ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ತೀರ್ಪಿನ ಅಧಿಸೂಚನೆ ಪ್ರಕಟಿಸುವ ಸಂಬಂಧ ಚರ್ಚಿಸಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಕರೆದಿರುವ ನಾಲ್ಕು ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ದೆಹಲಿಗೆ ತೆರಳಿದರು.2010ರಲ್ಲಿ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ನದಿ ನೀರು ಹಂಚಿಕೆಗೆ ಸಂಬಂಧಿಸಿ ನೀಡಿರುವ ತೀರ್ಪಿನ ಗೆಜೆಟ್ ಅಧಿಸೂಚನೆ ಪ್ರಕಟಿಸುವ ಸಂಬಂಧ ಚರ್ಚಿಸಲು ಕೇಂದ್ರ ಜಲಶಕ್ತಿ ಸಚಿವರು ಬುಧವಾರ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಜಲಸಂಪನ್ಮೂಲ ಸಚಿವರು ಮತ್ತು ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಸಭೆಯಲ್ಲಿ ಕರ್ನಾಟಕದ ಪರ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುತ್ತಿದ್ದು, ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ನೋಟಿಫಿಕೇಷನ್ ಪ್ರಕಟಿಸಲು ರಾಜ್ಯದ ಪರ ಒತ್ತಡ ಹೇರಲಿದ್ದಾರೆ.
ಕೃಷ್ಣಾ ಜಲವಿವಾದ ನ್ಯಾಯಾಧಿಕರಣವು 2010ರ ಡಿ.30ರಂದು ನದಿ ನೀರು ಹಂಚಿಕೆ ಕುರಿತು ತೀರ್ಪು ನೀಡಿತ್ತು. ಆ ತೀರ್ಪಿಗೆ ಸಂಬಂಧಿಸಿ ಕೆಲ ಕಾನೂನಾತ್ಮಕ ತೊಡಕುಗಳಿಂದಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಲಿಲ್ಲ. ನ್ಯಾಯಾಧಿಕರಣದ ಆದೇಶದಂತೆ 173 ಟಿಎಂಸಿ ನೀರು ಬಳಸಿಕೊಳ್ಳಲು ಸೂಚಿಸಿದ್ದು, ಅಷ್ಟು ನೀರು ಬಳಕೆಗೆ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀ.ನಿಂದ 524 ಮೀ.ಗೆ ಎತ್ತರಿಸಬೇಕಿದೆ. ಆ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ನ್ಯಾಯಾಧಿಕರಣದ ತೀರ್ಪಿನ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕಿದೆ. ಈ ಕುರಿತು ಚರ್ಚಿಸಲು ಕೇಂದ್ರ ಜಲಶಕ್ತಿ ಸಚಿವರು ನಾಲ್ಕು ರಾಜ್ಯಗಳ ಸಚಿವ ಸಭೆ ನಡೆಸುತ್ತಿದ್ದಾರೆ.ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ಹಾಗೂ ಅದರ ಭಾಗವಾಗಿ ಆಲಮಟ್ಟಿ ಜಲಾಶಯ ಎತ್ತರಿಸಿ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಸಂಗ್ರಹಿಸಲು ಅನುಮತಿಸುವಂತೆ ರಾಜ್ಯದ ಪರ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ವಾದ ಮಂಡಿಸುವ ಸಾಧ್ಯತೆಯಿದೆ. ಜತೆಗೆ ಉಳಿದ ಮೂರು ರಾಜ್ಯಗಳನ್ನೂ ಅದಕ್ಕೊಪ್ಪಿಸುವ ಪ್ರಯತ್ನ ಮಾಡಲಿದ್ದಾರೆ.ಅನಾರೋಗ್ಯದ ನಡುವೆ ಡಿಕೆಶಿ ದೆಹಲಿ ಪ್ರವಾಸ
ದೆಹಲಿ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅನಾರೋಗ್ಯಕ್ಕೀಡಾಗಿ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆಗೊಳಪಟ್ಟರು. ಈ ವೇಳೆ ವೈದ್ಯರು ಪರಿಶೀಲಿಸಿ, ಕೆಲಹೊತ್ತು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಆದರೆ, ಡಿ.ಕೆ. ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ ನಿಖರ ಕಾರಣ ತಿಳಿದುಬಂದಿಲ್ಲ. ವೈದ್ಯರ ಬಳಿ ತೆರಳಿದ ಕಾರಣದಿಂದಾಗಿ ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ತೆರಳಬೇಕಿದ್ದ ಡಿ.ಕೆ. ಶಿವಕುಮಾರ್ ಸಂಜೆ 4.15ರ ವಿಮಾನದಲ್ಲಿ ದೆಹಲಿಗೆ ತೆರಳಿದರು.