ಜೆಡಿಎಸ್‌ನಲ್ಲೇ ಇರಲು ಕೆ.ಎಸ್.ವಿಜಯ್‌ಆನಂದ್ ತೀರ್ಮಾನ

| Published : Mar 24 2024, 01:31 AM IST

ಸಾರಾಂಶ

ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕರು ನನ್ನೊಂದಿಗೆ ಮಾತನಾಡಿದ್ದರು. ಜೆಡಿಎಸ್ ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ ಎಲ್ಲರೂ ನನ್ನೊಂದಿಗೆ ಮಾತನಾಡಿ, ಬೇರೆ ನಿರ್ಧಾರ ಮಾಡದಂತೆ ಸಲಹೆ ನೀಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಿತ್ಯ ಸಚಿವ ಕೆ.ಎಸ್.ವಿಜಯ್‌ಆನಂದ್ ಅವರ ಮೊಮ್ಮಗ ಹಾಗೂ ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಜೆಡಿಎಸ್‌ನಲ್ಲೇ ಉಳಿದು ಮುಂದಿನ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ.

ಶನಿವಾರ ನಗರದ ಕಲ್ಲಹಳ್ಳಿಯ ವಿ.ವಿ.ನಗರದಲ್ಲಿರುವ ಹೊಂಬಾಳೆ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಬೆಂಬಲಿಗರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಆರೇಳು ತಿಂಗಳುಗಳಿಂದ ನಾನು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೆ. ಈ ಸಮಯದಲ್ಲಿ ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ಹಲವಾರು ಮಂದಿ ಕೇಳುತ್ತಲೇ ಇದ್ದರು. ನಾನು ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ ಎಂದು ಹೇಳಿದರು.

ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕರು ನನ್ನೊಂದಿಗೆ ಮಾತನಾಡಿದ್ದರು. ಜೆಡಿಎಸ್ ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ ಎಲ್ಲರೂ ನನ್ನೊಂದಿಗೆ ಮಾತನಾಡಿ, ಬೇರೆ ನಿರ್ಧಾರ ಮಾಡದಂತೆ ಸಲಹೆ ನೀಡಿದ್ದರು. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೂರವಾಣಿ ಮುಖಾಂತರ ನನ್ನನ್ನು ಎರಡು ಬಾರಿ ಸಂಪರ್ಕಿಸಿ ಬೆಂಗಳೂರಿಗೆ ಬರುವಂತೆ ತಿಳಿಸಿದ್ದರು. ಅಂದಿನ ಪರಿಸ್ಥಿತಿಯಲ್ಲಿ ನಿಮ್ಮನ್ನು ಕೇಳದೆ ಹೋಗಲೇಬೇಕಾದ ಪರಿಸ್ಥಿತಿ ಇತ್ತು, ಹೋಗಿ ಭೇಟಿ ಮಾಡಿದೆ. ಆ ಸಮಯದಲ್ಲಿ ಕುಮಾರಸ್ವಾಮಿ ಅವರು ನನ್ನ ಜೊತೆಯಲ್ಲೇ ಇರುವಂತೆ ತಿಳಿಸಿದಾಗ, ನಾನು ನನ್ನ ಬೆಂಬಲಿಗರ ಅಭಿಪ್ರಾಯ ಕೇಳಿ ನಿರ್ಧಾರ ತಿಳಿಸುವುದಾಗಿ ಹೇಳಿ ಬಂದಿದ್ದೇನೆ ಎಂದರು.

