ಟಿಬಿ ಡ್ಯಾಂ ಕ್ರಸ್ಟ್‌ಗೇಟ್‌ ದುರಸ್ತಿಗೆ ಆದ್ಯತೆ: ಸಿದ್ದರಾಮಯ್ಯ

| Published : Sep 07 2025, 01:00 AM IST

ಟಿಬಿ ಡ್ಯಾಂ ಕ್ರಸ್ಟ್‌ಗೇಟ್‌ ದುರಸ್ತಿಗೆ ಆದ್ಯತೆ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮದು ಜನಪರ ಸರ್ಕಾರವಾಗಿದ್ದು, ಜನರ ಅಭಿಪ್ರಾಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ. ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕೆಲಸ, ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳ ಕಾರ್ಯಕ್ರಮಗಳ ದಿನ ನಿಗದಿಪಡಿಸಿ, ಅವುಗಳ ಉದ್ಘಾಟನೆ ನೆರವೇರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳ:

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿಗೆ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳ ಬಳಿಯ ಏರ್‌ಡ್ರೋಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಕೊಚ್ಚಿ ಹೋಗಿದ್ದ ಜಲಾಶಯದ ಕ್ರಸ್ಟ್‌ಗೇಟ್ 19ಕ್ಕೆ ಸ್ಟಾಪ್‌ಲಾಗ್ ಎಲಿಮೆಂಟ್‌ನ್ನು ಯಶಸ್ವಿಯಾಗಿ ಅಳವಡಿಸಲು ತ್ವರಿತವಾಗಿ ಸ್ಪಂದಿಸಲಾಗಿದೆ. ಪ್ರಸ್ತುತ ಜಲಾಶಯವು ಹಳೆಯದಾಗಿದ್ದು ಗೇಟ್‌ಗಳ ಸಮಸ್ಯೆಯೂ ಇದೆ. ಮಳೆ ಕಡಿಮೆಯಾದ ತಕ್ಷಣ ಗೇಟ್‌ಗಳ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದರು.

ನಮ್ಮದು ಜನಪರ ಸರ್ಕಾರವಾಗಿದ್ದು, ಜನರ ಅಭಿಪ್ರಾಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ. ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕೆಲಸ, ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳ ಕಾರ್ಯಕ್ರಮಗಳ ದಿನ ನಿಗದಿಪಡಿಸಿ, ಅವುಗಳ ಉದ್ಘಾಟನೆ ನೆರವೇರಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ವಾರ್ತಾ ಇಲಾಖೆಗೆ ಹೊಸ ವಾಹನ:

ವಾರ್ತಾ ಇಲಾಖೆಯ ಪತ್ರಿಕಾ ವಾಹನ ಹಳೆಯದಾಗಿದ್ದು ಹೊಸ ಬಸ್‌ ನೀಡುವಂತೆ ಸಿಎಂ ಬಳಿ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ಶೀಘ್ರವೇ ಹೊಸ ವಾಹನ ನೀಡುವುದಾಗಿ ಭರವಸೆ ನೀಡಿದರು.

ಡಿಸಿಎಂ ಡಿ.ಕೆ. ಶಿವಕುಮಾರ ಮಾತನಾಡಿ, ಜಲಾಶಯದ ಕುರಿತು ಚರ್ಚಿಸಲು ಆಂಧ್ರಪ್ರದೇಶ ಸಿಎಂಗೆ ಸಮಯ ಕೇಳಿದ್ದೇನೆ. ಸಮಯ ನಿಗದಿಯಾದ ನಂತರ ನವಲಿ ಸಮನಾಂತರ ಜಲಾಶಯ ಮತ್ತು ಇತರೆ ವಿಷಯಗಳನ್ನು ಪ್ರಸ್ತಾಪಿಸಲಾಗುವುದು. ಶೀಘ್ರವೇ ತುಂಗಭದ್ರಾ ಗೇಟ್‌ಗಳ ದುರಸ್ತಿ ಮಾಡಲಾಗುವುದು. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ವೇಳೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಎಚ್.ಆರ್. ಗವಿಯಪ್ಪ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಬಳ್ಳಾರಿ ವಲಯದ ಪೊಲೀಸ್ ಉಪ ಮಹಾನಿರೀಕ್ಷಕಿ ವರ್ತಿಕಾ ಕಟಿಯಾರ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.