ಸಾರಾಂಶ
ಕನ್ನಪ್ರಭ ವಾರ್ತೆ ಬೆಂಗಳೂರು
ಉದ್ಯಾನ ನಗರಿಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರ, ಸಂಭ್ರಮ,ಭಕ್ತಿಯಿಂದ ಆಚರಿಸಲಾಯಿತು. ಇಸ್ಕಾನ್ ಹರೇಕೃಷ್ಣಗಿರಿ ಟೆಂಪಲ್, ವೇಣುಗೋಪಾಲ ಸ್ವಾಮಿ ದೇವಸ್ಥಾನ ತೊಟ್ಟಿಲು ಸೇವೆ, ರಥೋತ್ಸವ, ಪ್ರಸಾದ ವಿತರಣೆಯಾಯಿತು. ಪಾಲಕರು ಮಕ್ಕಳನ್ನು ಶ್ರೀಕೃಷ್ಣನಂತೆ ಅಲಂಕರಿಸಿ ಸಂಭ್ರಮಿಸಿದರು.ನಗರದ ಶ್ರೀಕೃಷ್ಣ, ವಿಷ್ಣು ದೇವಾಲಯಗಳಲ್ಲಿ ಕೃಷ್ಣನಾಮ ಸಂಕೀರ್ತನೆ, ಭಜನೆ, ಜಪಗಳು ನೆರವೇರಿದವು. ರಾಜಾಜಿನಗರದ ಹರೇಕೃಷ್ಣ ಗಿರಿ, ಕನಕಪುರ ರಸ್ತೆಯ ವೈಕುಂಠಿಗಿರಿ ಹಾಗೂ ಕೆಟಿಪಿಒ ವೈಟ್‌ಫೀಲ್ಡ್‌ನ ಇಸ್ಕಾನ್ ಟೆಂಪಲ್‌ಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜೆಗಳನ್ನು ನೆರವೇರಿಸಲಾಯಿತು. ಬೆಳಗ್ಗೆ 4.30ಕ್ಕೆ ಮಂಗಳಾರತಿ, ಬಳಿಕ ಪಂಚಾಭಿಷೇಕ, ಪುಷ್ಪಾಭಿಷೇಕ ಹಾಗೂ ವಜ್ರಾಲಂಕಾರ ಮಾಡಲಾಗಿತ್ತು. 7ಕ್ಕೆ ದಕ್ಷಿಣ ಭಾರತ ಶೈಲಿಯ ಪಾರಂಪರಿಕ ಪಟ್ಟು ಪೀತಾಂಬರದಲ್ಲಿ ಶೃಂಗಾರ ದರ್ಶನ ನೆರವೇರಿತು. ಮಧ್ಯರಾತ್ರಿ 12ಗಂಟೆವರೆಗೆ ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿ ದರ್ಶನ ಪಡೆದರು.
ಕೃಷ್ಣ ಹುಟ್ಟಿದ ಮಧ್ಯರಾತ್ರಿ ಮಹಾಮಂಗಳಾರತಿ ನಡೆಯಿತು. ಅದಕ್ಕೂ ಮುನ್ನ ರಾತ್ರಿ ರಾಧಾಕೃಷ್ಣ ಚಂದ್ರರ ಮೂರ್ತಿಗೆ ಮಹಾ ಅಭಿಷೇಕ ನಡೆಯಿತು. ಅಂದರೆ ಪಂಚಗವ್ಯ, ಪಂಚಾಮೃತ, 108 ಪವಿತ್ರ ಜಲಗಳ ಕಲಶ ಸ್ನಾನ, 16ಬಗೆಯ ಫಲರಸರಗಳ ಅಭಿಷೇಕ, ಹರಿದ್ರಾಚೂರ್ಣದ ಲೇಪನ ಸೇರಿ ಕೈಂಕರ್ಯಗಳ ನೆರವೇರಿದವು. ಪ್ರಮುಖವಾಗಿ ತೊಟ್ಟಿಲು ಸೇವೆ, ಪಲ್ಲಕ್ಕಿ ಉತ್ಸವ ನಡೆಯಿತು. ಸುಮಾರು ಎರಡು ಸಾವಿರ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ವೃದ್ಧರಿಗೆ ಬೆಟ್ಟಕ್ಕೆ ಬರಲು ಶಟಲ್ ಸರ್ವೀಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಕೆ.ಆರ್.ಪುರಂ ಹಳೇ ದೇವಸಂದ್ರ ಮುಖ್ಯರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು. ದೇವಸ್ಥಾನದಲ್ಲಿನ ವಿಶೇಷ ಪೂಜೆ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ನಗರದ ಮಲ್ಲೇಶ್ವರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬೆಣ್ಣೆ, ಒಣ ಹಣ್ಣುಗಳಿಂದ ಅಲಂಕಾರ ಮಾಡಿ ತುಳಸಿ ಅರ್ಪಿಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಿಸಿ ಪ್ರಾರ್ಥನೆ ಸಲ್ಲಿಸಿದರು.
ಬಸವನಗುಡಿಯ ಗೋವರ್ಧನಗಿರಿ ಮಠ ಹಾಗೂ ಶ್ರೀನಗರದ ವಿದ್ಯಾಪೀಠದಲ್ಲೂ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಹಿಳೆಯರು ಕೃಷ್ಣನನ್ನು ತೊಟ್ಟಿಲಲ್ಲಿಟ್ಟು ತೂಗಿ ಪ್ರಾರ್ಥಿಸಿದರು. ಉಳಿದಂತೆ ನಗರದ ಕೋರಮಂಗಲದ ಎಡನೀರು ಮಠ, ಇಂದಿರಾನಗರದ ಶ್ರೀಕೃಷ್ಣ ದೇವಸ್ಥಾನ ಸೇರಿ ಇತರೆಡೆಗಳಲ್ಲಿ ಪೂಜೆ, ಹತ್ತಾರು ಬಗೆಯ ಸಿಹಿಖಾದ್ಯಗಳ ನೈವೇದ್ಯ ನೆರವೇರಿದವು.ಮನೆಗಳಲ್ಲಿ ಬಾಲಕೃಷ್ಣನ ವಿಗ್ರವನ್ನಿಟ್ಟು ಪೂಜಿಸಲಾಯಿತು. ಪಾಲಕರು ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷ ತೊಡಿಸಿ ಆರತಿ ಬೆಳಗಿದವು. ಶಾಲೆಗಳಲ್ಲಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿತ್ತು.