ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ

ಕೃಷ್ಣಾ ನದಿಯಿಂದ ಕ್ಷೇತ್ರದ ಕೆರೆಗಳಿಗೆ ನೀರು ಹರಿದು ಬಂದಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಕೆರೆಗೆ ನೀರು ಹರಿಸುವಂತೆ ರಾಯರಡ್ಡಿ ಸರ್ಕಾರಕ್ಕೆ ಬರೆದಿದ್ದ ಪತ್ರಕ್ಕೆ ಸ್ಪಂದನೆ ಸಿಕ್ಕಿದೆ.

ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್-ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರಿಂದ ಪರ ವಿರೋಧ ಚರ್ಚೆ ಶುರುವಾಗಿದೆ. ೨೦೧೮ರಲ್ಲಿ ಅಂದಿನ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ಅಂದಿನ ಶಾಸಕ ಹಾಲಪ್ಪ ಆಚಾರ್ ಮನವಿ ಮೇರೆಗೆ ಅನುದಾನ ಮೀಸಲಿಟ್ಟು, ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆಯ ಭಾಗವಾಗಿದ್ದ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಪೂರ್ಣಗೊಳಿಸುವುದು ಮತ್ತು ಎಲ್ಲ ಕೆರೆಗಳಿಗೆ ನೀರು ಹರಿಯಲು ಕಾರಣಿಭೂತರಾಗಿದ್ದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಯೋಜನೆಯನ್ನು ತಾವೇ ಮಾಡಿದ್ದಾಗಿ ವಿಜೃಂಭಿಸುತ್ತಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಟೀಕೆ ಮಾಡುತ್ತಿದ್ದಾರೆ.

ಆದರೆ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಪ್ರತಿಯಾಗಿ ಕೆರೆ ತುಂಬಿಸುವ ಯೋಜನೆ ಕಾಂಗ್ರೆಸ್ ಪಕ್ಷದ ಯೋಜನೆಯಾಗಿದೆ. ಸಚಿವ ಬಸವರಾಜ ರಾಯರಡ್ಡಿ ಪರಿಶ್ರಮದ ಫಲವಾಗಿ ಕ್ಷೇತ್ರದ ಕೆರೆಗಳಿಗೆ ನೀರು ಹರಿದು ಬಂದಿದೆ ಎಂದು ಎದುರು ಉತ್ತರ ನೀಡುತ್ತಿದ್ದಾರೆ.

ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು:ಪ್ರಸಕ್ತ ಸಾಲಿನಲ್ಲಿ ಸತತ ಮಳೆ ಕೊರತೆಯಿಂದ ಕ್ಷೇತ್ರದ ಕೆರೆಗಳಲ್ಲಿ ನೀರು ಬರಿದಾಗಿತ್ತು. ಹಳ್ಳಕೊಳ್ಳ ಬತ್ತಿ ಹೋಗಿವೆ. ಇದರಿಂದ ಜನ ಜಾನುವಾರುಗಳಿಗೆ ನೀರಿನ ಅಭಾವ ಕಾಡುತ್ತಿತ್ತು. ಈಗ ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಹರಿದು ಬಂದಿದ್ದು, ಕೆರೆಗಳಿಗೆ ಜೀವಕಳೆ ಬಂದಿದೆ. ಅಂತರ್ಜಲ ಮಟ್ಟ ಸುಧಾರಣೆ, ಜನ ಜಾನುವಾರುಗಳಿಗೆ ಕುಡಿಯಲು ನೀರಿನ ತೊಂದರೆ ನಿವಾರಣೆಯಾಗಲಿದೆ ಎಂದು ರೈತರು ಅಭಿಪ್ರಾಯ ಪಟ್ಟಿದ್ದಾರೆ.


ರಾಯರಡ್ಡಿ ಪತ್ರಕ್ಕೆ ಸ್ಪಂದನೆ: ಕೊಪ್ಪಳ ಜಿಲ್ಲೆಯ ಯಲಬುರ್ಗಾ-ಕುಕನೂರು, ಕನಕಗಿರಿ ಮತ್ತು ಕುಷ್ಟಗಿ ತಾಲೂಕಿನಲ್ಲಿರುವ ೭೬ ಕೆರೆಗಳಿಗೆ ನೀರು ಹರಿಸುವಂತೆ ಜು.೨೫ರಂದು ಸಚಿವ ಬಸವರಾಜ ರಾಯರಡ್ಡಿ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಮನವಿಗೆ ಸ್ಪಂದಿಸಿರುವ ನೀರಾವರಿ ಇಲಾಖೆ ಹಾಗೂ ಕೆಬಿಜೆಎನ್‌ಎಲ್‌ ಅಧಿಕಾರಿಗಳು ಕೆರೆಗೆ ನೀರು ಹರಿಸಿದ್ದಾರೆ.

