ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
‘ಸಮೃದ್ಧ ಬಾಳ್ವೆಗೆ ಸಮಗ್ರ ಕೃಷಿ’ ಎಂಬ ಧ್ಯೇಯ ವಾಕ್ಯದೊಂದಿಗೆ ತಾಲೂಕಿನ ವಿ.ಸಿ.ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನ.26 ಮತ್ತು 27 ರಂದು ಎರಡು ದಿನಗಳ ಕಾಲ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಎಸ್.ಶಿವರಾಮು ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಮಂಡ್ಯ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾ ವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಲಯದ ರೈತರಿಗಾಗಿ ಮೇಳದಲ್ಲಿ 3 ಜಿಲ್ಲೆಗಳ ಸ್ಥಳ ಆಧಾರಿತ ಕೃಷಿ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆಗಳನ್ನು ಮೇಳದಲ್ಲಿ ಆಯೋಜಿಸಲಾಗಿದೆ ಎಂದರು.
ರೈತರ ಸುಸ್ಥಿರತೆ ಕಾಪಾಡಲು ಸಮಗ್ರ ಕೃಷಿ, ವಾರ್ಷಿಕ ಬೆಳೆಗಳ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆಯನ್ನು ಮಾಡಿದಾಗ ಮಾತ್ರ ಹವಮಾನ ವೈಫರಿತ್ಯ ಉಂಟಾದರು ಕೂಡ ರೈತರ ಆದಾಯ ದ್ವಿಗುಣಗೊಳಿಸಲು ಸಮಗ್ರ ಕೃಷಿ ವಿಧಾನ ಸಹಾಯ ಮಾಡುವ ಬಗ್ಗೆ ರೈತರಿಗೆ ಮಾಹಿತಿ ಒದಗಿಸಲಾಗುವುದು ಎಂದರು.ಕೃಷಿ ಮೇಳದಲ್ಲಿ ಈ ಬಾರಿ ಪ್ರಮುಖ ಆಕರ್ಷಣೆಗಳಿದ್ದು, ಕೃಷಿ ವಿವಿಯಿಂದ ಬಿಡುಗಡೆ ಮಾಡಲಾಗಿರುವ ಮುಸುಕಿನ ಜೋಳದ ಅಭಿವೃದ್ಧಿ ತಳಿ, ಹಲಸಂದೆ ಕೆ.ಬಿ.ಸಿ.-12, ಎಣ್ಣೆ ಕಾಳು ಸೂರ್ಯಕಾಂತಿ ಕೆ.ವಿ.ಎಸ್.ಎಚ್ -90 ಮತ್ತು ದೀರ್ಘವಾದ ಹಾಗೂ ಹೆಚ್ಚು ಬೆಳೆ ಕೊಡುವ ಪಿ.ಎಲ್.ಬಿ.- 342 ಮೇವಿನ ಬೆಳೆಯಾದ ನಾಲ್ಕು ಪ್ರಮುಖ ತಳಿಗಳನ್ನು ಅನಾವರಣಗೊಳಿಸಲಾಗುವುದು ಎಂದರು.
ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಶಿಫಾರಸ್ಸು ಮಾಡಲಾಗಿರುವ ಭತ್ತ, ರಾಗಿ ಮತ್ತು ಸಿರಿಧಾನ್ಯ, ಮುಸುಕಿನ ಜೋಳದಲ್ಲಿ ಹೈಬ್ರಿಡ್ ತಳಿ, ಅತ್ಯುತ್ತಮ ಇಳುವರಿ ಕೊಡುವ ಹಾಗೂ ಹೆಚ್ಚು ಸಕ್ಕರೆ ಅಂಶವಿರುವ ಕಬ್ಬಿನ ತಳಿಯಾದ ಬಾಹುಬಲಿ- 517, ಮೇವಿನ ಬೆಳೆ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ನೀರಾವರಿ ಪದ್ಧತಿ ಹಾಗೂ ಇನ್ನಿತರೆ ರೈತರಿಗೆ ಬೇಕಾದ ಮುಖ್ಯ ವಿಷಯಗಳ ಬಗ್ಗೆ ಪ್ರಾತ್ಯಾಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದರು.ಬಂಬಾರ ಕಡಲೆ ಮತ್ತು ಹಡಲೆ ರಾಗಿ (ಬಾಬ್ಸ್ ತಿಯರ್) ಪರಿಚಯ:
ಮೇಳದಲ್ಲಿ ಆರೋಗ್ಯದ ದೃಷ್ಟಿಯಿಂದ ಉಪಯೋಗವಾಗುವಂತಹ ಬಂಬಾರ ಮತ್ತು ಹಡಲೆ ರಾಗಿ (ಬಾಬ್ಸ್ ತಿಯರ್) ಎಂಬ 2 ಬೆಳೆಗಳನ್ನು ಹೊಸದಾಗಿ ಪರಿಚಯ ಮಾಡುವುದರ ಜೊತೆಗೆ ಬೆಳೆಸುವ ವಿಧಾನವನ್ನು ತಿಳಿಸಲಾಗುತ್ತದೆ. ಅಡಲೆ ರಾಗಿಯಲ್ಲಿ ಅಧಿಕ ಪ್ರೊಟೀನ್ ಅಂಶ ಇದ್ದು, ಮೇಘಾಲಯ, ಮಿಜೋರಾಮ್, ಸಿಕ್ಕಿಂನಲ್ಲಿ ಈ ಬೆಳೆಯನ್ನು ಬೆಳೆದು ಗಂಜಿ ರೂಪದಲ್ಲಿ ಬಳಸಲಾಗುತ್ತದೆ. ಹಡಲೆ ರಾಗಿಯು ಮಾನವನ ಮೂಳೆಯ ಸಾಂದ್ರತೆ ಕಾಪಾಡಲು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹಾಸ್ಟಿಯೋ ಪೊರೋಸಿಸ್ ರೋಗವನ್ನು ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ ಎಂದರು.ಬಂಬಾರ ನೆಲೆಗಡಲೆಯು ಹಲಸಂದೆ ಬೆಳೆಯ ಜಾತಿಗೆ ಸೇರಿದ್ದಾಗಿದ್ದು, ಬಂಬಾರವು ನೆಲಗಡಲೆಯ ರೀತಿ ನೆಲದಲ್ಲಿ ಬಿಡುವುದರಿಂದ ಇದು ವಿಶೇಷವಾಗಿದೆ. ಬಂಬಾರ ನೆಲಗಡಲೆಯಲ್ಲಿ ಪೊಟ್ಯಾಶಿಯಂ ಅಂಶ ಜಾಸ್ತಿ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಹಳ ಉಪಯುಕ್ತವಾಗುತ್ತದೆ ಎಂದರು.
ಬೆಂಗಳೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ ಮಾತನಾಡಿ, ಮೇಳದಲ್ಲಿ 200 ಮಳಿಗೆಗಳಿದ್ದು, ಕೃಷಿ ಹಾಗೂ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ಜೊತೆಗೆ ಬ್ಯಾಂಕ್ ವತಿಯಿಂದ ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದರು.25 ಸಂಶೋಧಕರು ವಿಶ್ವ ವಿದ್ಯಾನಿಲಯದಿಂದ ಒಟ್ಟು 20 ಮಳಿಗೆಗಳಲ್ಲಿ ರೈತರಿಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಸ್ವಸಹಾಯ ಸಂಘ, ನರ್ಸರಿ, ಸೀಡ್ಸ್ ಕಂಪನಿ, ಸ್ವಂತ ಉದ್ಯಮ ಮಾಡುತ್ತಿರುವ ರೈತರು, ನೂತನ ಕೃಷಿ ಪರಿಕರಗಳು ಸೇರಿದಂತೆ ಅನೇಕ ಅಂಶಗಳನ್ನು ರೈತರ ಸದುಪಯೋಗಕ್ಕೆ ಆಯೋಜಿಸಲಾಗಿದೆ ಎಂದರು.
ಮಂಡ್ಯ ವಿ.ಸಿ.ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್ ಮಾತನಾಡಿ, ಕೃಷಿಯಲ್ಲಿ ರಾಜಮುಡಿ ತಳಿ ಭತ್ತವು ಬಹಳ ಗುಣಮಟ್ಟದ ತಳಿಯಾಗಿದೆ. ಇದು ಎತ್ತರವಾಗಿ ಬೆಳೆಯುವ ಹಾಗೂ ಕೊಟ್ಟಿಗೆ ಗೊಬ್ಬರದಲ್ಲಿ ಮಾತ್ರ ಬೆಳೆಯಾಗಿತ್ತು. ರಾಜಮುಡಿ ಬೆಳೆಯು 1 ವರ್ಷಕ್ಕೆ 1 ಬೆಳೆಯನ್ನು ಬೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ನಾವು ವಾರ್ಷಿಕವಾಗಿ 2 ಬೆಳೆ ಬೆಳೆಯಲು ರಾಜಮುಡಿ ತಳಿಯಲ್ಲಿ ಗುಣಮಟ್ಟತೆಯನ್ನು ಕಾಪಾಡುವ ಜೊತೆಗೆ ಅದರ ಎತ್ತರ ಹಾಗೂ ಅವಧಿಯನ್ನು ಕಡಿಮೆಗೊಳಿಸಲಾಗಿದೆ. ಸಾವಯವ ಹಾಗೂ ರಾಸಾಯನಿಕ ಸಮಗ್ರ ಗೊಬ್ಬರದಿಂದ ಬೆಳೆಯುವ ಜೊತೆಗೆ ಹಿಂಗಾರು ಹಾಗೂ ಮುಂಗಾರು 2 ಹವಾಮಾನಕ್ಕೂ ಹೊಂದಿಕೆಯಾಗುತ್ತದೆ ಎಂದರು.ಇಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರವನ್ನು ಕೃಷಿಯಲ್ಲಿ ರೈತರು ಹೆಚ್ಚು ಉಪಯೋಗಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರದ ಬಳಕೆಯನ್ನು ಊಟದ ಜೊತೆ ಉಪ್ಪಿನಕಾಯಿಯ ರೀತಿಯಲ್ಲಿ ಬಳಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡ್ಯ ವಿಸಿ ಫಾರ್ಮ ಕೃಷಿ ಮಹಾವಿದ್ಯಾಲಯ ಡೀನ್ (ಕೃಷಿ ) ಹಾಗೂ ಆವರಣದ ಮುಖ್ಯಸ್ಥರಾದ ಡಾ.ಪಿ.ಎಸ್. ಫಾತಿಮಾ, ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಎನ್.ಶಿವಕುಮಾರ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ ಕಮಲಾಬಾಯಿ ಕೂಡಗಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))