ಕೇವಲ ಕಾನೂನುಗಳನ್ನು ಓದಿಕೊಂಡು ಅಧಿಕಾರ ನಡೆಸುವವನು ನಿಜವಾದ ಜನಸ್ನೇಹಿ ಅಧಿಕಾರಿಯಾಗಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಸರ್ಕಾರಿ ಕೆಲಸಕ್ಕೆ ಸೇರಿ ಅಧಿಕಾರಿ ಆಗುವ ಮೊದಲು ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯವನ್ನು ಕಡ್ಡಾಯವಾಗಿ ಓದಬೇಕು ಎಂದು ಹಿರಿಯ ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್‌ ತಿಳಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆಪಿಎಸ್ಸಿ ಮತ್ತು ಕೆಇಎ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಕೇವಲ ಕಾನೂನುಗಳನ್ನು ಓದಿಕೊಂಡು ಅಧಿಕಾರ ನಡೆಸುವವನು ನಿಜವಾದ ಜನಸ್ನೇಹಿ ಅಧಿಕಾರಿಯಾಗಲು ಸಾಧ್ಯವಿಲ್ಲ. ಅಧಿಕಾರಿ ಆಗುವ ಮುನ್ನ ಸಮಾಜದ ನಾಡಿಮಿಡಿತ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅರಿವಿರಬೇಕು. ಅದಕ್ಕೆ ಕುವೆಂಪು ಅವರ ಸಾಹಿತ್ಯವೇ ದಿಕ್ಸೂಚಿ ಎಂದು ಅವರು ಹೇಳಿದರು.ಸಮಾಜವನ್ನು ಉತ್ತಮವಾಗಿ ನಿರ್ಮಿಸುವ ಕನಸು ಹೊಂದಿರುವ ಯುವಕರು ಸದಾ ಉನ್ನತ ಹುದ್ದೆಗಳನ್ನು ಅಲಂಕರಿಸುವ ಗುರಿ ಹೊಂದಿರಬೇಕು. ಇಂತಹ ಉಚಿತ ತರಬೇತಿ ಶಿಬಿರಗಳು ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರದಾನವಾಗಲಿವೆ ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕೇವಲ ಕಠಿಣ ಪರಿಶ್ರಮವಷ್ಟೇ ಸಾಲದು, ಬದಲಿಗೆ ಧನಾತ್ಮಕ ಚಿಂತನೆ ಹಾಗೂ ಕಟ್ಟುನಿಟ್ಟಾದ ಸಮಯಪಾಲನೆ ಅತ್ಯಂತ ಅಗತ್ಯ. ಪ್ರತಿಯೊಬ್ಬ ಆಕಾಂಕ್ಷಿಯೂ ತಮ್ಮ ದಿನಚರಿಯಲ್ಲಿ ಒಂದು ನಿರ್ದಿಷ್ಟ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳಬೇಕು. ಸೂಕ್ತ ಯೋಜನೆಯಿಲ್ಲದೆ ಯಾವುದೇ ದೊಡ್ಡ ಗುರಿಯನ್ನು ತಲುಪಲುಸಾಧ್ಯವಿಲ್ಲ ಎಂದು ಅವರು ತಿಳಿಸಿದರು.ಕೇವಲ ಸಾಮಾನ್ಯ ಜ್ಞಾನಕ್ಕೆ ಸೀಮಿತವಾಗದೆ, ಕಳೆದ ಹತ್ತು ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಆಧರಿಸಿ ವ್ಯವಸ್ಥಿತವಾಗಿ ಸಿದ್ಧತೆ ನಡೆಸಬೇಕು. ನಿರಂತರ ಪ್ರಯತ್ನ ಮತ್ತು ಬಲವಾದ ಇಚ್ಛಾಶಕ್ತಿಯಿಂದ ಕಷ್ಟದ ಹಾದಿಯಲ್ಲೂ ಯಶಸ್ಸು ಗಳಿಸಬಹುದು ಎಂದರು.ಇದೇ ವೇಳೆ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸಂಸ್ಥೆಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಕಠಿಣ ಪರಿಶ್ರಮದಿಂದಯಶಸ್ಸು ಸಾಧಿಸಬೇಕು. ಮತ್ತು ಸಮಾಜದ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್‌ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲು ಕೇವಲ ಪಠ್ಯಪುಸ್ತಕ ಓದುವುದಕ್ಕೆ ಸೀಮಿತವಾಗದೆ, ವಿಷಯಗಳನ್ನು ಅರ್ಥೈಸಿಕೊಂಡು ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಪರೀಕ್ಷೆಯ ಸಂದರ್ಭದಲ್ಲಿ ಸಮಯವನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು, ಪ್ರಮುಖ ಅಂಶಗಳನ್ನು ಪುನರಾವರ್ತನೆ ಮಾಡುವುದು ಅಗತ್ಯ ಎಂದು ಹೇಳಿದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯ ಮುಕ್ತ ವಿವಿ ವ್ಯವಸ್ಥಾಪನ ಮಂಡಳಿ ಸದಸ್ಯ ಆರ್. ಮಂಜು, ಕುಲಸಚಿವ ಪ್ರೊ.ಎಸ್.ಕೆ. ನವೀನ್‌ ಕುಮಾರ್‌, ಡೀನ್‌ ಪ್ರೊ.ಎಂ. ರಾಮನಾಥಂ ನಾಯ್ಡು, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಮೊದಲಾದವರು ಇದ್ದರು.----ಬಾಕ್ಸ್.. ಮೊದಲು ಸೃಜಲಶೀಲತೆ ಬೆಳೆಸಿಕೊಳ್ಳಬೇಕು- ಯದುವೀರ್ಸ್ಪರ್ಧಾರ್ಥಿಗಳು ಅಧಿಕಾರಿ ಆಗುವ ಮೊದಲು ಸೃಜಲಶೀಲತೆ ಬೆಳೆಸಿಕೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.ಸಮಾಜದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ. ನೀವು ಆಡಳಿತ್ಮಾತಕ ಹುದ್ದೆಗೆ ಬಂದಾಗ ಅಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಚೌಕಟ್ಟಿನಲ್ಲಿ ನೀವು ಕೆಲಸ ಮಾಡಬೇಕಾಗುತ್ತದೆ. ಶಾಸಕಾಂಗ ಏನೇ ಜಾರಿಗೆ ತಂದರೂ ಅದು ಕಾರ್ಯರೂಪಕ್ಕೆ ಬರುವುದು ಕಾರ್ಯಾಂಗದ ಆಡಳಿತಾತ್ಮಕ ಅಧಿಕಾರಿಗಳಿಂದ. ಹೀಗಾಗಿ, ನೀವು ಸೃಜಲಶೀಲತೆ ಬೆಳಿಸಿಕೊಳ್ಳಿ ಎಂದು ಅವರು ಹೇಳಿದರು.