ರಸ್ತೆ ನಿರ್ಮಾಣಕ್ಕೆ ವಿನಾಕಾರಣ ತಡೆ
ಜಿಲ್ಲಾಧಿಕಾರಿ ಬಳಿ ನ್ಯಾಯಕ್ಕಾಗಿ ಮನವಿಕನ್ನಡಪ್ರಭ ವಾರ್ತೆ ಕಾರವಾರತಾಲೂಕಿನ ಘಾಡಸಾಯಿ ಹೋಬಳಿಯ ಕುಚೆಗಾರ ಗ್ರಾಮದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಮಂಜೂರಾಗಿದ್ದ ಸೇತುವೆ ಕಾಮಗಾರಿಯ ಸ್ಥಳವನ್ನು ಏಕಾಏಕಿ ಬದಲಾಯಿಸಿರುವುದು ಹಾಗೂ ರಸ್ತೆ ನಿರ್ಮಾಣಕ್ಕೆ ವಿನಾಕಾರಣ ತಡೆವೊಡ್ಡಿರುವ ಘಟನೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಮೂರು ವರ್ಷಗಳಿಂದ ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡಿ ಹೈರಾಣಾದ ಗ್ರಾಮಸ್ಥರು, ಇದೀಗ ಜಿಲ್ಲಾಧಿಕಾರಿ ಬಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಗ್ರಾಮದ ನಿವಾಸಿ ಗಣೇಶ್ ರತ್ನಾಕರ ನಾಯ್ಕ ಹಾಗೂ ಗ್ರಾಮಸ್ಥರು ನೀಡಿರುವ ಮನವಿಯಂತೆ, ಕುಚೆಗಾರ ಗ್ರಾಮದ ಸರ್ವೆ ನಂಬರ್ 56 ಹಿಸ್ಸಾ 1ರಲ್ಲಿ ಸೇತುವೆ ನಿರ್ಮಾಣಕ್ಕೆ ಈ ಹಿಂದೆ ಮಂಜೂರಾತಿ ದೊರೆತಿತ್ತು. ಆದರೆ, ಕಾಮಗಾರಿ ಆರಂಭಿಸುವ ವೇಳೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯವರು ಮೂಲ ಸ್ಥಳವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅಲ್ಲದೆ, ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ 500 ಮೀಟರ್ ಉದ್ದದ ರಸ್ತೆ ನಿರ್ಮಾಣದ ವೇಳೆ ಕೇವಲ 10 ಮೀಟರ್ ಕೆಲಸ ಬಾಕಿ ಇರುವಾಗ ತಾಂತ್ರಿಕ ತಕರಾರು ತೆಗೆದು ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದು ಗ್ರಾಮದ ಸಂಪರ್ಕವನ್ನೇ ಸ್ಛಗಿತಗೊಳಿಸಿದೆ.ಸಮರ್ಪಕವಾದ ಸೇತುವೆ ಮತ್ತು ರಸ್ತೆ ಇಲ್ಲದ ಕಾರಣ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ಹಾಗೂ ಅನಾರೋಗ್ಯ ಪೀಡಿತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಮಳೆಗಾಲದಲ್ಲಿ ಈ ಭಾಗದ ಜನರು ನದಿಯನ್ನು ದಾಟಲು ಶಿಥಿಲಗೊಂಡಿರುವ ಮರದ ಸಂಕದ ಮೇಲೆ ಅವಲಂಬಿತರಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾದಾಗ ಈ ಸಂಕದ ಮೇಲೆ ನಡೆಯುವುದು ಪ್ರಾಣಕ್ಕೆ ಸಂಚಕಾರ ತರುವಂತಿದೆ. ಸಾರ್ವಜನಿಕರು ಪ್ರತಿನಿತ್ಯ ಭೀತಿಯ ನೆರಳಿನಲ್ಲೇ ಸಂಚರಿಸುವಂತಾಗಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ದುರದೃಷ್ಟಕರ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಜ್ವಲಂತ ಸಮಸ್ಯೆಯ ಕುರಿತು ಗ್ರಾಮಸ್ಥರು 2023ರ ಮಾರ್ಚ್ ತಿಂಗಳಿನಿಂದಲೂ ಕಾರವಾರದ ಸಹಾಯಕ ಕಮಿಷನರ್, ತಹಸೀಲ್ದಾರ್, ತಾಲೂಕು ಪಂಚಾಯತ್ ಇಒ, ಮಲ್ಲಾಪುರ ಪಿಡಿಒ ಹಾಗೂ ಕೈಗಾ ಅಣುಶಕ್ತಿ ಕೇಂದ್ರದ ಸಿಎಸ್‌ಆರ್ ಸಮಿತಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಮೂರು ವರ್ಷಗಳು ಕಳೆದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಅಥವಾ ಕಾಮಗಾರಿ ಪುನರಾರಂಭಕ್ಕೆ ಆಸಕ್ತಿ ತೋರಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಕೂಡಲೇ ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಮೂಲ ಸ್ಥಳದಲ್ಲಿಯೇ 25 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ ಸೇತುವೆಯನ್ನು ಮತ್ತು ಅರ್ಧಕ್ಕೆ ನಿಂತಿರುವ 500 ಮೀಟರ್ ರಸ್ತೆಯನ್ನು ಪೂರ್ಣಗೊಳಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.