ನಾನು ಪಕ್ಷದಲ್ಲಿರುವುದಕ್ಕೆ ವರಿಷ್ಠರ ಬಳಿ ಯಾವುದೇ ಬೇಡಿಕೆಯನ್ನೂ ಇಟ್ಟಿಲ್ಲ. ಈಗ ನಾನು ಯಾವುದನ್ನೂ ಕೇಳಿಯೂ ಇಲ್ಲ, ಸದ್ಯಕ್ಕೆ ಯಾವುದನ್ನೂ ಕೇಳೋದೂ ಇಲ್ಲ. ನಾನು ಎಲ್ಲಿಗೇ ಹೋದರೂ ಲಾಸ್ಟ್ ಬೆಂಚ್ ಅನ್ನೋದು ನನಗೆ ಗೊತ್ತಿದೆ. ಕೆಲವರು ಜಿಪಂ ಸದಸ್ಯನನ್ನಾಗಿ ಮಾಡಿ ಅಧ್ಯಕ್ಷನನ್ನಾಗಿ ಮಾಡ್ತಾರೆ ಅಂತಾರೆ. ನಾನು ಜಿಪಂ ಸದಸ್ಯನಾಗಿದ್ದಾಗಲೇ ಏನೂ ಆಗಲಿಲ್ಲ. ಹಾಗಾಗಿ ಇಲ್ಲದಿರುವ ಆಸೆಗಳನ್ನೆಲ್ಲಾ ಇಟ್ಟುಕೊಳ್ಳುವುದಿಲ್ಲ. ನಾನು ಯಾವುದೇ ಬೇಡಿಕೆಯನ್ನೂ ಇಟ್ಟಿಲ್ಲ, ಆ ವಿಚಾರ ಪ್ರಸ್ತಾಪವೂ ಆಗಿಲ್ಲ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏನೋ ವ್ಯತ್ಯಾಸಗಳಾಗಿ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸುವ ಸನ್ನಿವೇಶ ಸೃಷ್ಟಿಯಾಯಿತು. ಅಂದು ಎಲ್ಲರೂ ನನ್ನೊಂದಿಗೆ ಬೆಂಬಲವಾಗಿ ನಿಂತು ಶಕ್ತಿ ತುಂಬಿದ್ದೀರಿ. ನಿಮ್ಮೆಲ್ಲರ ಪ್ರೀತಿ-ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ಅದರಿಂದಲೇ ೧೫ ಸಾವಿರಕ್ಕೂ ಹೆಚ್ಚು ಮತಗಳು ನನಗೆ ಬರಲು ಕಾರಣವಾಯಿತು. ಕೆಲವರು ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಅದರ ಬಗ್ಗೆಯೂ ನನಗೆ ಯಾವುದೇ ಬೇಸರವಿಲ್ಲ. ನನ್ನ ಜೊತೆ ನೀವೆಲ್ಲರೂ ಇದ್ದೀರಿ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದೀರಿ. ನಿಮಗೆ ನಾನೆಂದಿಗೂ ಮೋಸ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಕೋಪ ಎನ್ನುವುದು ನನ್ನ ದೌರ್ಬಲ್ಯವಾಗಿತ್ತು. ಈಗ ಅದೂ ಕೂಡ ಶೇ.೯೦ರಷ್ಟು ಕಡಿಮೆ ಮಾಡಿಕೊಂಡಿದ್ದೇನೆ. ಅದು ನನ್ನ ತಾತ ಕೆ.ವಿ.ಶಂಕರಗೌಡರಿಂದ ಬಂದಿರುವ ಬಳುವಳಿ. ಇನ್ನೂ ಕೋಪ ಕಡಿಮೆ ಮಾಡಿಕೊಳ್ಳಬೇಕೆಂದರೆ ಅದನ್ನೂ ಮಾಡಿಕೊಳ್ಳುವುದಕ್ಕೆ ಸಿದ್ಧನಿದ್ದೇನೆ. ಜೆಡಿಎಸ್‌ನಲ್ಲಿ ಉಳಿಯುವ ಬಗ್ಗೆ ಬಹುತೇಕರು ಅನಿಸಿಕೆ, ಆಶಯ ವ್ಯಕ್ತಪಡಿಸಿದ್ದಾರೆ. ನಿಮ್ಮ ಆಸೆಗೆ ವಿರುದ್ಧವಾಗಿ ನಾನು ಎಂದಿಗೂ ನಡೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ಒಮ್ಮೆ ನನ್ನ ನಿರ್ಧಾರದಿಂದ ಯಾರಿಗಾದರೂ ಬೇಸರವಾಗಿದ್ದರೆ ನನ್ನನ್ನು ಕ್ಷಮಿಸಿ. ಬೈಯ್ಯುವುದಾದರೆ ನನ್ನನ್ನೇ ಬೈಯ್ಯಿರಿ. ನಾನು ಯಾರ ಒತ್ತಡಕ್ಕೆ ಒಳಗಾಗಿಯೂ ಈ ನಿರ್ಧಾರ ಮಾಡಿಲ್ಲ. ಕುಮಾರಸ್ವಾಮಿ ಅವರು ಆದಷ್ಟು ಬೇಗ ಗುಣಮುಖರಾಗಿ ವಾಪಸ್ ಬರಲಿ. ನನ್ನ ಮೇಲೆ ವಿಶ್ವಾಸವಿಟ್ಟು ಕರೆ ಮಾಡಿ ಆಹ್ವಾನ ನೀಡಿದ ಕಾಂಗ್ರೆಸ್ ನಾಯಕರು ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಅಭಿಮಾನಿಗಳು, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ ಸಮಯದಲ್ಲೂ ಎಲ್ಲರೂ ಕೆ.ಎಸ್.ವಿಜಯ್ ಆನಂದ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಅವರ ಜೊತೆ ಇರುವುದಕ್ಕೆ ಸಿದ್ಧರಿರುವುದಾಗಿ ತಿಳಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮೇಗೌಡ, ನಗರಸಭೆ ಸದಸ್ಯ ಪೂರ್ಣಚಂದ್ರ, ಜಯಶೀಲಮ್ಮ, ನರಸಿಂಹಮೂರ್ತಿ, ಯತೀಶ್, ಪುಟ್ಟಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

