆ.

ಈ ಇಬ್ಬರ ನಿವಾಸಗಳ ಮೇಲೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು ರಾತ್ರಿ ಬಂಧಿಸಿದ್ದರು. ತಡರಾತ್ರಿ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಬುಧವಾರ ಮಧ್ಯಾಹ್ನ 3ಗಂಟೆವರೆಗೆ ಇಬ್ಬರನ್ನೂ ಇ.ಡಿ.ವಶಕ್ಕೆ ನೀಡಿ ಆದೇಶಿಸಿದ್ದರು. ಬಳಿಕ ವಿಚಾರಣೆ ಮಾಡಿದ ಇ.ಡಿ.ಅಧಿಕಾರಿಗಳು ಬುಧವಾರ ಮಧ್ಯಾಹ್ನ ಇಬ್ಬರು ಆರೋಪಿಗಳನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆ ಸಂಬಂಧ 14 ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿದರು.

ಇದಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪಿಸಿದರು. ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಈ ವೇಳೆ ಇ.ಡಿ. ಪರ ವಕೀಲ ಮಧು ಎನ್‌.ರಾವ್‌ ಅವರು ಆರೋಪಿಗಳು ಇ.ಡಿ. ವಶಕ್ಕೆ ಏಕೆ ಬೇಕು? ಹಗರಣದಲ್ಲಿ ಇವರ ಪಾತ್ರವೇನು? ಇವರು ಅಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಿಕ್ಕಿರುವ ಸಾಕ್ಷ್ಯಗಳು ಮೊದಲಾದ ವಿಚಾರಗಳನ್ನು ಎಳೆ ಎಳೆಯಾಗಿ ನ್ಯಾಯಾಲಯದ ಗಮನಕ್ಕೆ ತಂದರು. ಮಧ್ಯಂತರ ಜಾಮೀನು ಅರ್ಜಿ ಪರಿಗಣಿಸದಂತೆ ಮನವಿ ಮಾಡಿದರು. ಸುಧೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅ.19ರ ವರೆಗೆ ಆರೋಪಿಗಳನ್ನು ಇ.ಡಿ.ವಶಕ್ಕೆ ನೀಡಿ ಆದೇಶಿಸಿತು.

ಇಬ್ಬರು ಆರೋಪಿಗಳು ಇ.ಡಿ ತನಿಖೆಗೆ ಸಹಕರಿಸಬೇಕು. ವಿನಾಕಾರಣ ವೈದ್ಯಕೀಯ ವರದಿ ತೆಗೆದುಕೊಂಡು ಬರಬಾರದು. ಸರಿಯಾಗಿ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯವು ಸೂಚಿಸಿತು. ಕಸ್ಟಡಿ ವೇಳೆ ಆರೋಪಿಗಳಿಗೆ ಅಗತ್ಯ ವೈದ್ಯಕೀಯ ತಪಾಸಣೆ ನಡೆಸಬೇಕು. ಔಷಧಿಗಳನ್ನು ಒದಗಿಸಬೇಕು ಎಂದು ನ್ಯಾಯಾಲಯವು ಇ.ಡಿ ಅಧಿಕಾರಿಗಳಿಗೆ ಸೂಚಿಸಿತು.

ಇದಕ್ಕೂ ಮುನ್ನ ವಾದ ಮಾಡಿದ ಶಿವಶಂಕರಪ್ಪ ಸಾಹುಕಾರ್‌ ಪರ ವಕೀಲರು, ಈ ಪ್ರಕರಣದಲ್ಲಿ ತಮ್ಮ ಕಕ್ಷಿದಾರರಿಗೆ ಯಾವುದೇ ಹಣದ ವರ್ಗಾವಣೆ ನಡೆದಿಲ್ಲ. ಯಾವುದೇ ಅಭ್ಯರ್ಥಿಗಳು ತಮ್ಮ ಕಕ್ಷಿದಾರರು ಹಣಕ್ಕೆ ಬೇಡಿಕೆ ಇರಿಸಿದ್ದರು ಹೇಳಿಕೆ ನೀಡಿಲ್ಲ. ಪರೀಕ್ಷೆ ಪ್ರಕ್ರಿಯೆ ನಿಯಂತ್ರಕರ ಅಧೀನದಲ್ಲಿ ಬರುತ್ತದೆ. ಹೀಗಾಗಿ ತಮ್ಮ ಕಕ್ಷಿದಾರರ ಪಾತ್ರವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಕಕ್ಷಿದಾರನಿಗೆ ಆರೋಗ್ಯ ಸಮಸ್ಯೆ:

