ಸಾರಾಂಶ
, ವೃತ್ತಿ ಪ್ರವೃತ್ತಿಗಳ ಜೊತೆಗೂಡಿ ಕೆಲಸ ಮಾಡುವುದೂ ಒಂದು ಕಲೆ. ಮಹಿಳೆಯರಿಗೆ ಆ ಕಲೆ ಕರಗತವಾಗಿರುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಸಾಹಿತ್ಯಕ್ಕೆ ಅದರದೇ ಆದ ಘನತೆ ಗಾಂಭಿರ್ಯತೆ, ವಿಚಾರಶೀಲತೆಯಿದೆ. ಅದರ ಚಿಂತನೆಯಿಂದ ಸಕಾರಾತ್ಮಕ ವಿಚಾರಗಳು ಹೆಚ್ಚುತ್ತವೆ ಎಂದು ಮೈಸೂರು ಆಕಾಶವಾಣಿ ನಿವೃತ್ತ ನಿಲಯ ನಿರ್ದೇಶಕಿ ವಿಜಯಾ ಹರನ್ ತಿಳಿಸಿದರು.ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ಹಾಗೂ ಮಹಿಳಾ ಪ್ರಕಾರ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿ ಪ್ರವೃತ್ತಿಗಳ ಜೊತೆಗೂಡಿ ಕೆಲಸ ಮಾಡುವುದೂ ಒಂದು ಕಲೆ. ಮಹಿಳೆಯರಿಗೆ ಆ ಕಲೆ ಕರಗತವಾಗಿರುತ್ತದೆ ಎಂದರು.
ಸಾಹಿತಿ ಡಾ.ವಿ. ಸೌಭಾಗ್ಯಲಕ್ಷ್ಮಿ ಮಾತನಾಡಿ, ಸಣ್ಣಕಥೆಗಳನ್ನು ಬರೆಯುವುದು ಒಂದು ಕಲೆ. ಸಣ್ಣದೊಂದು ಘಟನೆಯನ್ನು ಸವಿಸ್ತಾರಗೊಳಿಸುತ್ತಾ ಓದುಗರಿಗೆ ಸಂದರ್ಭದ ಅರಿವು ಮೂಡಿಸುವುದು ಸವಾಲೇ ಸರಿ ಎಂದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ಮಾಧ್ಯಮ ಪ್ರಮುಖ್ ಗಾಯತ್ರಿ ಸುಂದರೇಶ್ ಅವರು ಮಹಿಳೆ ಮತ್ತು ಹಾಸ್ಯ ಪ್ರವೃತ್ತಿ ಕುರಿತು ಮಾತನಾಡಿದರು. ನಂತರ ಗಮಕ ಕಲಾವಿದೆ ಧರಿತ್ರೀ ಆನಂದರಾವ್ ಅವರು ಗಮಕ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಇದೇ ವೇಳೆ ಜಿಲ್ಲಾ ಸಮಿತಿಯ 13ನೇ ಕೂಟ ಸರಸ್ವತಿಪುರಂ ಸಾಹಿತ್ಯಕೂಟ ಮತ್ತು ಪರಿಷದ್ ನ ಡಿಜಿಟಲ್ ಮಾಹಿತಿ ಕಣಜವನ್ನು ಲೋಕಾರ್ಪಣೆಗೊಳಿಸಲಾಯಿತು. ನಂತರ ಮಹಿಳೆಯರಿಂದ ಲಾವಣಿ, ಭಾವಗೀತೆ ಮತ್ತು ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.ಶ್ರೀ ಗಂಧ ವಲಯ ಅಧ್ಯಕ್ಷ ಡಾ.ವಿ. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿಯ ಅಧ್ಯಕ್ಷ ಶೇಷಾದ್ರಿ ಸುಬ್ರಹ್ಮಣ್ಯ ಇದ್ದರು.