ತಿಪಟೂರಿಗೂ ತಟ್ಟಿದ ಕೆ.ಎಸ್.ಆರ್.ಟಿ.ಸಿ ಮುಷ್ಕರದ ಬಿಸಿ

| Published : Aug 06 2025, 01:15 AM IST

ತಿಪಟೂರಿಗೂ ತಟ್ಟಿದ ಕೆ.ಎಸ್.ಆರ್.ಟಿ.ಸಿ ಮುಷ್ಕರದ ಬಿಸಿ
Share this Article
  • FB
  • TW
  • Linkdin
  • Email

ಸಾರಾಂಶ

38 ತಿಂಗಳ ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಸ್ತೆ ಸಾರಿಗೆ ನೌಕರರು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಮುಷ್ಕರದ ಬಿಸಿ ಕಲ್ಪತರು ನಗರಿ ತಿಪಟೂರಿಗೂ ತಟ್ಟಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

38 ತಿಂಗಳ ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಸ್ತೆ ಸಾರಿಗೆ ನೌಕರರು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಮುಷ್ಕರದ ಬಿಸಿ ಕಲ್ಪತರು ನಗರಿ ತಿಪಟೂರಿಗೂ ತಟ್ಟಿದೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಅನಿರ್ದಿಷ್ಠಾವಧಿ ಸಾರಿಗೆ ಮುಷ್ಕರದಿಂದ ಬಸ್ಸುಗಳು ರಸ್ತೆಗೆ ಸಂಚರಿಸದೆ ನಿಲ್ದಾಣದಲ್ಲಿ ನಿಂತಿವೆ. ಪ್ರಯಾಣಿಕರು ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಕೈಗೊಳ್ಳದ ಕಾರಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಥಳಗಳಿಗೆ ಹೋಗುವ ಪ್ರಯಾಣಿಕರು ಬಸ್ಸಿಗಾಗಿ ಪರದಾಡುವಂತಾಯಿತು. ಪ್ರಯಾಣಿಕರು ವಿಧಿಯಿಲ್ಲದೆ ದುಪ್ಪಟ್ಟು ಹಣ ನೀಡಿ ಖಾಸಗಿ ಬಸ್‌ಗಳು, ಆಟೋ, ಟ್ಯಾಕ್ಸಿಗಳನ್ನು ಮಾಡಿಕೊಂಡು ತಮ್ಮ ಊರುಗಳತ್ತ ಹೋದರು. ಇನ್ನೂ ಕೆಲ ಪ್ರಯಾಣಿಕರು ಖಾಸಗಿ ಚಾಲಕರ ಬಳಿ ದುಪ್ಪಟ್ಟು ಹಣ ನೀಡಲಾಗುವುದಿಲ್ಲ ಎಂದು ಜಗಳ ಮಾಡುತ್ತಿದ್ದ ಸನ್ನಿವೇಶಗಳು ಕಂಡುಬಂದವು. ವಿದ್ಯಾರ್ಥಿಗಳು ಪ್ರತಿನಿತ್ಯ ಸಾರಿಗೆ ಬಸ್‌ಗಳನ್ನೇ ಅವಲಂಬಿಸಿರುತ್ತಾರೆ. ಆದರೆ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲದ ಕಾರಣ ವಿದ್ಯಾರ್ಥಿಗಳು ಬದಲಿ ವ್ಯವಸ್ಥೆ ಮಾಡಿಕೊಂಡು ತಮ್ಮ ಊರುಗಳತ್ತ ತೆರಳುತ್ತಿದ್ದರು. ಇನ್ನೂ ಆಸ್ಪತ್ರೆ, ತಾಲೂಕು ಕಚೇರಿ, ಸರ್ಕಾರಿ ಕಚೇರಿಗಳು ಜನರಿಲ್ಲದೆ ಬಣಗುಡುತ್ತಿದ್ದವು. ಒಟ್ಟಾರೆ ಸರ್ಕಾರ ಮತ್ತು ನೌಕರರ ಹಠದಿಂದ ಪ್ರಯಾಣಿಕರ ಪಾಡು ಹೇಳತೀರದಾಗಿತ್ತು. ಕೋಟ್ : ಮುಷ್ಕರದ ಹಿನ್ನಲೆಯಲ್ಲಿ ತಿಪಟೂರು ಡಿಪೋ ವಿಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಕಡಿಮೆಯಿದ್ದು ಪ್ರಯಾಣಿಕರಿಗೆ ಯಾವುದೇ ಅನಾನುಕೂಲವಾಗಬಾರದೆಂದು ಪ್ರಮುಖ ೮ ಮಾರ್ಗಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು ಉಳಿದ 40ಮಾರ್ಗಗಳಿಗೆ ಪ್ರಯತ್ನಪಡುತ್ತಿದ್ದು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. - ಅಬ್ಜಲ್ ಅಹಮ್ಮದ್ ಖಾನ್, ಡಿಪೋ ವ್ಯವಸ್ಥಾಪಕರು ತಿಪಟೂರು.