ಪುತ್ತಿಗ ಮಠದ ಎರಡು ವರ್ಷಗಳ ಪರ್ಯಾಯದ ಕೊನೆಯ ದಿನ ಸಂಪ್ರದಾಯದಂತೆ ಶನಿವಾರ ರಾತ್ರಿ ಕೃಷ್ಣಮಠದ ಪಾಕಶಾಲೆಯಲ್ಲಿ ಸೂರೆ ನಡೆಯಿತು
ಉಡುಪಿ: ಪುತ್ತಿಗ ಮಠದ ಎರಡು ವರ್ಷಗಳ ಪರ್ಯಾಯದ ಕೊನೆಯ ದಿನ ಸಂಪ್ರದಾಯದಂತೆ ಶನಿವಾರ ರಾತ್ರಿ ಕೃಷ್ಣಮಠದ ಪಾಕಶಾಲೆಯಲ್ಲಿ ಸೂರೆ ನಡೆಯಿತು. ಕೃಷ್ಣಮಠದ ಆಸುಪಾಸಿನ ಮನೆಗಳವರು ಸಿಕ್ಕಸಿಕ್ಕ ಪಾತ್ರೆಗಳಲ್ಲಿ ಅಡುಗೆಯನ್ನು ತುಂಬಿಕೊಂಡೊಯ್ದರು.
ಒಂದು ಮಠದ ಪರ್ಯಾಯ ಮುಗಿಯುವ ದಿನ ಅಡುಗೆ ಮನೆಯಲ್ಲಿದ್ದ ಎಲ್ಲ ಪದಾರ್ಥಗಳನ್ನು ಬರಿದು ಮಾಡಬೇಕು. ಹೊಸದಾಗಿ ಪರ್ಯಾಯ ಶುರು ಮಾಡಿದ ಮಠಗಳವರು ಮತ್ತೇ ಅಡುಗೆ ಮನೆಗೆ ಬೇಕಾದ ಪದಾರ್ಥಗಳನ್ನು ಹೊಂದಿಸಿಕೊಳ್ಳಬೇಕು. ಇದು ಇಲ್ಲಿನ ಸಂಪ್ರದಾಯವಾಗಿದೆ. ಆದ್ದರಿಂದ ನಿರ್ಗಮನ ಮಠದವರು ಅಡುಗೆ ಮನೆಯಲ್ಲಿ ಉಳಿದ ಅಡುಗೆಯನ್ನು ಭಾರಿ ಪಾತ್ರೆಗಳಲ್ಲಿ ಇಟ್ಟಿರುತ್ತಾರೆ. ಅದನ್ನು ಜನರು ಬೇಕಾದಷ್ಟು ತೆಗೆದುಕೊಂಡು ಹೋಗಬಹುದಾಗಿದೆ.ಶನಿವಾರ ಮಧ್ಯಾಹ್ನ ಪುತ್ತಿಗೆ ಮಠದ ವತಿಯಿಂದ ಹತ್ತಿಪ್ಪತ್ತು ಸಾವಿರ ಮಂದಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಉಳಿದ ಅಡುಗೆ, ಅನ್ನ, ಸಾರು, ಸಾಂಬಾರು, ಭಕ್ಷ್ಯಗಳನ್ನು ರಾತ್ರಿ ಜನರಿಗೆ ಸೂರೆ ಮಾಡಲು ಅವಕಾಶ ನೀಡಲಾಯಿತು. ನೂರಾರು ಮಂದಿ ತಮಗೆ ಬೇಕಾದಷ್ಟು ಅನ್ನ ಪಾಯಸ ಸಾರುಗಳನ್ನು ಹೊತ್ತೊಯ್ಯುವ, ಆಳೆತ್ತರಕ್ಕೂ ದೊಡ್ಡ ಕಡಾಯಿಗಳಲ್ಲಿದ್ದ ಸಾರು, ಪಾಯಸಗಳನ್ನು ಬಾಲ್ದಿಗೆ ಹಗ್ಗ ಕಟ್ಟಿ ಇಳಿಸಿ ಮೇಲೆತ್ತುವ ದೃಶ್ಯ ಗಮನಾರ್ಹವಾಗಿತ್ತು.