ಕೆಆರ್‌ಎಸ್‌ನ್ನು ಟಿಪ್ಪುಸುಲ್ತಾನ್ ಸಾಗರ ಮಾಡುವ ಹುನ್ನಾರ: ಆರ್.ಅಶೋಕ್

| Published : Aug 04 2025, 11:45 PM IST

ಕೆಆರ್‌ಎಸ್‌ನ್ನು ಟಿಪ್ಪುಸುಲ್ತಾನ್ ಸಾಗರ ಮಾಡುವ ಹುನ್ನಾರ: ಆರ್.ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ವಡಿ ಅವರ ಹೆಸರಿಗೆ ಕಾಂಗ್ರೆಸ್ ಪಕ್ಷದಿಂದ ಪದೇ ಪದೇ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಅವರಿಗಿಂತ ಹೆಚ್ಚು ಅಭಿವೃದ್ಧಿ ಮಾಡಿರುವುದಾಗಿ ದುರಹಂಕಾರದ ಮಾತುಗಳನ್ನಾಡಿದರೆ, ಮಹದೇವಪ್ಪ ಕೃಷ್ಣರಾಜಸಾಗರಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಹೇಳುವ ಮೂಲಕ ಕೃಷ್ಣರಾಜಸಾಗರ ಹೆಸರನ್ನೇ ಬದಲಿಸುವುದಕ್ಕೆ ಕಾಂಗ್ರೆಸ್‌ನವರು ಚಾಲನೆ ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್‌ನವರು ಕೃಷ್ಣರಾಜ ಸಾಗರವನ್ನು ಟಿಪ್ಪು ಸುಲ್ತಾನ್ ಸಾಗರ ಎಂದು ಮರು ನಾಮಕರಣ ಮಾಡುವುದಕ್ಕೆ ಹುನ್ನಾರ ನಡೆಸಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ನಾಲ್ವಡಿ ಅವರ ಹೆಸರಿಗೆ ಕಾಂಗ್ರೆಸ್ ಪಕ್ಷದಿಂದ ಪದೇ ಪದೇ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಅವರಿಗಿಂತ ಹೆಚ್ಚು ಅಭಿವೃದ್ಧಿ ಮಾಡಿರುವುದಾಗಿ ದುರಹಂಕಾರದ ಮಾತುಗಳನ್ನಾಡಿದರೆ, ಮಹದೇವಪ್ಪ ಕೃಷ್ಣರಾಜಸಾಗರಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಹೇಳುವ ಮೂಲಕ ಕೃಷ್ಣರಾಜಸಾಗರ ಹೆಸರನ್ನೇ ಬದಲಿಸುವುದಕ್ಕೆ ಕಾಂಗ್ರೆಸ್‌ನವರು ಚಾಲನೆ ಕೊಟ್ಟಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

೧೧೨ ವರ್ಷ ಅಡಿಗಲ್ಲು ಎಲ್ಲಿತ್ತು?

ಟಿಪ್ಪು ಕನ್ನಡಿಗನಲ್ಲ. ಅವನು ಪರ್ಷಿಯಾ ದೇಶದವನು. ಮತಾಂಧ, ನಾಡದ್ರೋಹಿ. ಅವನು ಸತ್ತಿದ್ದು ೧೭೯೯ರಲ್ಲಿ. ಕೃಷ್ಣರಾಜಸಾಗರ ನಿರ್ಮಾಣಕ್ಕೆ ಚಾಲನೆ ನೀಡಿದ್ದು ೧೯೧೧ರಲ್ಲಿ. ಟಿಪ್ಪು ಸತ್ತಿದ್ದಕ್ಕೂ ಕೆಆರ್‌ಎಸ್ ನಿರ್ಮಾಣಗೊಂಡಿದ್ದಕ್ಕೂ ೧೧೨ ವರ್ಷಗಳ ಅಂತರವಿದೆ. ಅಲ್ಲಿಯವರೆಗೆ ಆ ಅಡಿಗಲ್ಲು ಎಲ್ಲಿತ್ತು. ಅಲ್ಲಿಯವರೆಗೆ ಕಾಣೆಯಾಗಿದ್ದು ದಿಢೀರ್ ಪ್ರತ್ಯಕ್ಷವಾಗಿದ್ದು ಎಲ್ಲಿಂದ. ಅಡಿಗಲ್ಲಿನಲ್ಲಿರುವ ಪರ್ಷಿಯನ್ ಭಾಷೆಯನ್ನು ತರ್ಜುಮೆ ಮಾಡಲಿ. ೧೭೯೯ರಲ್ಲಿದ್ದದ್ದು ಹಳೆಗನ್ನಡ. ಅಡಿಗಲ್ಲು ಎನ್ನುತ್ತಿರುವ ಕಲ್ಲಿನ ಮೇಲಿರುವುದು ಹೊಸಗನ್ನಡ. ಇದೆಲ್ಲವನ್ನೂ ನೋಡಿದರೆ ಇದರ ಹಿಂದೆ ಯಾರದ್ದೋ ಕೈವಾಡವಿದೆ. ಒಳಸಂಚಿದೆ ಎನ್ನುವುದು ಅರಿವಾಗುತ್ತದೆ ಎಂದು ಶಂಕೆ ವ್ಯಕ್ತಪಡಿಸಿದರು.

