ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಆಗ ಮಾತ್ರ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ ಹೇಳಿದರು.ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಪಟ್ಟಣದ ಸರ್ಕಾರಿ ಉರ್ದು ಬಾಲಕ ಮತ್ತು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗಳ ಪ್ರಾಯೋಜಕತ್ವದಲ್ಲಿ ಗುರುವಾರ ನಡೆದ 2025-26ನೇ ಸಾಲಿನ ಕಸಬಾ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ವಿದ್ಯಾರ್ಥಿಗಳ ಬದುಕನ್ನು ಉತ್ತಮಪಡಿಸುವ ಕಾರ್ಯಕ್ರಮ. ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸುತ್ತದೆ. ಬಾಲ್ಯದಿಂದಲೇ ಆಟೋಟಗಳಲ್ಲಿ ಪಾಲ್ಗೊಳ್ಳುವಂತೆ ಪೋಷಕರು ತಮ್ಮ ಮಕ್ಕಳನ್ನು ಪ್ರೇರೇಪಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಮಕ್ಕಳು ಬಹಳ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದರು.ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಪರಸ್ಪರ ಸಹಕಾರ, ದಯೆ, ಪ್ರೀತಿ ಮತ್ತಿತರ ಮೌಲ್ಯಗಳನ್ನು ಕಲಿಸುತ್ತದೆ. ಭಾಗವಹಿಸದಿದ್ದರೆ ಇಂತಹ ಮೌಲ್ಯಗಳು ವೃದ್ಧಿಯಾಗದೆ ಸಮಾಜದಲ್ಲಿ ಸಂಘರ್ಷಗಳಲ್ಲಿ ಭಾಗಿಯಾಗುತ್ತಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ ಎಂದು ತಿಳಿಸಿದರು.
ಮಕ್ಕಳು ದೈಹಿಕವಾಗಿ ಸದೃಡರಾಗಿದ್ದರೆ ಮಾತ್ರ ಮಾನಸಿಕವಾಗಿಯೂ ಉತ್ತಮರಾಗಿರಲು ಸಾಧ್ಯ. ವ್ಯಾಸಂಗದಲ್ಲಿ ಮಕ್ಕಳ ಆಕರ್ಷಣೆಯ ಭಾಗವೇ ಕ್ರೀಡೆಯಾಗಿದ್ದು, ಕ್ರೀಡೆ ಎಲ್ಲರೊಂದಿಗೆ ಒಡನಾಟಕ್ಕೆ ಕಾರಣವಾಗುತ್ತದೆ. ಅಲ್ಲದೆ ಶಾಲೆಗೆ ನಿಗದಿತ ಸಮಯಕ್ಕೆ ಸರಿಯಾಗಿ ನಿರಂತರವಾಗಿ ಹಾಜರಾಗುವ ಗುಣವನ್ನು ಬೆಳೆಸುತ್ತದೆ ಎಂದು ಸಲಹೆ ನೀಡಿದರು.ಕ್ರೀಡಾ ಸ್ಫಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಬಿ. ಕುಮಾರಸ್ವಾಮಿ, ಶಿಕ್ಷಣ ಸಂಯೋಜಕ ಜನಾರ್ಧನ್, ಸಿಆರ್‌ಪಿ ಹರಿಪ್ರಸಾದ್, ಉರ್ದು ಸಂಪನ್ಮೂಲ ವ್ಯಕ್ತಿ ಫರ್ಹಾನಬೇಗಂ, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಶೇಖರ್, ತಾಲೂಕು ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸೈಯದ್ ರಿಜ್ವಾನ್, ಎಸ್‌ಡಿಎಂಸಿ ಅಧ್ಯಕ್ಷ ತಬ್ರೈಜ್, ತಾಲೂಕು ದೈಹಿಕ ಶಿಕ್ಷಣ ಗ್ರೇಡ್-1 ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ. ಗೋವಿಂದರಾಜು, ಕೆ.ಆರ್. ನಗರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಕೆ. ಜಗದೀಶ್, ಸಾಲಿಗ್ರಾಮ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ. ಮಂಜುನಾಥ್, ಮುಖ್ಯ ಶಿಕ್ಷಕಿ ಸಲ್ಮಾ, ದೈಹಿಕ ಶಿಕ್ಷಣ ಶಿಕ್ಷಕರಾದ ಸೈಯದ್ ಖಾದರ್, ಗಿರಿಧರ್, ಜಿಜಿಎಂಎಸ್‌ನ ಮುಖ್ಯಶಿಕ್ಷಕ ಒಂಟಿಮನೆ ನಾಗರಾಜು ಇದ್ದರು.
-----------------