ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಮುಂದಿನ ದಿನಗಳಲ್ಲಿ ನವಿಲುತೀರ್ಥ ಉದ್ಯಾನ, ವೀಕ್ಷಕರಿಗೆ ಆಸನ ಸೇರಿದಂತೆ ಮಲಪ್ರಭಾ ಜಲಾಶಯವನ್ನು ಅಭಿವೃದ್ಧಿಪಡಿಸಿ, ಕೆ.ಆರ್.ಎಸ್. ಮಾದರಿಯಲ್ಲಿ ಮಾರ್ಪಾಡು ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಮಲಪ್ರಭಾ ನೀರಾವರಿ ಸಲಹಾ ಸಮಿತಿ ವತಿಯಿಂದ ಮಂಗಳವಾರ ಸವದತ್ತಿ ತಾಲೂಕಿನ ನವಿಲುತೀರ್ಥ ಅಣೆಕಟ್ಟು ಸ್ಥಳದಲ್ಲಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಮಳೆಯಿಂದ ಮಲಪ್ರಭಾ ಜಲಾಶಯ ಮಟ್ಟ ಸಂಪೂರ್ಣ ಭರ್ತಿಯಾಗಿದ್ದು, ಪ್ರತಿವರ್ಷದಂತೆ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಸವದತ್ತಿ, ಬೈಲಹೊಂಗಲ ತಾಲೂಕುಗಳಿಗೆ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಜನ, ಜಾನುವಾರುಗಳಿಗೆ, ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.ರಾಜ್ಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಎಲ್ಲ ಅಣೆಕಟ್ಟುಗಳು ಸಂಪೂರ್ಣ ಭರ್ತಿಯಾಗಿದ್ದು, ಮಲಪ್ರಭಾ ಜಲಾಶಯ 52 ವರ್ಷಗಳಲ್ಲಿ 10 ಬಾರಿ ಮಾತ್ರ ಭರ್ತಿಯಾಗಿದೆ. ವರುಣನ ಕೃಪೆ, ತಾಯಿ ರೇಣುಕಾ ಯಲ್ಲಮ್ಮ ಅನುಗ್ರಹದಿಂದ ಗಂಗಾಪೂಜೆಯೊಂದಿಗೆ ಬಾಗಿನ ಅರ್ಪಿಸುವ ಭಾಗ್ಯ ನನಗೆ ಸಿಕ್ಕಿರುವುದು ಪುಣ್ಯವೆಂದು ಭಾವಿಸಿ ನೀರಾವರಿ ಸಲಹಾ ಮಂಡಳಿ ಅಧ್ಯಕ್ಷೆಯಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಎಂದ ಅವರು, ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ಶಕ್ತಿಮೀರಿ ರೈತರನ್ನು ಕಾಪಾಡುವ ಕೆಲಸ ಮಾಡಿದ್ದೇವೆ, ಈಗ ಮಲಪ್ರಭೆ ತಾಯಿಯ ಕೃಪೆ ನಮಗೆ ಸಿಕ್ಕಿದೆ ಎಂದು ಹೇಳಿದರು.ಬೇಸಿಗೆ ಕಾಲದಲ್ಲಿ ಬಾದಾಮಿ, ರಾಮದುರ್ಗ, ನವಲಗುಂದ ತಾಲೂಕುಗಳ ಜೊತೆಗೆ ಮಲಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೂ ನೀರು ಬಿಡುಗಡೆಗೆ ಜಲಾಶಯದಲ್ಲಿ ನೀರು ಸಂಗ್ರಹ ಮಾಡಲಾಗಿದೆ. ಈ ವರ್ಷ ಕುಡಿಯುವ ನೀರಿಗಾಗಲಿ ಅಥವಾ ನೀರಾವರಿಗಾಗಲಿ ಯಾವುದೇ ರೀತಿಯ ತೊಂದರೆಯಾಗಲ್ಲ. 16 ಟಿಎಂಸಿ ಕುಡಿಯುವ ನೀರಿಗೆ ಇಟ್ಟುಕೊಂಡು, 16 ಟಿಎಂಸಿ ನೀರಾವರಿಗಾಗಿ ಬಳಕೆ ಮಾಡಲಾಗುತ್ತದೆ. ಈ ವರ್ಷ ರೈತರ ಬೇಡಿಕೆಗೆ ತಕ್ಕಂತೆ ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲುವೆಗಳ ಮುಖಾಂತರ ನೀರನ್ನು ಬಿಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಮಲಪ್ರಭಾ ಜಲಾಶಯ ಕೆ.