ನಾಲ್ವಡಿ ಅವರು ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದ್ದಕ್ಕೆ, ನಿರ್ಮಾಣ ಕಾರ್ಯ ಪ್ರಾರಂಭದಿಂದ ಮುಗಿಯುವವರೆಗೆ ಪ್ರತಿ ದಿನದ ದಾಖಲೆ ಇದೆ. ಆದರೆ, ಟಿಪ್ಪು ಅಡಿಗಲ್ಲು ಹಾಕಿರುವುದಕ್ಕೆ ಯಾವ ದಾಖಲೆ ಇದೆ. ಹಾಗಾದರೆ ಆ ಸಮಯದಲ್ಲೇ ಅಣೆಕಟ್ಟೆಗೆ ಟಿಪ್ಪು ಹೆಸರಿಡಬಹುದಿತ್ತು. ನಾಲ್ವಡಿ ಅವರೇ ಕೆಆರ್‌ಎಸ್ ನಿರ್ಮಾತೃ ಎನ್ನುವುದು ಜಗಜ್ಜಾಹೀರು ಆಗಿರುವಾಗ ಮಹದೇವಪ್ಪನವರ ಹೇಳಿಕೆ ಬಾಲಿಷ ಎಂದು ಮೂದಲಿಸಿದರು.

ಮನೆ-ಮಕ್ಕಳಿಗೆ ಟಿಪ್ಪು ಹೆಸರಿಡಲಿ:

ಕಾಂಗ್ರೆಸ್‌ನವರಿಗೆ ಟಿಪ್ಪು ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಅವರ ಮನೆ-ಮಕ್ಕಳಿಗೆಲ್ಲಾ ಟಿಪ್ಪು ಹೆಸರಿಡಲಿ. ಕಾಂಗ್ರೆಸ್‌ ಕಚೇರಿಗೆ ಟಿಪ್ಪುಸುಲ್ತಾನ್‌ ಕಾಂಗ್ರೆಸ್‌ ಸಮಿತಿ ಎಂದು ಹೆಸರಿಡಲಿ. ಅದನ್ನು ಬಿಟ್ಟು ನಾಲ್ವಡಿ ಅವರ ಹೆಸರಿಗೆ ಚ್ಯುತಿ ತರುವ ಕೆಲಸ ಮಾಡಬಾರದು. ಯತೀಂದ್ರ ನಾಲ್ವಡಿಗಿಂತ ಹೆಚ್ಚು ಕೆಲಸ ಮಾಡಿದವರು ಸಿದ್ದರಾಮಯ್ಯ ಎನ್ನುವುದೇ ಹಾಸ್ಯಾಸ್ಪದ. ನಾಲ್ವಡಿ ಅವರು ಕೆಆರ್‌ಎಸ್ ಅಥವಾ ಬೃಹತ್ ಕೈಗಾರಿಕೆಗಳನ್ನು ನಿರ್ಮಿಸುವಾಗ ಜನರ ಮೇಲೆ ತೆರಿಗೆ ಹಾಕಲಿಲ್ಲ. ಸಿದ್ದರಾಮಯ್ಯ ಪ್ರತಿ ವರ್ಷ ಜನರ ಮೇಲೆ ಲಕ್ಷಾಂತರ ರು. ತೆರಿಗೆ ಹೊರೆ ಹಾಕುತ್ತಿದ್ದಾರೆ. ಅವರ ಅವಧಿಯಲ್ಲಿ ಒಂದು ವಿಶ್ವವಿದ್ಯಾಲಯವನ್ನು ಕಟ್ಟಲಾಗಲಿಲ್ಲ. ಒಂಬತ್ತು ವಿವಿಗಳಿಗೆ ಅನುದಾನ ಕೊಡುವ ಯೋಗ್ಯತೆ ಪ್ರದರ್ಶಿಸಲಿಲ್ಲ. ಅಂತಹವರು ವಿಶ್ವ ವಿದ್ಯಾಲಯ ಕಟ್ಟಿ ಬೆಳೆಸಿದ ನಾಲ್ವಡಿಯವರಿಗೆ ಹೋಲಿಸಿಕೊಳ್ಳುತ್ತಾರೆ ಎಂದು ಕುಟುಕಿದರು.

