ಕೆಆರ್‌ಎಸ್ ಡ್ಯಾಂ ಕ್ರಸ್ಟ್ ಗೇಟ್ ಪರಿಶೀಲಿಸಲು ಒತ್ತಾಯ

| Published : Aug 14 2024, 01:04 AM IST

ಸಾರಾಂಶ

ಅಧಿಕಾರಿಗಳು ಕೆಆರ್ ಎಸ್ ಅಣೆಕಟ್ಟೆ ಸಂರಕ್ಷಣೆ ಬಗ್ಗೆಯೂ ಕ್ರಮವಹಿಸಬೇಕು. ಮುಂದಿನ ದಿನ ದಿನಗಳಲ್ಲಿ ಮತ್ತಷ್ಟುಮಳೆಯಾಗಿ ಅಣೆಕಟ್ಟೆ ನೀರು ಹರಿದು ಬರುವ ಸಾಧ್ಯತೆಗಳಿವೆ. ನೀರಾವರಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ, ನೀರಾವರಿ ಸಲಹಾ ಹಾಗೂ ಸಂರಕ್ಷಣ ಸಮಿತಿ ಅಗತ್ಯ ಮುಂಜಾಗೃತ ಕ್ರಮವಹಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೆಆರ್‌ಎಸ್ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಡ್ಯಾಂನ ಕ್ರಸ್ಟ್ ಗೇಟ್ ಪರಿಶೀಲನೆ ನಡೆಸುವಂತೆ ಕಾಂಗ್ರೆಸ್ ಮುಖಂಡ ಬಿ.ಟಿ.ಮಂಜುನಾಥ್ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕೆಆರ್‌ಎಸ್ ಅಣೆಕಟ್ಟೆಯೂ ಸಾಕಷ್ಟು ಹಳೆಯ ಅಣೆಕಟ್ಟೆಯಾಗಿದೆ. ತುಂಗಾಭದ್ರ ಡ್ಯಾಂನ ಕ್ರಸ್ಟ್ ಗೇಟ್ ಮುರಿದು ನೀರು ಪೂಲಾಗುತ್ತಿದೆ. ಆ ಘಟನೆಯಿಂದಾಗಿ ಇಲ್ಲಿನ ರೈತರಲ್ಲೂ ಸಾಕಷ್ಟು ಆತಂಕ ತಂದಿದೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ಮೂರು ವರ್ಷಗಳಿಂದ ಮಳೆ ಇಲ್ಲದೆ ಭೀಕರ ಬರಗಾಲ ಎದುರಾಗಿ ರೈತ ಸಮುದಾಯ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ವರುಣದೇವನ ಕೃಪೆಯಿಂದ ಈ ಬಾರಿ ಉತ್ತಮ ಮಳೆಯಾಗಿ ರಾಜ್ಯದ ಬಹುತೇಕ ಅಣೆಕಟ್ಟೆಗಳು ಭರ್ತಿಯಾಗಿ ರೈತರಲ್ಲಿ ಹರ್ಷಮನೆ ಮಾಡುವಂತೆ ಮಾಡಿದೆ.

ಆದರೆ, ತುಂಗಾಭದ್ರ ಡ್ಯಾಂನ 19ನೇ ಕ್ರಸ್ಟ್ ಗೇಟ್ ಮುರಿದು ಅಪಾರ ಪ್ರಮಾಣದಲ್ಲಿ ನೀರು ಹರಿದು ಹೊರ ಹೋಗುತ್ತಿದೆ. ಇದರಿಂದ ಆ ಭಾಗದ ಜನರು, ರೈತ ಸಮುದಾಯದಲ್ಲಿ ಸಾಕಷ್ಟು ನೋವುಂಟು ಮಾಡಿದೆ. ನೀರು ಕಡಿಮೆಯಾದರೆ ಬಳಿಕವಷ್ಟೆ ಗೇಟ್ ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಆತಂಕದ ವಿಚಾರವಾಗಿದೆ. ಆದ್ದರಿಂದ ಮುಂಜಾಗೃತೆ ವಹಿಸಿ ಅಧಿಕಾರಿಗಳು ಕೆಆರ್ ಎಸ್ ಅಣೆಕಟ್ಟೆ ಸಂರಕ್ಷಣೆ ಬಗ್ಗೆಯೂ ಕ್ರಮವಹಿಸಬೇಕು. ಮುಂದಿನ ದಿನ ದಿನಗಳಲ್ಲಿ ಮತ್ತಷ್ಟುಮಳೆಯಾಗಿ ಅಣೆಕಟ್ಟೆ ನೀರು ಹರಿದು ಬರುವ ಸಾಧ್ಯತೆಗಳಿವೆ. ನೀರಾವರಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ, ನೀರಾವರಿ ಸಲಹಾ ಹಾಗೂ ಸಂರಕ್ಷಣ ಸಮಿತಿ ಅಗತ್ಯ ಮುಂಜಾಗೃತ ಕ್ರಮವಹಿಸಬೇಕು. ಕಾಲಕಾಲಕ್ಕೆ ಗೇಟ್ ಗಳ ಸಂರಕ್ಷಣೆಯ ಬಗ್ಗೆ ಪರಿಶೀಲಿಸಿ ಅನಾಹುತಗಳು ಸಂಭವಿಸದಂತೆ ಕ್ರಮವಹಿಸಬೇಕು ಎಂದು ಬಿ.ಟಿ.ಮಂಜುನಾಥ್ ಮನವಿ ಮಾಡಿದ್ದಾರೆ.