ಕೃಷ್ಣರ ರಾಜಕೀಯ ಜೀವನ ರಾಜಕಾರಣಿಗಳಿಗೆ ಮಾರ್ಗದರ್ಶಿ : ಮಾಜಿ ಸಚಿವ ಕುಮಾರ ಬಂಗಾರಪ್ಪ

| Published : Dec 12 2024, 12:33 AM IST / Updated: Dec 12 2024, 12:12 PM IST

ಕೃಷ್ಣರ ರಾಜಕೀಯ ಜೀವನ ರಾಜಕಾರಣಿಗಳಿಗೆ ಮಾರ್ಗದರ್ಶಿ : ಮಾಜಿ ಸಚಿವ ಕುಮಾರ ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಎಂ. ಕೃಷ್ಣ ಅವರ ಅರವತ್ತು ದಶಕಗಳ ವಿವಿಧ ಮಜಲಿನ ರಾಜಕೀಯ ಜೀವನದ ಪುಟಗಳು ಇಂದಿನ ರಾಜಕಾರಣಿಗಳಿಗೆ ಸೂಕ್ತ ಮಾರ್ಗದರ್ಶಿ ಆಗುತ್ತವೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.

 ಸೊರಬ: ಎಸ್.ಎಂ. ಕೃಷ್ಣ ಅವರ ಅರವತ್ತು ದಶಕಗಳ ವಿವಿಧ ಮಜಲಿನ ರಾಜಕೀಯ ಜೀವನದ ಪುಟಗಳು ಇಂದಿನ ರಾಜಕಾರಣಿಗಳಿಗೆ ಸೂಕ್ತ ಮಾರ್ಗದರ್ಶಿ ಆಗುತ್ತವೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.

ಬಿಜೆಪಿ ಕಾರ್ಯಾಲಯದಲ್ಲಿ ಅಗಲಿದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಅವರ ದೂರದರ್ಶಿತ್ವ, ಅಭಿವೃದ್ದಿಯ ಮುನ್ನೋಟ, ಶಿಸ್ತುಬದ್ದ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮಾದರಿ. ಕರ್ನಾಟಕದ ಅಭಿವೃದ್ಧಿಯ ನಕಾಶೆಯಲ್ಲಿ ಶಾಶ್ವತವಾದ ಗುರುತನ್ನು ಮಾಡಿದ್ದಾರೆ. ಜಂಟಲ್‌ಮ್ಯಾನ್ ಗುಣ-ನಡತೆಯಿಂದಾಗಿ ಅವರು ಅಜಾತಶತ್ರುಗಳಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯ ಸರ್ಕಾರ ಹಲವು ರಾಜಕೀಯ ಬಿಕ್ಕಟ್ಟುಗಳನ್ನು ಎದುರಿಸಿತ್ತು. ಕಾವೇರಿ ನೀರು ಹಂಚಿಕೆ ವಿವಾದ, ಕಾಡುಗಳ್ಳ ವೀರಪ್ಪನ್‌ನಿಂದ ವರನಟ ಡಾ. ರಾಜ್‌ಕುಮಾರ್ ಅವರ ಅಪಹರಣ, ಭೀಕರ ಬರಗಾಲ ಮೊದಲಾದ ಬಿಕ್ಕಟ್ಟುಗಳನ್ನು ಎದುರಿಸಿ ಯಶಸ್ಸು ಕಂಡದ್ದು ಅವರ ರಾಜಕೀಯ ಚಾತುರ್ಯಕ್ಕೆ ಸಾಕ್ಷಿ. ಅವರ ಸಚಿವ ಸಂಪುಟದಲ್ಲಿ ತಮಗೆ ಸಣ್ಣ ನೀರಾವರಿ ಮತ್ತು ಪೌರಾಡಳಿತ ಸಚಿವ ಹುದ್ಧೆ ನೀಡಿ ಯುವ ರಾಜಕಾರಣಿಗಳಿಂದ ಉತ್ತಮ ಕೆಲಸ ಪಡೆಯುತ್ತಿದ್ದರು. ಅವರ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸಿದ ಹೆಮ್ಮೆ ತಮಗಿದೆ ಎಂದರು.

