ರಾಜ್ಯದ ಕ್ರಿಕೆಟ್ ಪ್ರತಿಭೆಗಳನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ, ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳ ಆಟಗಾರರಿಗೂ ಉತ್ತಮ ತರಬೇತಿ ಮತ್ತು ಪಂದ್ಯಾವಳಿಗಳ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಿವಿಧ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿದೆ. ಈ ಯೋಜನೆಯಲ್ಲಿ ಹಾಸನಕ್ಕೂ ಆದ್ಯತೆ ನೀಡಲಾಗಿದ್ದು, ಎಸ್. ಎಂ.ಕೆ. ನಗರದ ಕ್ರಿಕೆಟ್ ಕ್ರೀಡಾಂಗಣವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹಿರಿಯ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದ ಕ್ರಿಕೆಟ್ ಪ್ರತಿಭೆಗಳನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ, ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳ ಆಟಗಾರರಿಗೂ ಉತ್ತಮ ತರಬೇತಿ ಮತ್ತು ಪಂದ್ಯಾವಳಿಗಳ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಿವಿಧ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿದೆ. ಈ ಯೋಜನೆಯಲ್ಲಿ ಹಾಸನಕ್ಕೂ ಆದ್ಯತೆ ನೀಡಲಾಗಿದ್ದು, ಎಸ್. ಎಂ.ಕೆ. ನಗರದ ಕ್ರಿಕೆಟ್ ಕ್ರೀಡಾಂಗಣವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹಿರಿಯ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದರು.

ನಗರದ ಅರಸೀಕೆರೆ ರಸ್ತೆ ಸಮೀಪದ ಕ್ರೀಡಾಂಗಣಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಮೊದಲ ಹಂತದಲ್ಲಿ ಪಿಚ್, ಅಭ್ಯಾಸ ಪಿಚ್‌ಗಳು ಹಾಗೂ ಮೈದಾನ ಸಮತಟ್ಟು ಮಾಡುವ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಕಲ್ಲು, ಮಣ್ಣು ಹಾಗೂ ಅಸಮತಟ್ಟಾದ ಪ್ರದೇಶಗಳನ್ನು ತೆರವುಗೊಳಿಸಿ ಗುಣಮಟ್ಟದ ಮೈದಾನ ನಿರ್ಮಿಸಲಾಗುತ್ತಿದ್ದು, ಸುಮಾರು ಆರು ತಿಂಗಳಲ್ಲಿ ಆಟಗಾರರ ಬಳಕೆಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದರು. ಹಾಸನ ಹೊಸ ಕ್ರೀಡಾಂಗಣದ ಅಭಿವೃದ್ಧಿಗೆ ಮೂರು ವರ್ಷಗಳಲ್ಲಿ ಸುಮಾರು ₹ ೧೦ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಆರಂಭಿಕ ಹಂತದಲ್ಲಿ ೨ ಕೋಟಿ ವೆಚ್ಚದಲ್ಲಿ ಪಿಚ್ ಹಾಗೂ ಮೈದಾನ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಮುಂದಿನ ಹಂತದಲ್ಲಿ ಅಕಾಡೆಮಿ, ಹೆಚ್ಚುವರಿ ಅಭ್ಯಾಸ ಪಿಚ್‌ಗಳು, ಪೆವಿಲಿಯನ್, ಜಿಮ್, ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗುವುದು. ೪ರಿಂದ ೫ ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರಿಕೆಟ್ ಕೇಂದ್ರ ನಿರ್ಮಿಸುವ ಯೋಜನೆಯೂ ಇದೆ ಎಂದರು. ಮೊದಲ ಹಂತದಲ್ಲಿ ಸ್ಥಳೀಯ ಮತ್ತು ಅಂತರ್‌ಜಿಲ್ಲಾ ಪಂದ್ಯಗಳೊಂದಿಗೆ ಅಂಡರ್-೧೬, ಅಂಡರ್-೧೯ ಹಾಗೂ ಅಂಡರ್-೨೩ ಪಂದ್ಯಗಳನ್ನು ಹಾಸನದಲ್ಲಿ ಆಯೋಜಿಸಲು ಸೌಲಭ್ಯ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯ ಮಾನದಂಡಗಳನ್ನು ಪೂರೈಸಿದರೆ ರಣಜಿ ಪಂದ್ಯಗಳಿಗೂ ಅವಕಾಶ ದೊರೆಯಲಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪ್ರೇಕ್ಷಕರ ಗ್ಯಾಲರಿ, ಆಟಗಾರರ ಸೌಲಭ್ಯ ಹಾಗೂ ಪ್ರಸಾರ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಮೂಲಸೌಕರ್ಯ ಅಗತ್ಯವಿದೆ ಎಂದು ಹೇಳಿದರು.

ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ-ಧಾರವಾಡ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಕ್ರಿಕೆಟ್ ಅಕಾಡೆಮಿ ಮತ್ತು ಒಳಾಂಗಣ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯದ ಪ್ರತಿಭೆಗಳಿಗೆ ಸ್ಥಳೀಯವಾಗಿಯೇ ಉತ್ತಮ ತರಬೇತಿ ದೊರೆಯುವಂತೆ ಹಂತಹಂತವಾಗಿ ಯೋಜನೆ ರೂಪಿಸಲಾಗಿದೆ. ಟಿ೨೦ ಕ್ರಿಕೆಟ್ ಜೊತೆಗೆ ನಾಲ್ಕು ದಿನಗಳ ಕ್ರಿಕೆಟ್‌ಗೂ ಆಟಗಾರರು ಆದ್ಯತೆ ನೀಡಬೇಕು. ಇದರಿಂದ ತಾಳ್ಮೆ, ತಾಂತ್ರಿಕ ಸಾಮರ್ಥ್ಯ ಹಾಗೂ ಪಂದ್ಯದ ಪರಿಸ್ಥಿತಿಯನ್ನು ಎದುರಿಸುವ ಕೌಶಲ್ಯ ಬೆಳೆಯುತ್ತದೆ. ಪ್ರತಿಭೆಯ ಜತೆಗೆ ಶಿಸ್ತು, ನಿರಂತರ ಅಭ್ಯಾಸ, ದೈಹಿಕ ಸಾಮರ್ಥ್ಯ ಹಾಗೂ ಉತ್ತಮ ಆಹಾರ ಪದ್ಧತಿ ಅಗತ್ಯ ಎಂದು ವೆಂಕಟೇಶ್ ಪ್ರಸಾದ್ ಸಲಹೆ ನೀಡಿದರು

ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರ್‌ಗೆ ಸೀಮಿತವಾಗದೆ ಮನೆಯಿಂದ ಹೊರಗೆ ಬಂದು ಕ್ರಿಕೆಟ್, ಫುಟ್ಬಾಲ್, ಶಟಲ್ ಬ್ಯಾಡ್ಮಿಂಟನ್ ಸೇರಿದಂತೆ ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಗಳಲ್ಲಿ ಉತ್ತಮ ಕ್ರೀಡಾ ಮೂಲಸೌಕರ್ಯ ನಿರ್ಮಾಣವಾದರೆ ಸ್ಥಳೀಯ ಪ್ರತಿಭೆಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ಬಿಜೆಪಿ ಎಂಎಲ್‌ಸಿ ಅರುಣ್, ಕಾರ್ಯದರ್ಶಿ ಸಂತೋಷ್ ಮೆನನ್, ಅವಿನಾಶ್ ವೈದ್ಯ, ಮಂಜು ಹೊಂಕಾದ್ರಿ, ಮಧು, ಎಂ.ಎಸ್. ಸುರೇಶ್, ಡಿ.ಕೆ. ರವಿ, ಅಶೋಕ್ ಕುಮಾರ್ ಸೇರಿದಂತೆ ಇತರರು ಇದ್ದರು.

========

ಫೋಟೋ

ಕ್ರೀಡಾಂಗಣ ಪರಿಶೀಲನೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾತನಾಡಿದರು.