ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ತುರ್ತು 5 ಟಿಎಂಸಿ ನೀರು ಹರಿಸಿರಿ, ಇಲ್ಲಾ ನಮ್ಮ ಕೃಷ್ಣಾ ನದಿಯಿಂದಲಾದರೂ ನೀರು ನದಿಗೆ ಹರಿಸಿ ಜನ- ಜಾನುವಾರು ಪ್ರಾಣ ಸಂರಕ್ಷಣೆ ಮಾಡುವಂತೆ ಆಗ್ರಹಿಸಿ ನದಿ ತೀರದಲ್ಲ್ಲಿ ಶುರುವಾಗಿರುವ ರೈತರು, ಸಾರ್ವಜನಿಕರ ಹೋರಾಟ ದಿನಗಳೆದಂತೆ ಆಂದೋಲನ ಸ್ವರೂಪ ಪಡೆಯುತ್ತಿರೋದರಿಂದ ಈ ಬೆಳವಣಿಗೆ ಸಹಜವಾಗಿಯೇ ಆಡಳಿತದ ಹಂತದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಏತನ್ಮಧ್ಯೆ ಕಲಬುರಗಿ ಪ್ರಾ. ಆಯುಕ್ತ ಕೃಷ್ಣಾ ಬಾಜಪೇಯಿಯವರು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಪತ್ರ ಬರೆದು ನಾರಾಯಣಪೂರ ಅಥವಾ ಆಲ್ಮಟ್ಟಿಯಿಂದ ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಸಿ ಅಫಜಲ್ಪುರ ತಾಲೂಕಿನ ಮಣ್ಣೂರಿನಿಂದ ಭೀಮಾ ನದಿಗೆ ಸೇರುವಂತೆ ಮಾಡಿ ನದಿ ತೀರದಲ್ಲಿ ಭುಗಿಲೆದ್ದಿರುವ ನೀರಿನ ಹಾಹಾಕಾರ ಶಮನಕ್ಕೆ ಮುಂದಾಗಿದ್ದಾರೆ.ಅಫಜಲ್ಪುರ ಪಟ್ಟಣದಲ್ಲಿ ಶಿವಕುಮಾರ್ ನಾಟೀಕಾರ್ ನೇತೃತ್ವದಲ್ಲಿ ಹೋರಾಟಗಾರರು ಆಮರಣ ನಿರಶನ ಕೈಗೊಂಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನವೇ ಕುಡಿಯುವ ನೀರಿನ ಉದ್ದೇಶಕ್ಕಾದರೂ ನಾರಾಯಣಪೂರ ಜಲಾಶಯದಿಂದ ಕೃಷ್ಣಾ ನೀರನ್ನು ಭೀಮ ನದಿಗೆ ಹರಿಸುವಂತೆ ಕೋರಿ 2 ಪತ್ರ ಬರೆದು ಪ್ರಯತ್ನಕ್ಕಿಳಿದಿದ್ದಾರೆ. ಆದರೆ ಪ್ರಾ. ಆಯುಕ್ತರ ಪತ್ರಕ್ಕೆ ಕೆಬಿಜೆಎನ್‌ಲ್‌ನಿಂದ ನಕಾರಾತ್ಮಕ ಉತ್ತರ ಬಂದಿರೋದು ಆತಂಕ ಹೆಚ್ಚಿಸಿದೆ.
ಸದ್ಯಕ್ಕೆ ಭೀಮಾ ನದಿಗೆ ನೀರು ಹರಿಸಲಾಗದು: ನಾರಾಯಣಪುರ ಜಲಾಶಯದಿಂದ ಭೀಮಾ ನದಿಯ ಮುಖಾಂತರ ಸೊನ್ನ ಬಾಂದಾರಿಗೆ ನೀರು ಹರಿಸಲು ಕೆಬಿಜೆಎನ್‌ಎಲ್ ಕಾಲುವೆ ನಂಬರ್ 48 ಬಳಗಾನೂರ. ನಂ 11 ಕುಳಕಮಡಿ, ಎಸ್ಕೇಪ್ ನಂಬರ್ 50ನೇ ಕಿಮೀ ಅಥವಾ ಇಂಡಿ ಶಾಖಾ ಕಾಲುವೆ ಡಿಸ್ಟ್ರಿಬ್ಯೂಟರಿ- 13, 14 ಅಥವಾ ಇತರೆ ಕಾಲುವೆಗಳ ಮುಖಾಂತರ ಭೀಮಾ ನದಿ ಮುಖಾಂತರ ಸೊನ್ನ ಬಾಂದಾರಿಗೆ 2 ಟಿಎಂಸಿ ನೀರು ಹರಿಸುವಂತೆ ಕಬುರಗಿ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಪ್ರಾ. ಆಯುಕ್ತರು ಪತ್ರ ಬರೆದು ನೀರನ್ನು ಹರಿಸುವ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಸುವಂತೆ ಕೋರಿದ್ದರು. ಪ್ರಸ್ತುತ ಅಣೆಕಟ್ಟೆಯಲ್ಲಿನ ನೀರಿನ ಸಂಗ್ರಹದ ಬಗ್ಗೆ ತಮಗೆ ಅಂಕಿ ಸಂಖ್ಯೆ ಸಮೇತ ವಿವರಿಸಿದ್ದು ಹೆಚ್ಚುವರಿ ಯಾವುದೇ ಸಂಗ್ರಹವಿಲ್ಲದೇ ಇರೋದರಿಂದ ಸೊನ್ನ ಬ್ಯಾರೇಜ್‌ಗೆ 2 ಟಿಎಂಸಿ ನೀರು ಹರಿಸುವ ಸಾಧ್ಯತೆಗಳಿರುವುದಿಲ್ಲವೆಂದು ನಾರಾಯಣಪುರ ಜಲಾಶಯದ ಮುಖ್ಯ ಇಂಜಿನಿಯರ್ ಮಾ.18ರಂದೇ ಪತ್ರ ಬರೆದು ಪ್ರಾ. ಆಯುಕ್ತರ ಗಮನ ಸೆಳೆದಿದ್ದಾರೆ.ಮಾನವೀಯ ನೀರು ಹರಿಯಲು ಬೇಕು ರಾಜಕೀಯ ಇಚ್ಛಾಶಕ್ತಿ: ಹಿಂದೆ ಪಕ್ಕದ ಸೊಲ್ಲಾಪುರಕ್ಕೆ ನೀರಿನ ಬರ ಕಾಡಿದಾಗ ಕೃಷ್ಣೆಯ ನೀರನ್ನೇ ಇಂಡಿ ಶಾಖಾ ಕಾಲುವೆ ಮೂಲಕ ಹರಿಸಿ ಕರ್ನಾಟಕ ಸಹಕರಿಸಿತ್ತು. ಇದೀಗ ಇದೇ ಮಾನವೀತೆ ಮಹಾರಾಷ್ಟ್ರ ಸರ್ಕಾರ ಪ್ರದರ್ಶಿಸಬೇಕಿದೆ ಎಂಬ ಮಾತು ಕೇಳಿ ಬರುತ್ತಿವೆ. ಉಜನಿ ಜಲಾಶಯದಿಂದ ತುರ್ತು ಪರಿಸ್ಥಿತಿ ಎಂದು ಕುಡಿಯಲು ನೀರು ಮಹಾರಾಷ್ಟ್ರ ಹರಿಸಬೇಕು, ಇಲ್ಲವಾದಲ್ಲಿ ತುರ್ತಾಗಿ ರಾಜ್ಯ ಸರಕಾರ ಕೃಷ್ಣೆಯ ನೀರನ್ನಾದರೂ ಕುಡಿವ ಉದ್ದೇಶಕ್ಕೆ ಭೀಮಾ ನದಿಗೆ ಹರಿಸಲೇಬೇಕು, ಇಲ್ಲದೆ ಹೋದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ನೀರಿನ ಯೋಜನೆಗಳು ಬಂದ್ ಆಗಿ ಉಂಟಾಗಿರುವ ಹಾಹಾಕಾರ ಬರುವ ದಿನಗಳಲ್ಲಿ ಇನ್ನೂ ಹೆಚ್ಚಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಎಂವೈ ಪಾಟೀಲ್ ಸೇರಿದಂತೆ ಜಿಲ್ಲೆಯ ನಿಯೋಗ ಸಿಎಎಂ , ಡಿಸಿಎಂ ಬಲಿ ಹೋಗಿ ಜನರ ನೀರಿನ ಬವಣೆ ಮನವರಿಕೆ ಮಾಡಿಕೊಟ್ಟು ಮಾನವೀಯ ನೀರು ಭೀಮೆಯಲ್ಲಿ ಹರಿಯುವಂತೆ ಮಾಡಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.