ಕೆವಿಎಸ್ ವಂಶ ವಿಜಯಾನಂದ್ ಗೆ ಕೊನೆಯಾಗುವುದು ಬೇಡ..!:

ನಿತ್ಯ ಸಚಿವ ಕೆ.ವಿ.ಶಂಕರಗೌಡರ ವಂಶ ಕೆ.ಎಸ್.ವಿಜಯ್ ಆನಂದ್‌ಗೆ ಕೊನೆಯಾಗುವುದು ಬೇಡ ಎಂಬ ಅನಿಸಿಕೆಯನ್ನು ಬೆಂಬಲಿಗ ರವಿ ವ್ಯಕ್ತಪಡಿಸಿದರು. ಕೆ.ವಿ.ಶಂಕರಗೌಡರ ಬಳಿಕ ಕೆ.ಎಸ್.ಸಚ್ಚಿದಾನಂದ ಅವರನ್ನು ಕಂಡೆವು. ಆನಂತರ ಕೆ.ಎಸ್.ವಿಜಯ್‌ಆನಂದ್ ಅವರಲ್ಲಿ ಶಂಕರಗೌಡರನ್ನು ಕಾಣುತ್ತಿದ್ದೇವೆ. ವಿಜಯ್‌ಆನಂದ್‌ರ ಮೂಲಕ ಆನಂದ್ ಅವರನ್ನು ನೋಡುವ ಆಸೆಯಾಗಿದೆ ಎಂದು ಹೇಳುವ ಮೂಲಕ ವಿಜಯ್ ಆನಂದ್ ವೈವಾಹಿಕ ಜೀವನಕ್ಕೆ ಕಾಲಿಡಬೇಕೆಂಬ ಬೇಡಿಕೆಯನ್ನು ಸಭೆಯ ಮುಂದಿಟ್ಟ ರೀತಿ ವಿಶೇಷವಾಗಿತ್ತು.

ನನ್ನ ಪಾಲಿನ ನೈಜ ನಾಯಕ ರವೀಂದ್ರ ಶ್ರೀಕಂಠಯ್ಯ:

ಕೆ.ವಿ. ಶಂಕರಗೌಡರ ಕುಟುಂಬ ಮಂಡ್ಯ ರಾಜಕಾರಣದಲ್ಲಿ ಉಳಿಯಬೇಕು ಎಂಬ ಅಭಿಲಾಷೆಯಿಂದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಜೆಡಿಎಸ್ ವರಿಷ್ಠರ ಮೇಲೆ ಒತ್ತಡ ತಂದು ಅಂತಿಮ ಕ್ಷಣದವರೆಗೂ ನನ್ನ ಪರ ಲಾಭಿ ಮಾಡಿದ್ದಾರೆ. ಅವರು ನನ್ನ ಪಾಲಿನ ನೈಜ ನಾಯಕ ಎಂದು ವಿಜಯಾನಂದ ಬಣ್ಣಿಸಿದರು.