ಕೆಎಸ್ಸಾರ್ಟಿಸಿ ನೌಕರ ಮುಷ್ಕರ, ಪರ್ಯಾಯ ಖಾಸಗಿ ಬಸ್‌ಗಳು

| Published : Aug 06 2025, 01:15 AM IST

ಕೆಎಸ್ಸಾರ್ಟಿಸಿ ನೌಕರ ಮುಷ್ಕರ, ಪರ್ಯಾಯ ಖಾಸಗಿ ಬಸ್‌ಗಳು
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ 38 ತಿಂಗಳ ಬಾಕಿ ವೇತನ ಬಿಡುಗಡೆ, ವೇತನ ಪರಿಷ್ಕರಣೆ, ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಬೇಕು ಎಂಬುದು ಸೇರಿದಂತೆ ಕೆಎಸ್ಸಾರ್ಟಿಸಿ ಸ್ಟ್ಯಾಫ್‌ ಅಂಡ್ ವರ್ಕರ್ಸ್‌ ಫೆಡರೇಷನ್‌ ನೇತೃತ್ವದಲ್ಲಿ ಕರೆ ನೀಡಿದ್ದ ಕೆಎಸ್ಸಾರ್ಟಿಸಿ ನೌಕರರ ಮುಷ್ಕರವೇನೋ ಯಶಸ್ವಿಯಾಯಿತು. ಆದರೂ, ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್‌ಗಳು, ಮಿನಿ ಬಸ್‌ಗಳ ಸೇವೆ ಒದಗಿಸಿ, ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.

- ದಾವಣಗೆರೆ ನಿಲ್ದಾಣದಲ್ಲಿ ಚಾಲಕನಿಗೆ ಅಡ್ಡಿಪಡಿಸಿದ ಸಂಘಟನೆ ಮುಖಂಡ ಪೊಲೀಸ್ ವಶಕ್ಕೆ

- - - - ಸರ್ಕಾರಿ ಬಸ್‌ಗಳಿಲ್ಲದೇ ಖಾಸಗಿ ಬಸ್‌ ಏರಲು ಮನಸ್ಸಾಗದ ಪ್ರಯಾಣಿಕರಿಂದ ಪರದಾಟ

- ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ವೃದ್ಧರು, ಗರ್ಭಿಣಿ-ಬಾಣಂತಿಯರಿಗೆ ತೀವ್ರ ಕಷ್ಟ

- ರೈಲ್ವೆ ನಿಲ್ದಾಣಕ್ಕೆ ತೆರಳಿ ಉತ್ತರ ಕರ್ನಾಟಕ, ಹಳೇ ಮೈಸೂರಿನ ಭಾಗಕ್ಕೆ ಜನರ ಪಯಣ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಮ್ಮ 38 ತಿಂಗಳ ಬಾಕಿ ವೇತನ ಬಿಡುಗಡೆ, ವೇತನ ಪರಿಷ್ಕರಣೆ, ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಬೇಕು ಎಂಬುದು ಸೇರಿದಂತೆ ಕೆಎಸ್ಸಾರ್ಟಿಸಿ ಸ್ಟ್ಯಾಫ್‌ ಅಂಡ್ ವರ್ಕರ್ಸ್‌ ಫೆಡರೇಷನ್‌ ನೇತೃತ್ವದಲ್ಲಿ ಕರೆ ನೀಡಿದ್ದ ಕೆಎಸ್ಸಾರ್ಟಿಸಿ ನೌಕರರ ಮುಷ್ಕರವೇನೋ ಯಶಸ್ವಿಯಾಯಿತು. ಆದರೂ, ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್‌ಗಳು, ಮಿನಿ ಬಸ್‌ಗಳ ಸೇವೆ ಒದಗಿಸಿ, ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.

ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ನಸುಕಿನಿಂದಲೇ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಆದರೆ, ನೋಡ ನೋಡುತ್ತಿದ್ದಂತೆ ಪೊಲೀಸ್ ಸರ್ಪಗಾವಲಿನಲ್ಲಿ ಖಾಸಗಿ ಬಸ್‌ಗಳು, ಟ್ರಾವೆಲ್ಸ್ ಬಸ್‌ಗಳು, ಮಿನಿ ಬಸ್‌ಗಳು ಸರ್ಕಾರಿ ಬಸ್‌ ನಿಲ್ದಾಣದಿಂದಲೇ ಪೊಲೀಸ್ ಭದ್ರತೆಯಲ್ಲಿ ಪ್ರಯಾಣಿಕರ ಸೇವೆ ನೀಡಿದವು. ಆದರೆ, ನಿಲ್ದಾಣದ ಮುಖ್ಯ ಪ್ರವೇಶ ದ್ವಾರ, ನಿರ್ಗಮನದ ಸ್ಥಳ ಹಾಗೂ ಹಿಂಭಾಗದ ಗೇಟ್‌ಗಳ ಬಳಿ ಸಂಸ್ಥೆಯ ಚಾಲಕರು, ನಿರ್ವಾಹಕರು ನಿಂತು ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು.

ಅನಕ್ಷರಸ್ಥರು, ವೃದ್ಧರು, ವಿಕಲಚೇತನರು, ಗರ್ಭಿಣಿ, ಬಾಣಂತಿಯರು, ದೂರದ ಪರ ಊರುಗಳಿಂದ ಬಂದವರಿಗೆ ದಾವಣಗೆರೆಯಿಂದ ಮುಂದೆ ಹೋಗಲು ಸರ್ಕಾರಿ ಬಸ್‌ಗಳ ಸೇವೆ ಸಿಗದೇ ಪರದಾಡಿದರು. ಅನೇಕರು ನಿಲ್ದಾಣದಲ್ಲೇ ಈಗ ಬಸ್ಸು ಬರಬಹುದು, ನಂತರ ಬರಬಹುದೆಂದು ಕಾಯುತ್ತಿದ್ದರು. ಆಯಾ ಫ್ಲಾಟ್‌ ಫಾರಂಗಳಲ್ಲಿ ಖಾಸಗಿ ಬಸ್‌, ಮಿನಿ ಬಸ್‌, ಟ್ರಾವೆಲ್ಸ್‌ ಬಸ್‌ಗಳು ಬಂದು ನಿಂತಾಗ ಅದೇ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಸಿಬ್ಬಂದಿ ಧ್ವನಿವರ್ಧಕ ಮೂಲಕ ಖಾಸಗಿ ಬಸ್ಸುಗಳನ್ನು ಹತ್ತಿ, ಪ್ರಯಾಣ ಮಾಡುವಂತೆ ಜನರಿಗೆ ಸಲಹೆ-ಸೂಚನೆ ನೀಡಿ, ಪ್ರಯಾಣಿಕರಿಗೆ ನೆರವಾದರು.

ಬುಕ್ಕಿಂಗ್‌ ವಿರುದ್ಧ ಹರಿಹಾಯ್ದ ಪ್ರಯಾಣಿಕರು:

ಕೆಎಸ್ಸಾರ್ಟಿಸಿ ನಿಲ್ದಾಣದ ನಿಯಂತ್ರಣಾಧಿಕಾರಿಗಳ ವಿರುದ್ಧವೂ ಜನ ಆಕ್ರೋಶ ಹೊರಹಾಕಿದರು. ಅದರಲ್ಲೂ ಉಚಿತ ಪ್ರಯಾಣ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಡಿವಾಣವೇ ಇರದಂತಾಗಿತ್ತು. ಬಸ್‌ಗಳಲ್ಲಿ ಪ್ರಯಾಣಕ್ಕೆ ಟಿಕೆಟ್ ಪಾವತಿಸಿ ಬಂದಿದ್ದೇವೆ. ಬಸ್‌ ಸಂಚಾರ ಇಲ್ಲ ಎಂದಿದ್ದರೆ ಆನ್ ಲೈನ್‌ನಲ್ಲಿ ಟಿಕೆಟ್ ಯಾಕೆ ಬುಕ್ಕಿಂಗ್ ಮಾಡಿಕೊಂಡಿದ್ದೀರಿ? ನಾವು ವೋಲ್ವೋ, ಐರಾವತಾ, ಎಲೆಕ್ಟ್ರಿಕ್ ಬಸ್‌ಗಳಲ್ಲಿ ಬುಕ್ ಮಾಡಿದ್ದೇವೆ. ಇಲ್ಲಿ ನೋಡಿದರೆ ಯಾವುದೇ ಖಾಸಗಿ ಬಸ್‌ಗಳನ್ನು ಹತ್ತು ಎಂದರೆ ಏನರ್ಥ? ನಾವು ಈಗ ಊರಿಗೆ ಹೋಗುವುದು ಹೇಗೆಂದು ಕಂಟ್ರೋಲರ್‌ ವಿರುದ್ಧ ಜನರು ಹರಿಹಾಯುತ್ತಿದ್ದರು.

ತುಂಬು ಗರ್ಭಿಣಿಯರಂತೂ ತಜ್ಞ ವೈದ್ಯರ ಬಳಿ ತಪಾಸಣೆಗೆ ಬಂದವರು ಊರಿಗೆ ಮರಳಲು ಬಸ್ಸಿಲ್ಲದೇ, ದಾವಣಗೆರೆಯಲ್ಲಿ ಬಂಧು-ಬಳಗ ಇಲ್ಲದೇ ತಮಗೆ ಏನಾಗುತ್ತದೋ ಎಂಬ ಆತಂಕದಲ್ಲೆ ಹೊತ್ತು ಕಳೆಯಬೇಕಾಯಿತು. ಕುಳಿತುಕೊಳ್ಳಲಾಗದೇ, ನಿಲ್ಲಲೂ ಆಗದ ಅನೇಕ ವೃದ್ಧರು ಪರಿತಪಿಸಿದರು. ಮಕ್ಕಳ ಸಮೇತ ಬಂದಿದ್ದ ಮಹಿಳೆಯರ ಪರದಾಟ ಹೇಳತೀರದಂತಾಗಿತ್ತು. ಬಸ್‌ಗಳಿಲ್ಲದ ಸಿಟ್ಟನ್ನು ಮನೆ ಮಂದಿಗೆ ಫೋನ್ ಮಾಡಿ, ಆಕ್ರೋಶ ಹೊರಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಷ್ಕರನಿರತ ಚಾಲಕರು, ನಿರ್ವಾಹಕರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಸಮೀಪವೇ ಸುತ್ತಾಡುತ್ತಿದ್ದರೂ ನಿಲ್ದಾಣಕ್ಕೆ ಮಾತ್ರ ಪ್ರವೇಶಿಸಲಿಲ್ಲ. ಅಲ್ಲದೇ, ಖಾಸಗಿ ಬಸ್‌ಗಳ ಸೇವೆ ನೀಡದಂತೆ, ಕೆಎಸ್ಸಾರ್ಟಿಸಿ ನಿಲ್ದಾಣದೊಳಗೆ ಪ್ರವೇಶಿಸದಂತೆ ಎಚ್ಚರಿಸುತ್ತಿದ್ದುದು, ಪೊಲೀಸರು ಬಂದು ಜೋರು ಮಾಡಿ ಕಳಿಸುವುದು ಸಾಮಾನ್ಯ ದೃಶ್ಯವಾಗಿತ್ತು.

ಜಿಲ್ಲಾಡಳಿತವೇ ಖಾಸಗಿ ಬಸ್‌ಗಳ ಸಂಚಾರ ವ್ಯವಸ್ಥೆ ಮಾಡಿತ್ತಾದರೂ, ನಿತ್ಯವೂ ಸುಮಾರು 411ಕ್ಕಿಂತಲೂ ಹೆಚ್ಚು ಬಸ್‌ಗಳು ಕಾರ್ಯಾಚರಿಸುವ ನಿಲ್ದಾಣ ಮಾತ್ರ ತನ್ನದೇ ಬಸ್‌ಗಳ ಸೇವೆ ಇಲ್ಲದೇ ಬಿಕೋ ಎನ್ನುತ್ತಿತ್ತು. ಸ್ವತಃ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಬಸಾಪುರ ಡಿಪೋದಲ್ಲಿ ಮೊಕ್ಕಾಂ ಹೂಡಿ, ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದರು. ಆದರೆ, ಅಲ್ಲೇ ಇದ್ದ ಚಾಲಕರು, ನಿರ್ವಾಹಕರು ಮಾತ್ರ ತಮ್ಮ ಸಂಘಟನೆ ಕರೆ ಮೇರೆಗೆ ಮುಷ್ಕರದಲ್ಲಿ ಭಾಗಿಯಾಗಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ನಿರಂತರ ಇರುತ್ತದೆಂದು ಹೇಳಿದರು.

