ಪಶುವೈದ್ಯಾಧಿಕಾರಿಗಳ ಹುದ್ದೆ ಮಾರಾಟ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಯಲ್ಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರಿಗೆ ಒಂದು ಕೋಟಿ ರು. ನಗದು ಸಂದಾಯವಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಶುವೈದ್ಯಾಧಿಕಾರಿಗಳ ಹುದ್ದೆ ಮಾರಾಟ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಯಲ್ಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರಿಗೆ ಒಂದು ಕೋಟಿ ರು. ನಗದು ಸಂದಾಯವಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ಈ ಹಣವನ್ನು ಕೆಪಿಎಸ್‌ಸಿ ಸಿಬ್ಬಂದಿ ಮೂಲಕ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರಿಗೆ ಬಸವರಾಜ್ ಕನ್ನಾಳೆ ಗ್ಯಾಂಗ್ ತಲುಪಿಸಿದ್ದು, ಈ ಹಣ ಪೂರೈಕೆ ಸಂಬಂಧ ಸಿಐಡಿ ಮುಂದೆ ಕೆಪಿಎಸ್‌ಸಿ ಸಿಬ್ಬಂದಿ ಗುಟ್ಟು ರಟ್ಟು ಮಾಡಿದ್ದಾರೆ ಎನ್ನಲಾಗಿದೆ.

ಪಶುವೈದ್ಯಾಧಿಕಾರಿ ಹುದ್ದೆಗಳ ಬಿಕರಿ ವಿಚಾರವಾಗಿ ಇದೇ ವರ್ಷದ ಜನವರಿಯಲ್ಲಿ ಜ್ಞಾನೇಂದ್ರ ಮತ್ತು ಬಸವರಾಜು ಮಧ್ಯೆ ಹಲವು ಬಾರಿ ಮಾತುಕತೆ ನಡೆದಿದೆ. ಆದರೆ ಅಭ್ಯರ್ಥಿಗಳ ಜತೆ ನೇರವಾಗಿ ಜ್ಞಾನೇಂದ್ರ ಡೀಲ್ ಕುದುರಿಸಿಲ್ಲ. ತನ್ನ ನಂಬಿಕಸ್ಥ ಬಂಟ ಬಸವರಾಜ್ ಕನ್ನಾಳೆ ಮೂಲಕವೇ ಅವರು ವ್ಯವಹರಿಸಿದ್ದು. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಐಎಎಸ್ ಅಧಿಕಾರಿ ನಡುವೆ ಮಧ್ಯವರ್ತಿಯಾಗಿ ಕನ್ನಾಳೆ ಕೆಲಸ ಮಾಡಿದ್ದಾನೆ. ಹಣದ ವ್ಯವಹಾರ ಸಹ ಆತನೇ ನಡೆಸಿದ್ದಾನೆ ಎನ್ನಲಾಗಿದೆ.

ಹೀಗೆ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಹಣವನ್ನು ಬ್ಯಾಗ್‌ನಲ್ಲಿ ತುಂಬಿ ಜ್ಞಾನೇಂದ್ರ ಅವರಿಗೆ ಕನ್ನಾಳೆ ಗ್ಯಾಂಗ್ ತಲುಪಿಸಿದೆ. ತನ್ನ ಸಿಬ್ಬಂದಿ ಕಳುಹಿಸಿ ಕೆಪಿಎಸ್‌ಸಿ ಕಚೇರಿಗೆ ಆ ಹಣವನ್ನು ಅವರು ತರಿಸಿಕೊಂಡಿದ್ದರು. ಈ ಸಂಬಂಧ ಕೆಲ ಸಿಬ್ಬಂದಿಯನ್ನು ಸಿಐಡಿ ವಿಚಾರಣೆಗೊಳಪಡಿಸಿದೆ ಎಂದು ಮೂಲಗಳು ಹೇಳಿವೆ.ಸಿಸಿಟಿವಿ ಕ್ಯಾಮೆರಾ ಪರಿಶೀಲನೆ:

ಈ ಅಕ್ರಮ ಶಂಕೆ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಆ‍ವರಣದಲ್ಲಿ ಅಳ‍ವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಸಿಐಡಿ ಜಪ್ತಿ ಮಾಡಿ ಪರಿಶೀಲಿಸಿದೆ. ಆದರೆ ಮೂರು ತಿಂಗಳವರೆಗೆ ಮಾತ್ರ ಆ ಕ್ಯಾಮೆರಾಗಳು ದತ್ತಾಂಶ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜನವರಿಯಲ್ಲಿ ತಿಂಗಳ ಡೇಟಾ ಪತ್ತೆಯಾಗಿಲ್ಲ. ಆದರೆ ತಾಂತ್ರಿಕತೆ ಬಳಸಿ ದತ್ತಾಂಶ ಸಂಗ್ರಹಕ್ಕೆ ಸೈಬರ್ ತಜ್ಞರ ನೆರವನ್ನು ಸಿಐಡಿ ಪಡೆದಿದೆ ಎಂದು ತಿಳಿದು ಬಂದಿದೆ.