ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕಾರ್ಮಿಕ ಸಂಘಟನೆಗಳು ಆ.5ರ ಇಂದಿನಿಂದ ಜಂಟಿಯಾಗಿ ಕರೆದಿರುವ ಕೆಎಸ್‌ಆರ್‌ಟಿಸಿ ಅನಿರ್ದಿಷ್ಟಾವಧಿ ಮುಷ್ಕರದಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಖಾಸಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಸಂತೋಷಕುಮಾರ್ ಹೇಳಿದ್ದಾರೆ.

- ಪ್ರಯಾಣಿಕರಿಗೆ ತೊಂದರೆ ಆಗದಂತೆ ಕ್ರಮ: ಎಸಿ ಸಂತೋಷ್‌ ಪಾಟೀಲ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕಾರ್ಮಿಕ ಸಂಘಟನೆಗಳು ಆ.5ರ ಇಂದಿನಿಂದ ಜಂಟಿಯಾಗಿ ಕರೆದಿರುವ ಕೆಎಸ್‌ಆರ್‌ಟಿಸಿ ಅನಿರ್ದಿಷ್ಟಾವಧಿ ಮುಷ್ಕರದಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಖಾಸಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಸಂತೋಷ್‌ ಪಾಟೀಲ್‌ ಹೇಳಿದರು.

ಸೋಮವಾರ ಸಂಜೆ ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಜಿಲ್ಲಾದ್ಯಂತ ಸುಮಾರು 2.10 ಲಕ್ಷ ಜನರು ಪ್ರತಿದಿನ ಪ್ರಯಾಣಿಸುತ್ತಾರೆ. ದಾವಣಗೆರೆ ತಾಲೂಕಿನ 53 ರೂಟ್ಸ್ ಸೇರಿ 6 ತಾಲೂಕುಗಳಲ್ಲಿ ಒಟ್ಟು 126 ಪಥ ಸಂಚಾರಗಳನ್ನು ಗುರುತಿಸಲಾಗಿದೆ. ಈ ಪೈಕಿ ಈಗಾಗಲೇ 80 ಪಥಗಳಲ್ಲಿ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಉಳಿದಂತೆ 46 ಪಥಗಳಲ್ಲಿಯೂ ಬಸ್‌ಗಳ ವ್ಯವಸ್ಥೆ ಕಲ್ಪಿಸಿ ಕೊಡಲು ಖಾಸಗಿ ಬಸ್‌ಗಳ ಮಾಲೀಕರೊಂದಿಗೆ ಸಭೆ ನಡೆಸಿ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರತಿದಿನ ಹರಿಹರ, ಹೊನ್ನಾಳಿ ಮತ್ತು ಜಗಳೂರಿಗೆ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದ್ದರಿಂದ ಹರಿಹರಕ್ಕೆ 50, ಹೊನ್ನಾಳಿಗೆ 10 ಮತ್ತು ಜಗಳೂರಿಗೆ 30 ಹೆಚ್ಚುವರಿ ಬಸ್‌ಗಳನ್ನು ಬಿಡುವಂತೆ ಖಾಸಗಿ ಬಸ್ ಮಾಲೀಕರಿಗೆ ತಿಳಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಸುಗಮ ಸಂಚಾರಕ್ಕೆ ಜಿಲ್ಲಾಡಳಿತ, ಕೆಎಸ್‌ಆರ್‌ಟಿಸಿ ಮತ್ತು ಆರ್‌ಟಿಒ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

ಸಹಾಯವಾಣಿ ಸ್ಥಾಪನೆ:

ಜಿಲ್ಲೆಯ ಪ್ರಯಾಣಿಕರಿಗೆ ಬಸ್‌ಗಳ ವ್ಯತ್ಯಯ ಕಂಡುಬಂದಲ್ಲಿ ಅಥವಾ ಇನ್ನಿತರೆ ತೊಂದರೆಯಾದರೆ ತುರ್ತು ಸಹಾಯಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದೆ. ಕೆಎಸ್‌ಆರ್‌ಟಿಸಿ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 70220 30175, ಪ್ರಾದೇಶಿಕ ಸಾರಿಗೆ ಕಚೇರಿ: 08192 259848, ಪೊಲೀಸ್ ಕಚೇರಿ ನಿಯತ್ರಣ ಕೊಠಡಿ: 94808 03200 ಹಾಗೂ ಜಿಲ್ಲಾಧಿಕಾರಿ ಕಚೇರಿ: 1077 ಇಲ್ಲಿಗೆ ಸಂಪರ್ಕಿಸಲು ತಿಳಿಸಿದರು.

ಕೆಎಸ್‌ಆರ್‌ಟಿಸಿ ವಿಭಾಗ ವ್ಯವಸ್ಥಾಪಕ ಕಿರಣಕುಮಾರ್ ಬಸಾಪುರ, ಡಿಟಿಒ ಫಕೃದ್ದೀನ್ ಉಪಸ್ಥಿತರಿದ್ದರು.

- - -

(ಕೋಟ್‌) ಸರ್ಕಾರಿ ಬಸ್‌ಗಳು ಗೈರಾದಲ್ಲಿ ಖಾಸಗಿ ಬಸ್‌ಗಳು ಮತ್ತು ಆಟೋಗಳು ಪ್ರಯಾಣಿಕರಿಂದ ಹೆಚ್ಚಿನ ಸುಲಿಗೆ ಮಾಡಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ.

- ಭಗವಾನ್ ದಾಸ್, ಆರ್‌ಟಿಒ

- - -

-4ಕೆಡಿವಿಜಿ41, 42: ದಾವಣಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.