ಜಿಲ್ಲೆಯ ೭೬ ಕೆರೆಗಳ ಪೈಕಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ೨೪ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ತಾಲೂಕಿನ ಹಲವು ಹಳ್ಳ-ಕೊಳ್ಳಗಳು ಹಾಗೂ ಕೆರೆಗಳು ಬತ್ತಿ ಹೋಗಿದ್ದವು. ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಕೆರೆಗಳಿಗೆ ನೀರು ಹರಿಸುವಂತೆ ಸಚಿವರು ಮನವಿ ಮಾಡಿದ್ದರು.

೨೦೧೮ರಲ್ಲಿ ಅಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಸಿಎಂ ಕುಮಾರಸ್ವಾಮಿ ರೈತಪರ ಕಳಕಳಿ ಮತ್ತು ಅಂದಿನ ಶಾಸಕ ಹಾಲಪ್ಪ ಆಚಾರ್ ಮನವಿ ಮೇರೆಗೆ ಕ್ಷೇತ್ರದ ಕೆರೆಗಳು ಅಭಿವೃದ್ಧಿಗೊಂಡು ನೀರು ತುಂಬಿದ್ದವು. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಪ್ರತಿ ವರ್ಷದಂತೆ ನಮ್ಮ ಪಾಲಿನ ನೀರನ್ನು ಸಂಬಂಧಿಸಿದ ಇಲಾಖೆ ಕೆರೆಗಳಿಗೆ ನೀರು ಹರಿಸಲು ಮುಂದಾಗಿದೆ. ಇದರಲ್ಲೇನೂ ವಿಶೇಷತೆ ಇಲ್ಲ. ಈ ಪ್ರಯತ್ನ ಸಚಿವ ರಾಯರಡ್ಡಿ ಅವರು ಒಂದು ತಿಂಗಳ ಹಿಂದೆಯೇ ಮಾಡಿದ್ದರೆ ಇನ್ನೂ ಬರದ ಪರಿಣಾಮ. ಅಷ್ಟೊಂದು ಬೀರುತ್ತಿರಲಿಲ್ಲ ಎಂದು ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರ ತಿಳಿಸಿದ್ದಾರೆ.

ಯಲಬುರ್ಗಾ-ಕುಕನೂರು ತಾಲೂಕಿನ ೨೪ ಕೆರೆಗಳಿಗೆ ಆಲಮಟ್ಟಿ ಜಲಾಶಯದಿಂದ ಶನಿವಾರದಿಂದ ನೀರು ಹರಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ಕೆರೆಗಳಿಗೆ ನೀರು ಹರಿಸಿದ್ದಾರೆ. ಶೀಘ್ರದಲ್ಲೇ ಹೊಸದಾಗಿ 34 ಕೆರೆ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನನ್ನ ಅವಧಿಯಲ್ಲಿ ಕ್ಷೇತ್ರದ ರೈತರ ಪರವಾಗಿ ಹೆಚ್ಚಿನ ಕೆಲಸ ಮಾಡುತ್ತೇನೆ ಎಂದು ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಸಚಿವ ‌ಬಸವರಾಜ ರಾಯರಡ್ಡಿ ಅವರು ಕ್ಷೇತ್ರದ ೨೪ ಕೆರೆಗಳಿಗೆ ನೀರು ಹರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರಂತೆ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ಹರಿಸಲು ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಎಲ್ಲ ಕೆರೆಗಳಿಗೆ ನಿರಂತರವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯಲಬುರ್ಗಾ ಕೆಬಿಜೆಎನ್‌ಎಲ್ ಅಧಿಕಾರಿ ಚನ್ನಪ್ಪ.ಎಸ್.ಎ. ತಿಳಿಸಿದ್ದಾರೆ.