ಆರ್.ಎಸ್‌ಗಿಂತ ಕಡಿಮೆ ಇಲ್ಲ, ಅಭಿವೃದ್ಧಿಪಡಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ಕೆ.ಆರ್.ಎಸ್ ಮಾದರಿಯ ಜಲಾಶಯ ಅಭಿವೃದ್ಧಿಗೆ ಪ್ರಯತ್ನಿಸಬೇಕಿದೆ. ಇದಕ್ಕಾಗಿ ಸರ್ಕಾರದಿಂದ ₹15-20 ಕೋಟಿ ಅನುದಾನ ತರಲು ಎಲ್ಲ ಶಾಸಕರು ಮತ್ತು ಸಚಿವರು ಸೇರಿ ನಿರಂತರವಾಗಿ ಶ್ರಮಿಸೋಣ ಎಂದ ಅವರು, ನಾಲ್ಕು ಜಿಲ್ಲೆಯ 13 ತಾಲೂಕುಗಳ ಜನರು ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಈ ಜಲಾಶಯ ಅವಲಂಬಿತರಾಗಿದ್ದಾರೆ. ಈಗ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜನರು ಸಂತಸದಲ್ಲಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುಂಚೆ ನವಿಲುತೀರ್ಥ ಅಣೆಕಟ್ಟೆಯಲ್ಲಿ ನವೀಕೃತಗೊಂಡ ಪ್ರವಾಸಿ ಮಂದಿರದ ಕಟ್ಟಡವನ್ನು ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು.ಬದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಸವದತ್ತಿ ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಮುನವಳ್ಳಿ ಪುರಸಭೆ ಅಧ್ಯಕ್ಷ ಸಿ.ಬಿ. ಬಾಳಿ, ಪಕ್ಷದ ಮುಖಂಡರಾದ ಮೃಣಾಲ ಹೆಬ್ಬಾಳಕರ್, ರವೀಂದ್ರ ಯಲಿಗಾರ, ಮಹಾಮಂಡಳದ ಅಧ್ಯಕ್ಷ ಸದಶಿವಗೌಡ ಪಾಟೀಲ, ಉಮೇಶ ಬಾಳಿ, ಚಂದ್ರು ಜಂಬ್ರಿ, ವಿ.ಎಸ್. ಮಧುಕರ, ಅಶೋಕ ವಾಸನದ, ವಿವೇಕ ಮುದಿಗೌಡರ, ರಮೇಶ ಮೊಕಾಶಿ, ಎಸ್.ಬಿ. ಮಲ್ಲಿಗವಾಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ಅಶ್ವತ ವೈದ್ಯ, ಮಹಾಂತೇಶ ನಡನಳ್ಳಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.
ಬಾಳು ಹೊಸಮನಿ ನಿರೂಪಿಸಿ ವಂದಿಸಿದರು.ಮಲಪ್ರಭೆಯ ಇಂದಿರಾ ಗಾಂಧಿ ಜಲಾಶಯ ತುಂಬಿ ಹರಿಯುತ್ತಿದೆ. ಎಲ್ಲರೂ ಸಂತಸ ಪಡುವ ವಿಷಯ. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈ ಭಾಗದ ರೈತರಿಗೆ, ಜನಕರುಗಳಿಗೆ ಕುಡಿಯುವ ನೀರಿನ ಯಾವುದೇ ತೊಂದರೆ ಇಲ್ಲ. ಸರ್ಕಾರದಿಂದ ಜಲಾಶಯದ ಇನ್ನಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.- ವಿಶ್ವಾಸ ವೈದ್ಯ ಶಾಸಕ ಸವದತ್ತಿಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ 4 ಜಿಲ್ಲೆ ಹಾಗೂ 13 ತಾಲೂಕುಗಳು ಬರುತ್ತವೆ. ಸದ್ಯದಲ್ಲಿಯೇ ಮಲಪ್ರಭಾ ಕಳಸಾ-ಬಂಡೂರಿ ಯೋಜನೆಗೆ ವನ್ಯಜೀವಿ ಮಂಡಳಿ ಒಪ್ಪಿಗೆ ಸಿಗಲಿದ್ದು, ತಿಂಗಳೊಳಗೆ ಈ ಭಾಗದ ಜನರಿಗೆ ಸಂತಸದ ಸುದ್ದಿ ದೊರಕಲಿದೆ.
-ಎನ್.ಎಚ್. ಕೋನರಡ್ಡಿ ನವಲಗುಂದ ಶಾಸಕ