ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿದ ಸಭೆ ಬಹುತೇಕ ಫಲಪ್ರದವಾಗಿದ್ದು, ಮುಂದಿನ ವಾರ ದರ ನಿಗದಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಆಲಮಟ್ಟಿ ಅಣೆಕಟ್ಟೆಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಭೂ ಪರಿಹಾರ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಬಾಧಿತ ರೈತರು, ಹೋರಾಟಗಾರರ ಜೊತೆ ಬೆಳಗಾವಿಯಲ್ಲಿ ಸಭೆ ನಡೆಸಿದ್ದೇವೆ. ಅವರೆಲ್ಲರೂ ಒಂದೇ ಬಾರಿ ಕನ್ಸಂಟ್ ಅವಾರ್ಡ್ ಮಾಡಿ ಎಂದು ತಿಳಿಸಿದ್ದಾರೆ. ಸರ್ಕಾರವೂ ಇದಕ್ಕೆ ಒಪ್ಪಿದೆ ಎಂದರು.
3 ದಿನಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ನಡೆಸಿದ್ದು, ಈ ವಿಚಾರ ಒಂದು ಹಂತಕ್ಕೆ ಬಂದಿದೆ. ಮುಂದಿನ ವಾರದಲ್ಲಿ ನಾನು, ಡಿಕೆಶಿ, ಸಚಿವರು, ಶಾಸಕರು ಸೇರಿ ಒಂದು ದರ ನಿಗದಿ ಮಾಡುತ್ತೇವೆ. ಖುಷ್ಕಿ ಜಮೀನು, ನೀರಾವರಿ ಜಮೀನು, ನಾಲಾ ಜಮೀನುಗಳಿಗೆ ಎಷ್ಟೆಷ್ಟು ಪರಿಹಾರ ಕೊಡಬೇಕು ಎಂದು ತೀರ್ಮಾನಿಸುತ್ತೇವೆ. ಇದನ್ನು ರೈತರು ಒಪ್ಪಿಕೊಳ್ಳಬೇಕು. ಯಾರೂ ಕೋರ್ಟ್‌ಗೆ ಹೋಗಬಾರದು. ಕೋರ್ಟ್‌ಗೆ ಹೋಗುವುದರಿಂದ ವಿಳಂಬವಾಗಲಿದೆ ಹೊರತು, ಯಾವ ಕೆಲಸ ಆಗುವುದಿಲ್ಲ ಎಂದು ವಿವರಿಸಿದರು.ಅಲಮಟ್ಟಿ ಅಣೆಕಟ್ಟೆಯನ್ನು 519.60 ಮೀ.ನಿಂದ ಮೂರನೇ ಹಂತದಲ್ಲಿ 524.26 ಮೀಟರ್‌ಗೆ ಎತ್ತರಿಸುವುದರಿಂದ 130 ಟಿಎಂಸಿ ನೀರು ಉಪಯೋಗ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಇದರಿಂದ 173 ಟಿಎಂಸಿ ನೀರನ್ನು 6.6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸಬಹುದು. ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಅದು ಆದರೆ ಅನುಕೂಲ ಆಗಲಿದೆ. ಈ ಸಂಬಂಧ ನಾನು ಮೂರು ಬಾರಿ ದೆಹಲಿಯಲ್ಲಿ ಕೇಂದ್ರದ ಸಚಿವರನ್ನು ಭೇಟಿ ಮಾಡಿದ್ದು, ಡಿ.ಕೆ.ಶಿವಕುಮಾರ್ ಅವರು ಐದು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಆದರೂ ಈವರೆಗೆ ಕೇಂದ್ರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ ಎಂದು ತಿಳಿಸಿದರು.