ಗಡಿಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಕಸಾಪ ಮನವಿ

| Published : Mar 27 2024, 01:04 AM IST

ಸಾರಾಂಶ

ಜಿಲ್ಲೆಯಲ್ಲಿರುವ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾಗೆ ಮನವಿ ಮಾಡಿದೆ.

ಬೀದರ್: ಜಿಲ್ಲೆಯಲ್ಲಿರುವ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾಗೆ ಮನವಿ ಮಾಡಿದೆ.

ಈ ಕುರಿತು ನೀಡಿದ ಮನವಿಯಲ್ಲಿ ಇತ್ತೀಚೆಗೆ ಔರಾದ್‌ ತಾಲೂಕಿನ ಕಿರುಗುಣವಾಡಿಯಲ್ಲಿರುವ ಮಾತೋಶ್ರೀ ಜೀಜಾಬಾಯಿ ಕನ್ನಡ ಮಾಧ್ಯಮ ಶಾಲೆ ಮುಚ್ಚುತ್ತಿರುವ ಬಗ್ಗೆ ವರದಿಯಾಗಿದ್ದನ್ನು ಗಮನಿಸಿ, ಗಡಿ ಭಾಗದಲ್ಲಿ ಕನ್ನಡದ ಬೆಳವಣಿಗೆ ಕಷ್ಟಸಾಧ್ಯವಾದ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದು ಸೂಕ್ತವಲ್ಲ.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿರುವ ಮತ್ತು ಓದುತ್ತಿರುವ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಕನ್ನಡ ನಾಡಿನ ನೆಲ, ಜಲ, ಭಾಷೆ ಇವುಗಳ ಸಂರಕ್ಷಣೆ ಮಾಡುವುದು ಪರಿಷತ್ತಿನ ಆದ್ಯ ಕರ್ತವ್ಯವೂ ಆಗಿರುವುದರಿಂದ ಶಾಲಾ ಶಿಕ್ಷಣ ಇಲಾಖೆಗೆ ಯಾವುದೇ ಶಾಲೆಗಳನ್ನು ಮುಚ್ಚದಂತೆ ಮನವಿ ಮಾಡಿಕೊಂಡಿರುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿಯವರು ತಿಳಿಸಿದ್ದಾರೆ.

ಹೊಸ ಶಾಲೆಗೆ ಮನವಿ: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಮಲನಗರ ಮತ್ತು ದಾಬಕಾಗಳಲ್ಲಿ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳನ್ನು ತೆರೆಯುವಂತೆಯೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಮನವಿ ಮಾಡಿದೆ.

ದಾಬಕಾದಲ್ಲಿ ಕನ್ನಡ ಮಾಧ್ಯಮ ಶಾಲೆ ಇಲ್ಲದೇ ಇರುವುದರಿಂದ ಅಲ್ಲಿನ ಮಕ್ಕಳು 30 ಕಿಮೀ ದೂರದ ಔರಾದ ಪಟ್ಟಣದ ಶಾಲೆಗಳಿಗೆ ಪ್ರವೇಶ ಪಡೆಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ದಾಬಕಾ ಮತ್ತು ಕಮಲನಗರಗಳಲ್ಲಿ ಹೊಸದಾಗಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ತೆರೆಯಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಎರಡೂ ಮನವಿಗಳಿಗೂ ಉಪನಿರ್ದೇಶಕರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಮತ್ತು ಉಪಾಧ್ಯಕ್ಷರಾದ ದಾನಿ ಬಾಬುರಾವ ಉಪಸ್ಥಿತರಿದ್ದರು.