ಡಿಸಿಎಂ ಡಿಕೆಶಿ ಕೊಟ್ಟ ಮಾತು ಉಳಿಸಿಕೊಳ್ಳುವರೆ?: ಕಳೆದ ವಾರ ಕಲಬುರಗಿಗೆ ಬಂದಾಗ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾಗಿರುವ ಡಿಕೆ ಶಿವಕುಮಾರ್ ಬಹಿರಂಗವಾಗಿ ವೇದಿಕೆಯಲ್ಲೇ ಭೀಮಾ ನದಿ ನೀರಿನ ಸಮಸ್ಯೆ ಬಗ್ಗೆ ತಾವು ಕೂಲಂಕುಷ ಚರ್ಚಿಸಿ, ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ಪರಿಹಾರ ನೀಡೋದಾಗಿ ನೀಡಿದ್ದ ಭರವಸೆ ವಾರ ಕಳೆದರೂ ಹಾಗೇ ಇದೆ. ಶಾಸಕ ಎಂವೈ ಪಾಟೀಲರು ಭೀಮಾ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದು ನೀರು ಬಿಡಿಸುವಂತೆ ಕೋರಿದ್ದರು. ಶಿವಕುಮಾರ್ ಇದೀಗ ತಾವು ನೀಡಿದ ವಚನ ಉಳಿಸಿಕೊಳ್ಳಬೇಕಿದೆ.ಭೀಮಾ ನದಿಗುಂಟ ನೀರಿಲ್ಲದೆ ಬವಣೆ ಹೆಚ್ಚುತ್ತಿರೋದು ಗಮನದಲ್ಲಿದೆ, ಹೋರಾಟಗಳೂ ಶುರುವಾಗಿವೆ. ನಾನು ಬೆಳಗಾವಿ ಪ್ರಾ. ಆಯುಕ್ತರು, ಸರಕಾರದ ಜಲಸಂಪನ್ಮೂಲ ಎಸಿಎಸ್ ಅವರಿಗೂ ಪತ್ರ ಬರೆದು ಗಮನ ಸೆಳೆದಿರುವೆ. ನಿರಂತರ ದೂರವಾಣಿ ಸಂಪರ್ಕದಲ್ಲಿರುವೆ. ಕೃಷ್ಣೆಯ ನೀರು ಭೀಮಾಗೆ ಹರಿಸುವ ಪ್ರಯತ್ನ ಮುಂದುವರಿದಿದೆ. ನಾರಾಯಣಪುರದಿಂದ ನೀರು ಬಿಡೋದು ಅಸಾಧ್ಯವೆಂಬ ಪತ್ರ ಬಂದರೂ ಪ್ರಯತ್ನ ಕೈಬಿಟ್ಟಿಲ್ಲ. ಆಲ್ಮಟ್ಟಿಯಿಂದಲಾದರೂ ಐಬಿಸಿ ಕಾಲುವೆ, ವಿತರಣಾ ಕಾಲುವೆ ಬಳಸಿ ಇಂಡಿ ಅಗರಖೇಡ, ಮಣ್ಣೂರ ನದಿ ಪಾತಳಿಗುಂಟ ನೀರು ಹರಿಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಸರಕಾರದ ಹಂತದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ಹಂತದಲ್ಲಿಯೂ ಈ ದಿಶೆಯಲ್ಲಿ ಪ್ರಯತ್ನ ಸಾಗಿವೆ.- ಕೃಷ್ಣಾ ಬಾಜಪೇಯಿ, ಪ್ರಾ. ಆಯುಕ್ತರು, ಕಲಬುರಗಿ ಕಂದಾಯ ವಿಭಾಗ