ಸಾರಾಂಶ
ದೊಡ್ಡಬಳ್ಳಾಪುರ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದ್ದು, ಆಸಕ್ತ ಚುನಾವಣಾ ಸ್ಪರ್ಧಾಕಾಂಕ್ಷಿಗಳನ್ನು ಸಂದರ್ಶನಕ್ಕೆ ಆಹ್ವಾನಿಸುತ್ತಿದೆ ಎಂದು ಕೆಆರ್‌ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಶಿವಶಂಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧೆ ಮಾಡ ಬಯಸುವ ಅಭ್ಯರ್ಥಿಗಳ ಸಂದರ್ಶನ ಜನವರಿ 6 ಮತ್ತು 7ರಂದು ಪಕ್ಷದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಚುನಾವಣಾ ವಿಚಾರವೂ ಸೇರಿದಂತೆ ಇತರೆ ಹಲವು ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಇದೇ 23ರಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಎಂದು ತಿಳಿಸಿದರು.ಅಭ್ಯರ್ಥಿಗಳ ಸಂದರ್ಶನವು ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯಲ್ಲಿದ್ದು, ಆಸಕ್ತರು ಸಂದರ್ಶನಕ್ಕೆ ಹಾಜರಾಗಬೇಕು, ಪಕ್ಷದ ಹಾಲಿ ಸದಸ್ಯರಾಗಿರುವವರಿಗೆ 5 ಸಾವಿರ ರುಪಾಯಿ ಹಾಗೂ ಹೊಸದಾಗಿ ಪಕ್ಷ ಸೇರಿ ಸಂದರ್ಶನಕ್ಕೆ ಹಾಜರಾಗುವವರಿಗೆ 10 ಸಾವಿರ ರುಪಾಯಿ ಸಂದರ್ಶನ ಶುಲ್ಕವಿರುತ್ತದೆ. ಸಂದರ್ಶನದ ನಂತರ ರಾಜ್ಯ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂಭಾವ್ಯ ಅಭ್ಯರ್ಥಿಗಳು ಎಂದು ಘೋಷಿಸುತ್ತದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿಗಾಗಿ 96117 20802 ಇಲ್ಲಿಗೆ ಸಂಪರ್ಕಿಸಬಹುದು ಎಂದರು.
ಜಿಲ್ಲಾಧ್ಯಕ್ಷ ಜೆ.ವೆಂಕಟೇಶ್ ಮಾತನಾಡಿ, ಪಕ್ಷ ಉತ್ತಮ ಹಾಗೂ ಜನಪರ ಕಾಳಜಿಯ ಪ್ರಾಮಾಣಿಕ ರಾಜಕಾರಣಕ್ಕೆ ರಾಜ್ಯದಲ್ಲಿರುವ ಏಕೈಕ ವೇದಿಕೆಯಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕವಾಗಿ ಚಿಂತಿಸುವ, ಅಕ್ರಮ ನಡೆಸದೆ ಚುನಾವಣೆ ಎದುರಿಸುವ, ದೇಣಿಗೆ ಮೂಲಕ ಚುನಾವಣಾ ಖರ್ಚು ವೆಚ್ಚವನ್ನು ಎದುರಿಸುವ ಮನಸ್ಥಿತಿ ಇರುವವರು ಪಕ್ಷಕ್ಕೆ ಬರಬಹುದಾಗಿದೆ ಎಂದರು.ತಾಲೂಕು ಅಧ್ಯಕ್ಷ, ಹೆಚ್.ಎನ್.ವೇಣು, ಆನಂದ್ ಕುಮಾರ್, ಸಾಸಲು ಹೋಬಳಿಯ ನಾಗರಾಜು ಉಪಸ್ಥಿತರಿದ್ದರು.
31ಕೆಡಿಬಿಪಿ4-ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಿವಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.