ಜಿಲ್ಲಾಡಳಿತದ ಪರ್ಯಾಯ ವ್ಯವಸ್ಥೆಯಿಂದಾಗಿ ಒಂದೊಂದಾಗಿ ಖಾಸಗಿ ಬಸ್ಸುಗಳ ಸೇವೆ ಶುರುವಾಯಿತು. ಸರ್ಕಾರಿ ಬಸ್‌ಗಳಿಗೆ ಖಾಸಗಿ ಟ್ರಾವೆಲ್ಸ್‌ಗಳ ಚಾಲಕರ ಮನವೊಲಿಸಿ, ಸೇವೆ ನೀಡುವಂತೆ ಪ್ರಯತ್ನಿಸಲಾಯಿತು. ಒಲ್ಲದ ಮನಸ್ಸಿನಿಂದಲೇ ಖಾಸಗಿ ಚಾಲಕರು ಕೆಲಸ ಮಾಡಬೇಕಾಯಿತು. ಖಾಸಗಿ ಚಾಲಕರು ಬಂದಂತೆಲ್ಲ ಬಸ್‌ಗಳನ್ನು ಬಿಡುತ್ತಿರುವುದಾಗಿ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಹೇಳಿದರೂ ಸರ್ಕಾರಿ ಬಸ್‌ಗಳು ನಿಂತ ಜಾಗ ಬಿಟ್ಟು ಕದಲಲಿಲ್ಲ.

ದಾವಣಗೆರೆಯಿಂದ ಚಿತ್ರದುರ್ಗ, ಬೆಂಗಳೂರು, ಚನ್ನಗಿರಿ, ಚಿಕ್ಕಮಗಳೂರು, ಹೊನ್ನಾಳಿ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ- ಧಾರವಾಡ, ಹೊಸಪೇಟೆ, ಬಳ್ಳಾರಿ ಭಾಗಕ್ಕೆ ಬಸ್ಸುಗಳು ಇಲ್ಲದೇ ಜನರ ಪರದಾಟ ರಾತ್ರಿಯೂ ಮುಂದುವರಿದಿತ್ತು.

- - -

(ಬಾಕ್ಸ್‌)

* ಖಾಸಗಿ-ಮಿನಿ ಬಸ್ಸು, ಆಟೋ, ಅಪೆ ಆಟೋ ಗತಿ ದಾವಣಗೆರೆ: ದಾವಣಗೆರೆ ನಗರ, ಜಿಲ್ಲಾದ್ಯಂತ ಕೆಎಸ್ಸಾರ್ಟಿಸಿ ನೌಕರರ ಮುಷ್ಕರದ ಬಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸರ್ಕಾರಿ- ಖಾಸಗಿ ನೌಕರರು, ಹಿರಿಯ ನಾಗರೀಕವರೆಗೆ ಎಲ್ಲರಿಗೂ ಎಲ್ಲಿಲ್ಲದಂತೆ ತಟ್ಟಿದ್ದು ಸುಳ್ಳಲ್ಲ.

ಎಂದಿನಂತೆ ಶಾಲಾ-ಕಾಲೇಜಿಗೆ ನಗರ ಪ್ರದೇಶದ ದೂರದ ಸ್ಥಳ, ಗ್ರಾಮೀಣ ಪ್ರದೇಶದಿಂದ ನಗರ, ತಾಲೂಕು, ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಲು ಬಸ್ಸು ಇಲ್ಲದೇ ವಿದ್ಯಾರ್ಥಿಗಳು ಪರದಾಡಿದರು. ಆಸ್ಪತ್ರೆ, ಸರ್ಕಾರಿ ಕೆಲಸ, ಕಾರ್ಯಕ್ಕೆ ಬರಲು, ವಾಪಾಸ್ಸಾಗಲು ಸರ್ಕಾರಿ ಬಸ್‌, ನಗರ ಸಾರಿಗೆ ಬಸ್‌ಗಳು ಇಲ್ಲದೇ, ತುಂಬಿದ ಖಾಸಗಿ ಬಸ್‌, ಖಾಸಗಿ ಸಿಟಿ ಬಸ್‌, ಆಟೋ ರಿಕ್ಷಾ, ಅಪೆ ಆಟೋಗಳಿಗೆ ಮೊರೆ ಹೋಗಬೇಕಾಯಿತು.