ರಾಹುಲ್ ಬಳಿ ಯಾವ ದಾಖಲೆಗಳೂ ಇಲ್ಲ:

ಮತಗಳ್ಳತನದ ಬಗ್ಗೆ ಆಟಂಬಾಂಬ್ ಸಿಡಿಸುವುದಾಗಿ ಹೇಳುತ್ತಿರುವ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಬಳಿ ಯಾವ ದಾಖಲೆಗಳೂ ಇಲ್ಲ. ಒಮ್ಮೆ ಅವರ ಬಳಿ ದಾಖಲೆಗಳು ಇದ್ದಿದ್ದರೆ ನ್ಯಾಯಾಲಯಕ್ಕೆ ಹೋಗುತ್ತಿದ್ದರು. ಜನರ ಮುಂದೇಕೆ ಬರುತ್ತಿದ್ದರು ಎಂದು ಆರ್.ಅಶೋಕ್ ಪ್ರಶ್ನಿಸಿದರು.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ೧೩೬ ಸ್ಥಾನಗಳು ಬಂದವು. ಆಗ ಮತಪಟ್ಟಿ, ಚುನಾವಣಾ ಆಯೋಗ ಸರಿಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ೯ ಸ್ಥಾನಗಳಿಗೆ ಕುಸಿದಾಗ ಮತಗಳ್ಳತನವಾಗಿರುವುದು, ಚುನಾವಣಾ ಆಯೋಗ ಸರಿಯಿಲ್ಲದಿರುವ ಬಗ್ಗೆ ಅರಿವಾಯಿತೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಪಕ್ಷ. ಮೊದಲಿಗೆ ಕರಡು ಮತದಾರರ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳ ಏಜೆಂಟರಿಗೆ ನೀಡುತ್ತಾರೆ. ಆನಂತರ ಅಂತಿಮಪಟ್ಟಿ ನೀಡುತ್ತಾರೆ. ಮತಪಟ್ಟಿಯಲ್ಲಿ ದೋಷವಿದ್ದರೆ ಆಗಲೇ ಪ್ರಶ್ನಿಸಬಹುದಿತ್ತಲ್ಲ. ಕಡೇ ಪಕ್ಷ ಚುನಾವಣೆ ಮುಗಿದ ನಂತರ ಆಕ್ಷೇಪಣೆ ಸಲ್ಲಿಕೆಗೆ ೪೫ ದಿನಗಳ ಕಾಲ ಅವಕಾಶವಿತ್ತು. ಆಗಲೇ ಏಕೆ ಪ್ರಶ್ನಿಸಲಿಲ್ಲ. ಪ್ರತಿಭಟನೆ ನಡೆಸಲು ಬೆಂಗಳೂರಿಗೆ ಬರುತ್ತಿರುವ ರಾಹುಲ್ ಗಾಂಧಿ ಬಳಿ ಆಟಂಬಾಂಬ್, ಕ್ಷಿಪಣಿ, ಮೆಷಿನ್‌ಗನ್ ಸೇರಿದಂತೆ ಯಾವ ಬಾಂಬ್‌ಗಳಿವೆಯೋ ಎಲ್ಲವನ್ನು ಒಟ್ಟಿಗೆ ಹಾಕಿಬಿಡಲಿ ಎಂದು ಅಶೋಕ್ ಒತ್ತಾಯಿಸಿದರು.

ಮತಪಟ್ಟಿ ಪರಿಷ್ಕರಣೆ ಬೇಡ:

ಕರ್ನಾಟಕದಲ್ಲಿ ಮತಪಟ್ಟಿ ಪರಿಷ್ಕರಣೆಗೆ ಒತ್ತಾಯಿಸುವ ರಾಹುಲ್‌ ಗಾಂಧಿ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮತಪಟ್ಟಿ ಪರಿಷ್ಕರಣೆ ಬೇಡ ಎಂದು ಒತ್ತಾಯಿಸುತ್ತಿದ್ದಾರೆ. ಏಕೆಂದರೆ, ಅಲ್ಲಿ ಬಾಂಗ್ಲಾ ದೇಶದ ಅಕ್ರಮ ವಲಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಅದಕ್ಕಾಗಿ ಪರಿಷ್ಕರಣೆಗೆ ಕಾಂಗ್ರೆಸ್‌ನವರು ಅಡ್ಡಗಾಲಾಗಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ಸೇ ಚುನಾವಣಾ ಅಕ್ರಮಗಳ ಸರದಾರ:

ಚುನಾವಣಾ ಅಕ್ರಮಗಳ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷವೇ ಅಕ್ರಮಗಳ ಸರದಾರನಾಗಿದೆ. ಇಂದಿರಾಗಾಂಧಿ ಅವರು ಚುನಾವಣಾ ಸಮಯದಲ್ಲಿ ಅಕ್ರಮವೆಸಗಿ ೬ ತಿಂಗಳ ಕಾಲ ಅಮಾನತುಗೊಂಡಿದ್ದರು. ಇಂದು ದೇಶದಲ್ಲಿ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ. ಎಲ್ಲಾ ಕಡೆಯಿಂದ ಸೋಲಿನ ಹೊಡೆತ ಕಾಂಗ್ರೆಸ್‌ಗೆ ಬೀಳುತ್ತಿದೆ ಎಂದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಇಂದ್ರೇಶ್, ಮುಖಂಡರಾದ ಎಸ್.ಸಚ್ಚಿದಾನಂದ, ಶೋಕ್ ಜಯರಾಂ, ವಸಂತಕುಮಾರ್ ಇತರರಿದ್ದರು.