ಕೃಷ್ಣ ನಗರಿ ಉಡುಪಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ ನಡೆದಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕೃಷ್ಣ ನಗರಿ ಉಡುಪಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ ನಡೆದಿದೆ. ಕೃಷ್ಣ ಭಕ್ತರು ಗುರುವಾರ ಉಪವಾಸ ವ್ರತ, ಜಪ, ಪಾರಾಯಣಗಳನ್ನು ನಡೆಸುತ್ತಿದ್ದು, ಕೃಷ್ಣಮಠದಲ್ಲಿ ಕೃಷ್ಣಾವತಾರದ ಗಳಿಗೆಯಲ್ಲಿ ಪಾವನ ಅರ್ಘ್ಯ ಪ್ರದಾನಕ್ಕೆ ಕಾಯುತಿದ್ದಾರೆ.ಗುರುವಾರ ಶ್ರಾವಣ ಮಾಸದ ಅಷ್ಟಮಿ, ಶುಕ್ರವಾರ ಮತ್ತು ಶನಿವಾರ ಮಧ್ಯರಾತ್ರಿ ಚಂದ್ರೋದಯದ 12.12 ಗಂಟೆಗೆ ರೋಹಿಣಿ ನಕ್ಷತ್ರದ ಸಹಯೋಗದಲ್ಲಿ ಶೀರೂರು ಮಠದ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕೃಷ್ಣನಿಗೆ ಮಹಾಪೂಜೆ ನೆರವೇರಿಸಿ, ಪ್ರಧಾನ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ನಂತರ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತರಿಗೂ ಕೃಷ್ಣಾರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗುತ್ತದೆ.
ಈ ಮಹಾಪೂಜೆಯ ಸಂದರ್ಭದಲ್ಲಿ ಬಾಲಕೃಷ್ಣನಿಗೆ ವೈವಿಧ್ಯಮಯ ನೈವೇದ್ಯಗಳನ್ನು ಮಾಡಲಾಗುತ್ತದೆ. ಅದಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಬಾಣಸಿಗರು 2.50 ಲಕ್ಷಕ್ಕೂ ಅಧಿಕ ಚಕ್ಕುಲಿ ಹಾಗೂ ಗುಂಡಿಟ್ಟು, ಎಳ್ಳುಂಡೆ, ಅರಳುಂಡೆ, ಕಡಲೆಉಂಡೆ, ರವೆಉಂಡೆ ಸೇರಿ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿದ್ದಾರೆ.ಶನಿವಾರ ವೈಭವದ ವಿಟ್ಲಪಿಂಡಿ: ಕೃಷ್ಣಲೀಲೋತ್ಸವ - ಮೊಸರುಕುಡಿಕೆಗೆ ಜನಸಾಗರವೇ ಸೇರಲಿದ್ದು, ಅವರಿಗೆ ಪ್ರಸಾದ ರೂಪದಲ್ಲಿ 1.50 ಲಕ್ಷ ಚಕ್ಕುಲಿ ಉಂಡೆಗಳನ್ನು ವಿತರಿಸಲಾಗುತ್ತದೆ. ಅಲ್ಲದೇ ನಗರದ ವಿವಿಧ ಶಾಲೆಗಳಿಗೂ ಕೃಷ್ಣನ ಪ್ರಸಾದ ರೂಪದಲ್ಲಿ ಕಳಿಸಿಕೊಡಲಾಗುತ್ತದೆ.
ಉಡುಪಿ ಕೃಷ್ಣ ಲೀಲೋತ್ಸವದ ಪ್ರಮುಖ ಆಕರ್ಷಣೆ ಹುಲಿವೇಷ ಕುಣಿತ, ಈ ಬಾರಿ ಸುಮಾರು 20ಕ್ಕೂ ಹೆಚ್ಚು ತಂಡಗಳು ಹುಲಿವೇಷ ಧರಿಸುತಿದ್ದು, ಉಡುಪಿಯ ಬೀದಿಗಳಲ್ಲಿ ಶುಕ್ರವಾರ ಮತ್ತು ಶನಿವಾರ ನೂರಾರು ಹುಲಿಗಳು ಅಬ್ಬರಿಸಲಿವೆ. ನಗರದ ಅನೇಕ ಕಡೆಗಳಲ್ಲಿ ಲಕ್ಷಾಂತರ ರು. ಬಹುಮಾನವಿರುವ ಹುಲಿ ಕುಣಿತದ ಸ್ಪರ್ಧೆಗಳೂ ನಡೆಯಲಿವೆ.500 ರು. ಮೌಲ್ಯದ ಮಾಲೆಗಳು:ಸಂಪ್ರದಾಯದಂತೆ ಕೃಷ್ಣಮಠದಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಶೀರೂರು ಮಠದ ವಿಶೇಷ ಎಂದರೆ ಹುಲಿವೇಷಧಾರಿಗಳಿಗೆ ನೋಟಿನ ಮಾಲೆಗಳನ್ನು ಹಾಕಿ ಸನ್ಮಾನ ಮಾಡುವುದು. ಹಿಂದಿನ ಶ್ರೀ ಲಕ್ಷ್ಮೀವರ ತೀರ್ಥರು ಆರಂಭಿಸಿದ್ದ ಈ ಸಂಪ್ರದಾಯವನ್ನು ಶ್ರೀ ವೇದವರ್ಧನ ತೀರ್ಥರೂ ಮುಂದುವರಿಸಲು ನಿರ್ಧರಿಸಿದ್ದು, ಅದಕ್ಕಾಗಿ ಪ್ರತಿಯೊಬ್ಬ ಹುಲಿವೇಷಧಾರಿಗೆ ಹಾಕುವುದಕ್ಕೆ ನೂರಾರು ಸಂಖ್ಯೆಯಲ್ಲಿ 500 ರು. ಮೌಲ್ಯದ ಮಾಲೆಗಳು ಸಿದ್ಧವಾಗಿವೆ. ಸ್ಪರ್ಧೆಯಲ್ಲಿ ಗೆದ್ದವರರಿಗೆ ವಿಶೇಷ ಬಹುಮಾನಗಳಿವೆ.