ಮಕ್ಕಳಿಂದ ಕೃಷ್ಣ ಸಂಧಾನ ನಾಟಕ ಪ್ರದರ್ಶನ

| Published : May 13 2025, 11:47 PM IST

ಸಾರಾಂಶ

ನಗರದ ಕಲ್ಪತರು ಆಡಿಟೋರಿಯಂನಲ್ಲಿ ಸೊಗಡು ಜನಪದ ಹೆಜ್ಜೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಎಲ್ಲರ ಗಮನಸೆಳೆಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಕಲ್ಪತರು ಆಡಿಟೋರಿಯಂನಲ್ಲಿ ಸೊಗಡು ಜನಪದ ಹೆಜ್ಜೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಎಲ್ಲರ ಗಮನಸೆಳೆಯಿತು. ಕಲಾ ಪೋಷಕರು ಹಾಗೂ ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಜಿ. ಸುಧಾಕರ್ ಮಾತನಾಡಿ ಆಧುನಿಕ ಮತ್ತು ಯಾಂತ್ರಿಕವಾಗುತ್ತಿರುವ ಬದುಕಿನ ಜಂಜಾಟದ ನಡುವೆ ಮರೆಯಾಗುತ್ತಿರುವ ಜಾನಪದ ಸಿರಿ ಸಂಪತ್ತಿನ ಭಂಡಾರ, ಗ್ರಾಮೀಣ ಆಟಗಳಾದ ಕೆಸರು ಗದ್ದೆ ಓಟ, ಕುಂಟಾಬಿಲ್ಲೆ, ಹಗ್ಗಜಗ್ಗಾಟ, ಪಗಡೆ, ಗೋಲಿ, ಬುಗುರಿ, ಚಿನ್ನಿದಾಂಡು, ಬೀಸೋ ಪದಗಳು, ಸುಗ್ಗಿ ಹಾಡುಗಳು, ಜಾನಪದ ಗೀತ ಗಾಯನ ಇತ್ಯಾದಿಗಳನ್ನು ಆಡಿಸುವುದರ ಮೂಲಕ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಸೊಗಡು ಜನಪದ ಹೆಜ್ಜೆ ನಿರಂತರವಾಗಿ ಹಮ್ಮಿಕೊಂಡು ಬರುತ್ತಿದ್ದು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಸಹಕಾರಿಯಾಗಿದೆ ಎಂದರು. ಸೊಗಡು ಜನಪದ ಹೆಜ್ಜೆ ಅಧ್ಯಕ್ಷ ಸಿರಿಗಂಧ ಗುರು ಮಾತನಾಡಿ ಮಕ್ಕಳು ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ರಂಗಭೂಮಿ ಕಲೆಯನ್ನು ಅದರಲ್ಲೂ ಪೌರಾಣಿಕ ನಾಟಕಗಳ ಸೊಗಸನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಬೆಳೆಯುವ ದಿಸೆಯಲ್ಲಿ ಹದಿನೈದು ದಿನಗಳ ನಾಟಕ ಶಿಬಿರ ಆಯೋಜಿಸಿ ಮಕ್ಕಳಲ್ಲಿ ನಾಟಕ ಪ್ರೇಮವನ್ನು ಬೆಳೆಸುವ ಜತೆಗೆ ಇತರೆ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸುವ ಕೆಲಸ ಮಾಡಲಾಯಿತು. ಬೇಸಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು ಎಂದರು. ಈ ಸಂದರ್ಭದಲ್ಲಿ ಮಕ್ಕಳಲ್ಲಿನ ಕಲಾ ಪ್ರತಿಭೆ ಅದ್ಭುತವಾಗಿದ್ದು ಕೇವಲ ಹದಿನೈದು ದಿನಗಳಲ್ಲೇ ನಾಟಕದ ಹಾಡು, ಮಟ್ಟುಗಳನ್ನು ಲೀಲಾಜಾಲವಾಗಿ ಅಭಿನಯದೊಂದಿಗೆ ಹಾಡುವುದನ್ನು ನೋಡಿ, ಕೇಳಿದಾಗ ಆಶ್ಚರ್ಯವೆನಿಸಿತು. ಕೃಷ್ಣ ಪಾತ್ರಧಾರಿ ಲಕ್ಷ್ಮೀ, ದುರ್ಯೋಧನ ಪಾತ್ರಧಾರಿ ರಚನಾ ಹಾಗೇ ಶಕುನಿ, ವಿದುರ ದುಶ್ಯಾಸನ, ನರ್ತಕಿ ಸಾನಿಕಾ ಮುಂತಾದವರ ಅಭಿನಯ, ಸ್ಪಷ್ಟ , ಶುದ್ಧ ಉಚ್ಚಾರಣೆ, ಧ್ವನಿಯ ಏರಿಳಿತ, ಪ್ರೇಕ್ಷಕರ ಮನಸೂರೆಗೊಂಡಿತು. ಬೆಳ್ಳಿ ಕಿರೀಟ ಪ್ರಶಸ್ತಿ ಪುರಸ್ಕೃತರಾದ ಮಹೇಶ್ ಘಂಟಿಗನಹಳ್ಳಿ ಯವರ ಪಿಯಾನೊ, ರಾಯಾಚಾರ್ ರವರ ತಬಲಾ ವಾದನ, ಟಿ.ಎಚ್. ಬಸವರಾಜುರವರ ಸುಶ್ರಾವ್ಯ ರಂಗಗೀತೆಗಳು ಆಧುನಿಕ ರಂಗಸಜ್ಜಿಕೆ ಇಲ್ಲದೆ ಇರುವ ಪರಿಕರಗಳನ್ನೇ ಬಳಸಿ ಕಡಿಮೆ ಖರ್ಚಿನಲ್ಲಿ ನೀಡಿದ ಪ್ರದರ್ಶನ ಭವಿಷ್ಯದ ರಂಗಭೂಮಿಯ ಸೂಚನೆಯಂತಿತ್ತು. ಸ್ಥಳೀಯ ರಂಗಭೂಮಿ ಕಲಾವಿದರಾದ ಪುಟ್ಟಸ್ವಾಮಿ ಅರಳಗುಪ್ಪೆ, ಸಪ್ತಶ್ರೀ ಕಲಾವಿದರ ಸಂಘದ ಅಧ್ಯಕ್ಷರಾದ ಟಿ.ಎಚ್. ಬಸವರಾಜು ತಂಡದವರ ಸಹಕಾರದಿಂದ ನಾಟಕ ನಡೆಯಿತು. ಶಾಂತನಹಳ್ಳಿ ಸುರೇಶ್, ಶಿಬಿರದ ಸಂಚಾಲಕ ಮಾದಿಹಳ್ಳಿ ಶಿವು, ಉಪಪ್ರಾಂಶುಪಾಲ ಚನ್ನೇಗೌಡ, ನಗರಸಭೆ ಮಾಜಿ ಸದಸ್ಯರಾದ ನಿಜಗುಣ, ತರಕಾರಿ ಗಂಗಾಧರ್, ನಗರಸಭಾ ಸದಸ್ಯೆ ಓಹಿಲಾ ಗಂಗಾಧರ್, ಕಾರ್ಯದರ್ಶಿ ಚಿದಾನಂದ್, ಕಸಾಪ ಕಾರ್ಯದರ್ಶಿ ಎಚ್.ಎಸ್. ಮಂಜಪ್ಪ, ನಿವೃತ್ತ ಯೋಧ ಉಮಾ ಮಹೇಶ್, ಪೋಷಕರು, ಬಾಲ ಪ್ರತಿಬೆಗಳು ಭಾಗವಹಿಸಿದ್ದರು.