ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜೀವನದಿಯಾಗಿರುವ ಹಿಪ್ಪರಗಿ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಹಂತದಲ್ಲಿದ್ದಾಗಲೇ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿದ್ದು, ನೀರು ಸೋರಿಕೆಯಿಂದ ಬೇಸಿಗೆಯಲ್ಲಿ ನೀದಿನ ಬವನೆಯ ಆತಂಕದಲ್ಲಿದ್ದ ಜನತೆಗೆ ನಿರಾಳತೆ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜೀವನದಿಯಾಗಿರುವ ಹಿಪ್ಪರಗಿ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಹಂತದಲ್ಲಿದ್ದಾಗಲೇ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿದ್ದು, ನೀರು ಸೋರಿಕೆಯಿಂದ ಬೇಸಿಗೆಯಲ್ಲಿ ನೀದಿನ ಬವನೆಯ ಆತಂಕದಲ್ಲಿದ್ದ ಜನತೆಗೆ ನಿರಾಳತೆ ಮೂಡಿಸಿದೆ.೬ ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಕೇವಲ ೨.೩೭ ಟಿಎಂಸಿಯಷ್ಟು ಮಾತ್ರ ನೀರು ಇದೆ. ಬ್ಯಾರೇಜ್‌ನಿಂದ ಪ್ರತಿದಿನ ೧೦ ರಿಂದ ೧೫ ಸೆ.ಮೀನಷ್ಟು ಅಂದರೆ ೦.೦೭ ಟಿಎಂಸಿಯಷ್ಟು ನೀರು ಖಾಲಿಯಾಗುತ್ತಿತ್ತು. ಇದೀಗ ಶನಿವಾರ ರಾತ್ರಿಯಿಂದ ಪ್ರತಿದಿನ ೧೦ ಸೆ.ಮೀ.ನಷ್ಟು ಏರಿಕೆ ಕಾಣುತ್ತಿದೆ.

ಕೆಲ ದಿನಗಳಲ್ಲಿ ನೀರಿನ ಮಟ್ಟ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ ಜನರಿಗೆ ಬೇಸಿಗೆಯ ಆತಂಕ ಶುರುವಾಗಿತ್ತು. ಇದೇ ಪ್ರಮಾಣದಲ್ಲಿ ಪ್ರತಿ ದಿನ ನೀರು ಖಾಲಿಯಾದರೆ ಬೇಸಿಗೆಯ ಕೊನೆಯ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಆತಂಕ ಮನೆಮಾಡಿತ್ತು. ಇದೀಗ ಮಹಾರಾಷ್ಟ್ರದಿಂದ ನೀರು ಬರುತ್ತಿರುವುದರಿಂದ ಜನತೆ ನೆಮ್ಮದಿಯು ನಿಟ್ಟುಸಿರು ಬಿಡುವಂತಾಗಿದೆ.

ಮಹಾ ಸರ್ಕಾರ ಎಷ್ಟು ಪ್ರಮಾಣದ ನೀರು ಬಿಡುಗಡೆಗೊಳಿಸಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ ನದಿ ಪಾತ್ರದಲ್ಲಿನ ನೀರಿನ ಮಟ್ಟ ಏರಿಕೆಯಾಗಿರುವುದು ಈ ಪ್ರದೇಶದ ಜನ-ಜಾನುವಾರುಗಳಿಗೆ ಬೇಸಿಗೆ ನೀಗಿಸಲು ಆಸರೆಯಾಗಲಿದೆ.