ತಮ್ಮ ಕಕ್ಷಿದಾರರು ಹಿರಿಯ ನಾಗರಿಕರಾಗಿದ್ದಾರೆ. ರಕ್ತದೊತ್ತಡ, ಮಧುಮೇಹ, ಹೃದಯ ಸಮಸ್ಯೆ ಇದೆ. ತನಿಖೆಗೆ ಸಹಕಾರ ನೀಡಲಿದ್ದಾರೆ. ಈಗಾಗಲೇ ಹಲವು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಈಗ ಮಧ್ಯಂತರ ಜಾಮೀನು ನೀಡಿದರೆ ಕರೆದಾಗ ವಿಚಾರಣೆಗೆ ಹಾಜರಾಗುತ್ತಾರೆ. ಈ ಪ್ರಕರಣದಲ್ಲಿ ಪಿಎಂಎಲ್‌ಎ ವಿಷಯವೇ ಇಲ್ಲ. ಸಿಐಡಿಯಿಂದ ಬಹುತೇಕ ತನಿಖೆ ಮುಗಿದಿದೆ. ತಮ್ಮ ಕಕ್ಷಿದಾರರನ್ನು ಸಿಐಡಿ ವಿಚಾರಣೆ ನಡೆಸಿದೆ. ವಿಚಾರಣೆಗೆ ಕಕ್ಷಿದಾರರು ಸಹಕರಿಸಿದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆದರು.

ಇ.ಡಿ ಅಧಿಕಾರಿಗಳು ಈ ಹಿಂದೆ ತಮ್ಮ ಕಕ್ಷಿದಾರನ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಎರಡು ದಿನಗಳ ಕಾಲ ಶೋಧಿಸಿದ್ದರು. ಈ ವೇಳೆ ಅವರಿಗೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಇದೀಗ ಎರಡನೇ ಬಾರಿ ದಾಳಿ ಮಾಡಿ ಬಂಧಿಸಿ ಅನವಶ್ಯಕವಾಗಿ ವಶಕ್ಕೆ ಕೇಳುತ್ತಿದ್ದಾರೆ. ಮತ್ತೆ ವಶಕ್ಕೆ ಪಡೆಯುವ ಅಗತ್ಯವಿಲ್ಲ. ನೋಟಿಸ್‌ ಕೊಟ್ಟು ವಿಚಾರಣೆ ಮಾಡಬಹುದಿತ್ತು. ಹೀಗಾಗಿ ತಮ್ಮ ಕಕ್ಷಿದಾರರಿಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿದರು.

ನವರಾತ್ರಿ ಪ್ರಯುಕ್ತ ಗೀತಾ ಉಪವಾಸ

ಆರೋಪಿ ಗೀತಾ ಅವರು ನಾನು ನವರಾತ್ರಿ ಹಬ್ಬದ ಪ್ರಯುಕ್ತ ಮಗಳಿಗಾಗಿ ಉಪವಾಸ ವ್ರತ ನಡೆಸುತ್ತಿರುವುದಾಗಿ ನ್ಯಾಯಾಲಯದಲ್ಲಿ ಇ.ಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಸ್ಟಡಿ ಅವಧಿಯಲ್ಲಿ ಉಪವಾಸ ಮಾಡಲು ಅವಕಾಶವಿಲ್ಲ. ನೀವು ತನಿಖೆಗೆ ಸಹಕರಿಸಬೇಕು. ಉಪವಾಸ ಮಾಡಿದರೆ ಆರೋಗ್ಯದಲ್ಲಿ ಏರುಪೇರಾಗಲಿದೆ. ಹೀಗಾಗಿ ಉಪವಾಸ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರವನ್ನು ನಿಮ್ಮ ಕಕ್ಷಿದಾರರಿಗೆ ಸೂಕ್ತ ರೀತಿ ತಿಳಿಸುವಂತೆ ಅವರ ವಕೀಲರಿಗೂ ಇ.ಡಿ. ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ಬಂಧನ ಪ್ರಶ್ನಿಸಿ ಅರ್ಜಿ:ಅ.19ರಂದು ವಿಚಾರಣೆ

ಇದೇ ವೇಳೆ ಆರೋಪಿ ಶಿವಶಂಕರಪ್ಪ ಸಾಹುಕಾರ್‌ ಬಂಧನ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇ.ಡಿ ಅಕ್ರಮವಾಗಿ ಶಿವಶಂಕರಪ್ಪ ಅವರನ್ನು ಬಂಧಿಸಿದೆ. ಈ ಹಿಂದೆ ಎರಡು ದಿನ ದಾಳಿ ಮಾಡಿ ಪರಿಶೀಲಿಸಿದಾಗ ಯಾವುದೇ ದಾಖಲೆ ಸಿಕ್ಕಿಲ್ಲ. ಈಗ ತರಾತುರಿಯಲ್ಲಿ ಯಾವುದೇ ನೋಟಿಸ್‌ ನೀಡದೆ ಬಂಧಿಸಿದ್ದಾರೆ. ಹೀಗಾಗಿ ಈ ಬಂಧನ ಕ್ರಮವನ್ನು ಪರಿಶೀಲಿಸುವಂತೆ ಆರೋಪಿ ಪರ ವಕೀಕರು ಕೋರಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಇ.ಡಿ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯವು ಅ.19ರಂದು ಈ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.