ಇಡೀ ಜಗತ್ತು ತಂತ್ರಜ್ಞಾನದ ಯುಗಕ್ಕೆ ಹೊರಳುತ್ತಿರುವ ದಿನಗಳನ್ನು ನೋಡಿ ಕಾಲಕ್ಕೆ ತಕ್ಕ ಹಾಗೆ ಕರ್ನಾಟಕ ಬದಲಾವಣೆಯ ದಾರಿಯಲ್ಲಿ ಹೆಜ್ಜೆ ಇಡಬೇಕೆಂದು ನಿರ್ಧರಿಸಿ ರಾಜ್ಯದಲ್ಲಿ ಐಟಿ-ಬಿಟಿ ಕ್ಷೇತ್ರಕ್ಕೆ ಉತ್ತೇಜನ ನೀಡಿ ಬೆಳೆಸಿದರು. ಇದರಿಂದ ರಾಜ್ಯ ಐಟಿ-ಬಿಟಿ ರಾಜಧಾನಿಯಾಗಿ ಸಿಲಿಕಾನ್ ಸಿಟಿ ಎನ್ನುವ ಹೆಗ್ಗಳಿಕೆಗೆ ಭಾಜನವಾಯಿತು. ಈ ಮೂಲಕ ಸಾವಿರಾರು ಯುವಜನರಿಗೆ ಉದ್ಯೋಗಾವಕಾಶದ ಬಾಗಿಲು ತೆರೆಯಿತು. ನಗರಾಭಿವೃದ್ಧಿಯ ಜತೆಗೆ ಗ್ರಾಮೀಣಾಭಿವೃದ್ಧಿಗೂ ಆಧ್ಯತೆ ನೀಡಿದ್ದರು. ಹಾಗಾಗಿ, ಅವರ ಕಾಲದಲ್ಲಿ ಜಾರಿಗೆ ಬಂದಿರುವ ಸ್ವೀಶಕ್ತಿ ಸ್ವಸಹಾಯ ಸಂಘಗಳು, ಯಶಸ್ವಿನಿ ಆರೋಗ್ಯ ಯೋಜನೆ, ಬಿಸಿಯೂಟ ಯೋಜನೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಚಾಲನೆ ನೀಡಿದ ಮೊದಲ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಎಂದು ತಿಳಿಸಿದರು.

ನನ್ನಂಥ ಎಷ್ಟೋ ರಾಜಕಾರಣಿಗಳಿಗೆ ಸ್ಥಾನಮಾನ ನೀಡಿ ಬೆಳೆಸಿದ್ದರು. ತಾವು ಕಾಂಗ್ರೆಸ್ ತೊರದು ಬಿಜೆಪಿಗೆ ಸೇರ್ಪಡೆಯಾಗುವ ಮೊದಲು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಈ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದರು. ನಾವು ಬಿಜೆಪಿಗೆ ಸೇರ್ಪಡೆಯಾದ ಒಂದೇ ವರ್ಷದಲ್ಲಿ ಅವರೂ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದು ನೆನೆಪಿಸಿಕೊಂಡ ಅವರು, ಅವರ ಅಗಲಿಕೆ ರಾಜಕೀಯರಂಗದಲ್ಲಿ ತುಂಬಲಾಗದ ನಷ್ಟವಾಗಿದೆ. ಅವರ ಚಿಂತನೆಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ.ಡಿ. ಉಮೇಶ್, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಡಿ. ಶಿವಯೋಗಿ, ಅಶೋಕ್ ಶೇಟ್, ಗುರುಮೂರ್ತಿ ಹಿರೇಶಕುನ, ಶಿವಮೂರ್ತಿ, ಚಂದ್ರಣ್ಣ ಕೊಡಕಣಿ, ರಂಗನಾಥ ಮೋಗವೀರ ಸೇರಿದಂತೆ ಮೊದಲಾದರಿದ್ದರು.