ಕೃತಿಕೋತ್ಸವ, ವಿಷ್ಣುದೀಪ ಶ್ರದ್ಧಾಭಕ್ತಿಯಿಂದ ಆಚರಣೆ

| Published : Dec 17 2024, 12:46 AM IST

ಕೃತಿಕೋತ್ಸವ, ವಿಷ್ಣುದೀಪ ಶ್ರದ್ಧಾಭಕ್ತಿಯಿಂದ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕೃತಿಕೋತ್ಸವ-ವಿಷ್ಣುದೀಪವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವೇದಮಂತ್ರಗಳೊಂದಿಗೆ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿಗೆ ಕುಂಭಾರತಿಮಾಡಿ ಒಳಪ್ರಾಕಾರದಲ್ಲಿ ಉತ್ಸವ ನೆರವೇರಿಸಿ ರಾಜಗೋಪುರದ ಮುಂಭಾಗ ಕರಗು ಸುಡಲಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕೃತಿಕೋತ್ಸವ-ವಿಷ್ಣುದೀಪವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ವೇದಮಂತ್ರಗಳೊಂದಿಗೆ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿಗೆ ಕುಂಭಾರತಿಮಾಡಿ ಒಳಪ್ರಾಕಾರದಲ್ಲಿ ಉತ್ಸವ ನೆರವೇರಿಸಿ ರಾಜಗೋಪುರದ ಮುಂಭಾಗ ಕರಗು ಸುಡಲಾಯಿತು.

ಮೂಲಮೂರ್ತಿಗೆ ಆರತಿ ಮಾಡಿದ ಕುಂಬಾರತಿಯನ್ನು ಪರಿಚಾರಕ ಎಂಎನ್ ಪಾರ್ಥಸಾರಥಿ ತಲೆಯ ಮೇಲಿಟ್ಟು ದೇವರ ಉತ್ಸವದೊಂದಿಗೆ ಬಂದ ನಂತರ ರಾಜಗೋಪುರದ ಮುಂಭಾಗ ದೇವರಿಗೆ ಮಂಗಳಾರತಿ ನೆರವೇರಿಸಲಾಯಿತು.

ಬಂಡೀಕಾರ ಬಲರಾಮೇಗೌಡರಿಗೆ ಮರ್ಯಾದೆ ನೆರವೇರಿದ ನಂತರ ದೊಡ್ಡ ಬಟ್ಟೆಗೆ ಎಣ್ಣೆಯಲ್ಲಿ ಅದ್ದಿ ತಯಾರಿಸಿದ ಕರಗನ್ನು ಸುಡಲಾಯಿತು. ಭಕ್ತರು ಕರಗುಪ್ರಸಾದ ಸ್ವೀಕರಿಸಿದ ನಂತರ ಸ್ವಾಮಿಗೆ ಮಂಟಪವಾಹನೋತ್ಸವ ಸಂಭ್ರದಿಂದ ನೆರವೇರಿತು. ಯೋಗಾನರಸಿಂಹಸ್ವಾಮಿ ಬೆಟ್ಟದಲ್ಲೂ ವಿಷ್ಣುದೀಪ ಕಾರ್ಯಕ್ರಮಗಳು ನೆರವೇರಿದವು. ಜನವರಿ 4ರಿಂದ ಆರಂಭವಾಗುವ ಕೊಠಾರೋತ್ಸವದವರೆಗೆ ದೇವಾಲಯದಲ್ಲಿ ಅಭಿಷೇಕ, ಉತ್ಸವಗಳು ಇರುವುದಿಲ್ಲ.

ದೇವಾಲಯದಲ್ಲಿ ಡಿಸೆಂಬರ್ 16 ರಿಂದ ದನುರ್ಮಾಸಪೂಜೆಗಳು ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆ 5 ಗಂಟೆಯಿಂದ ಪೂಜಾ ಕೈಂಕರ್ಯಗಳು ನೆರವೇರಲಿದೆ.

ಇಂದು ವಿದ್ಯುತ್ ವ್ಯತ್ಯಯ

ನಾಗಮಂಗಲ:

ಪಟ್ಟಣದ ಮಂಡ್ಯ ರಸ್ತೆಯಲ್ಲಿ ಹಾಯ್ದು ಹೋಗುವ ಮಾಗಡಿ- ಜಲಸೂರು ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಸರ್ಕಲ್‌ನಿಂದ ಅಮ್ಮನಕಟ್ಟೆವರೆಗೆ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.17ರ ಬೆಳಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ಈ ಮಾರ್ಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಾಗಮಂಗಲ ಸೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.ಗ್ರಾಮಾಂತರದಲ್ಲೂ ಕೆಲಕಾಲ ವಿದ್ಯುತ್ ವ್ಯತ್ಯಯ

ನಾಗಮಂಗಲ ತಾಲೂಕಿನ ಎಫ್-9 ಮಾಯಿಗೋನಹಳ್ಳಿ 11ಕೆವಿ ಮಾರ್ಗದಲ್ಲಿ ನಿರ್ವಹಣೆ ಇರುವುದರಿಂದ ಮಾಯಿಗೋನಹಳ್ಳಿ ಮತ್ತು ದೊಡ್ಡಾಬಾಲ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳೂ ಸೇರಿದಂತೆ ಎಫ್ 1 ಪಿ.ಚಿಟ್ಟನಹಳ್ಳಿ, ಎಫ್ 4 ದೊಡ್ಡಾಬಾಲ, ಎಫ್14 ಕಂಚಹಳ್ಳಿ, ಎಫ್ 17 ಹೂವಿನಹಳ್ಳಿ ಐ.ಪಿ. ಫೀಡರ್‌ಗಳಿಗೆ ಡಿ.17 ರಂದು ಬೆಳಗ್ಗೆ 5 ರಿಂದ 10 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಹಾಗಾಗಿ ರೈತರು ಮತ್ತು ವಿದ್ಯುತ್ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸುವಂತೆ ಸೆಸ್ಕಾಂ ಬೆಳ್ಳೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.