ಸರ್ಕಾರಿ ಬಸ್‌ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರು ರೈಲು ಬಳಕೆಗೂ ಮೊರೆಹೋದರು. ಹರಿಹರ, ದಾವಣಗೆರೆ ರೈಲ್ವೆ ನಿಲ್ದಾಣಗಳಲ್ಲಿ ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹರಪನಹಳ್ಳಿ, ಕೊಟ್ಟೂರು, ಇತ್ತ ಬೀರೂರು, ಕಡೂರು, ತಿಪಟೂರು, ತುಮಕೂರು, ಬೆಂಗಳೂರು, ಮೈಸೂರು ಕಡೆ ಹೋಗುವ ಪ್ರಯಾಣಿಕರು ಸಹ ರೈಲಿನಲ್ಲಿ ಪ್ರಯಾಣಿಸಿದರು. ಎಂದಿಗಿಂತಲೂ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಹೆಚ್ಚು ಪ್ರಯಾಣಿಕರು ಕಂಡುಬಂದರು.

- - -

(ಬಾಕ್ಸ್‌-2)

* ಸರ್ಕಾರಿ ಬಸ್‌ ಸಂಚಾರಕ್ಕೆ ಅಡ್ಡಿ: ಆವರಗೆರೆ ಉಮೇಶ ವಶ ಕನ್ನಡಪ್ರಭ ವಾರ್ತೆ ದಾವಣಗೆರೆ

ತಮ್ಮ ಮುಷ್ಕರ ಮಧ್ಯೆಯೂ ಸರ್ಕಾರಿ ಬಸ್‌ಗಳಿಗೆ ಕೆಲ ಚಾಲಕರು ಚಾಲನೆಗೆ ಮುಂದಾಗಿದ್ದರು. ಖಾಸಗಿ ಬಸ್‌ಗಳ ಸೇವೆ ಆರಂಭಿಸಿದ್ದರಿಂದ ಬಸ್‌ ಚಾಲನೆ ಮಾಡುತ್ತಿದ್ದ ಚಾಲಕ ಹಾಗೂ ಮುಷ್ಕರನಿರತ ಕೆಎಸ್ಸಾರ್ಟಿಸಿ ನೌಕರರು, ಸಂಘಟನೆ ಮುಖಂಡರ ಮಧ್ಯೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿತು.

ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಸರ್ಕಾರಿ ಬಸ್ಸೊಂದನ್ನು ಚಾಲಕ ಚಾಲನೆ ಮಾಡಿಕೊಂಡು ಬಂದಿದ್ದರಿಂದ ಸಹಜವಾಗಿಯೇ ಮುಷ್ಕರನಿರತ ನೌಕರರು, ಸಂಘಟನೆ ಮುಖಂಡ ಆವರಗೆರೆ ಎಚ್‌.ಜಿ.ಉಮೇಶ ಇತರರು ಚಾಲಕನಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಬಸ್‌ ಚಾಲನೆ ಮಾಡುತ್ತಿದ್ದ ಚಾಲಕ ತಾನು ಮುಷ್ಕರಕ್ಕೆ ಬೆಂಬಲ ನೀಡಿಲ್ಲವೆಂದು ಹೇಳಿದ್ದರಿಂದ ಆಕ್ರೋಶಗೊಂಡ ಎಚ್.ಜಿ.ಉಮೇಶ, ತೀವ್ರ ಅಸಮಾಧಾನ ತೋರಿದರು. ಇಬ್ಬರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಒಂದು ಹಂತದಲ್ಲಿ ಸರ್ಕಾರಿ ಬಸ್‌ ಮುಂದೆ ಸಾಗಲು ಅಡ್ಡಿಪಡಿಸಿದ ಆವರೆಗೆರೆ ಉಮೇಶ ಅವರನ್ನು ಬಂಧಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸೂಚಿಸಿದರು.

ಆಗ ತಕ್ಷಣವೇ ಆವರಗೆರೆ ಉಮೇಶ ಅವರನ್ನು ವಶಕ್ಕೆ ಪಡೆದ ಪೊಲೀಸರು, ಆಟೋ ರಿಕ್ಷಾವೊಂದರಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕರೆದೊಯ್ದರು. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಆವರಗೆರೆ ಉಮೇಶ ಅವರನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ಯಲಾಯಿತು.

- - -

-(ಫೋಟೋಗಳಿವೆ).