ಸಾರಾಂಶ
ಮಂಡ್ಯ ಜಿಲ್ಲಾ ಘಟಕ ಕೆಆರ್ ಎಸ್ ಪಕ್ಷದ ನೇತೃತ್ವದಲ್ಲಿ ಎನ್.ಎಚ್ - 84 ಶಿರಸಿ - ನಂಜನಗೂಡು ರಸ್ತೆಯನ್ನು ಪೂಜಿಸಿದ ಕಾರ್ಯಕರ್ತರು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಗುಂಡಿ ಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿರುವ ತಾಲೂಕಿನ ಹನಿಯಂಬಾಡಿ ಗ್ರಾಮದಲ್ಲಿ ಕೆಆರ್ ಎಸ್ ಕಾರ್ಯಕರ್ತರು ಶುಕ್ರವಾರ ಗುಂಡಿಗೆ ಪೂಜೆ ಸಲ್ಲಿಸಿ ವಿನೂತನ ಪ್ರತಿಭಟನೆ ನಡೆಸಿದರು.ಮಂಡ್ಯ ಜಿಲ್ಲಾ ಘಟಕ ಕೆಆರ್ ಎಸ್ ಪಕ್ಷದ ನೇತೃತ್ವದಲ್ಲಿ ಎನ್.ಎಚ್ - 84 ಶಿರಸಿ - ನಂಜನಗೂಡು ರಸ್ತೆಯನ್ನು ಪೂಜಿಸಿದ ಕಾರ್ಯಕರ್ತರು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ- ಕಿರುಗಾವಲು ರಸ್ತೆಯು ಹನಿಯಂಬಾಡಿ ಬಳಿ ತೀವ್ರವಾಗಿ ಗುಂಡಿ ಬಿದ್ದಿದೆ. ಇದರಿಂದ ಪ್ರತಿನಿತ್ಯ ಪ್ರಯಾಣಿಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಗುಂಡಿ ಪೂಜೆ ಮಾಡಿ ಗಿಡ ನೆಡುವ ಮೂಲಕ ಪೂಜೆ ನಡೆಸಿದರು.ಅಭಿವೃದ್ಧಿ ಹರಿಕಾರ ಎಂದು ಹೇಳಿಸಿಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಇದನ್ನು ಗಮನಿಸಿ ಸರಿಪಡಿಸಬೇಕು. ಅನಾಹುತ ಸಂಭವಿಸುವ ಮುನ್ನ ಸಚಿವರು, ಶಾಸಕರು ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಆರ್ ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ, ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ರೈತ ಘಟಕ ಅಧ್ಯಕ್ಷ ರಾಜಣ್ಣ, ಕೆ.ಆರ್. ಪೇಟೆ ಅಧ್ಯಕ್ಷ ನಾಗರಾಜ್, ಯುವ ಘಟಕ ಅಧ್ಯಕ್ಷ ಪ್ರಮೋದ್, ಮಂಡ್ಯ ಕಾರ್ಯದರ್ಶಿ ಜಯರಾಮ್, ಯುವ ಘಟಕ ಪ್ರಧಾನ ಕಾರ್ಯದರ್ಶಿ ದೀಪಿಕಾ, ರೈತ ಘಟಕ ಪ್ರಧಾನ ಕಾರ್ಯದರ್ಶಿ ಹರೀಶ್, ಮಳವಳ್ಳಿ ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ, ಪರಮೇಶ್ ಕುಮಾರ್ ಹಾಗೂ ತಿಮ್ಮೇಗೌಡ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.ನಾಳೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ
ಪಾಂಡವಪುರ: ತಾಲೂಕಿನ ಜಯಂತಿ ನಗರದ ಶ್ರೀಶಂಭುಲಿಂಗೇಶ್ವರ ವಸತಿ ನಿಲಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಹಾಗೂ ಶಿಕ್ಷಣ ಇಲಾಖೆಯಿಂದ ಸೆ.22 ಮತ್ತು 23ರಂದು ಸಂಸ್ಥೆ ಎಸ್‌ಎಸ್‌ಇಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. 14 ಮತ್ತು 17 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪಂದ್ಯಾವಳಿಯನ್ನು ಸೆ.20ರಂದು ಬೆಳಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಘನ ಉಪಸ್ಥಿತಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಚಂದ್ರಕುಮಾರ್ ಉದ್ಘಾಟಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶಂಭುಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪಿ.ಹೊನ್ನರಾಜು ತಿಳಿಸಿದ್ದಾರೆ.