ಸಾರಾಂಶ
ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಿರಸ್ಕರಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬೆಂಬಲಿಸಿ.
ಭಟ್ಕಳ:
ಕೆಆರ್‌ಎಸ್ ಪಕ್ಷದ ಕರ್ನಾಟಕಕ್ಕಾಗಿ ನಾವು ಹೆಸರಿನಲ್ಲಿ ರಾಜ್ಯವ್ಯಾಪಿ 13 ದಿನ 3000 ಕಿಲೋ ಮೀಟರ್ ಹಮ್ಮಿಕೊಂಡಿರುವ ಬೈಕ್ ರ್‍ಯಾಲಿ ಗುರುವಾರ ಸಂಜೆ ಕುಂದಾಪುರ ಮೂಲಕ ಭಟ್ಕಳ ಪ್ರವೇಶಿಸಿತು.ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಿರಸ್ಕರಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬೆಂಬಲಿಸಿ ಎಂದು ಜನರನ್ನು ಕೋರಲು ಹಾಗೂ ಸ್ವಚ್ಛ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಮಾತನಾಡಿ, ಈ ರ್‍ಯಾಲಿಯಲ್ಲಿ ಭ್ರಷ್ಟರು, ಅಪ್ರಾಮಾಣಿಕರು, ಸ್ವಜನಪಕ್ಷಪಾತಿ, ಅನೈತಿಕ ನಡವಳಿಕೆ ಉಳ್ಳವರು, ಸುಳ್ಳರು, ಸಮಾಜಘಾತುಕ ಶಕ್ತಿ, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯ ಮಣ್ಣುಪಾಲು ಮಾಡುತ್ತಿರುವ ಜೆಸಿಬಿ ರಾಜಕಾರಣಿಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.ತಮ್ಮ ಮತ್ತು ತಮ್ಮ ಮಕ್ಕಳ ರಾಜಕೀಯ ನಾಯಕರೆಂದು ಒಪ್ಪಿಕೊಳ್ಳದೆ ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕೆಆರ್‌ಎಸ್ ಪಕ್ಷದ ನಾಡಪ್ರೇಮಿ ಸೈನಿಕರನ್ನು ಮತ್ತು ಕೆಆರ್‌ಎಸ್ ಪಕ್ಷ ಬೆಂಬಲಿಸಿ, ಭ್ರಷ್ಟ ವ್ಯವಸ್ಥೆ ತೊಲಗಿಸಿ, ಭವ್ಯ ಸಮಾಜ ನಿರ್ಮಿಸಿ. ಹೆಮ್ಮೆ ಮತ್ತು ಘನತೆಯಿಂದ ಜೀವಿಸಿ, ಸ್ವಾಭಿಮಾನದಿಂದ ಬದುಕಿ, ಬಾಳಿ ಎಂದು ಕರೆ ನೀಡಿದರು.ಬೈಕ್ ರ್‍ಯಾಲಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್.ಎಚ್., ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್., ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಮಠದ, ಬಿ.ಜಿ. ಕುಂಬಾರ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನೀಲಕಂಠ ನಾಯ್ಕ, ಯುವ ಘಟಕದ ಅಧ್ಯಕ್ಷ ಸೀತಾರಾಮ್ ಇದ್ದರು.