ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ರಾಜ್ಯದಲ್ಲಿ 2ನೇ ಹಳೆಯ ವಿಶ್ವವಿದ್ಯಾಲಯ ಮತ್ತು ಛೋಟಾ ಮಹಾಬಳೇಶ್ವರ ಎಂಬ ಖ್ಯಾತಿಯ ಕರ್ನಾಟಕ ವಿಶ್ವವಿದ್ಯಾಲಯದ ವಿಶಾಲವಾದ ಆವರಣದಲ್ಲಿ ಅರೆಬರೆ ನಿರ್ಮಾಣಗೊಂಡ ವಿವಿಧೋದ್ದೇಶ ಕ್ರೀಡಾಂಗಣ ವಿವಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.
ವಿಶ್ವವಿದ್ಯಾಲಯದ ಆವರಣದ ಪೂರ್ವ ತುದಿಯಲ್ಲಿ ಪತ್ರಿಕೋದ್ಯಮ ವಿಭಾಗ ಮತ್ತು ನ್ಯೂ ಬಾಯ್ಸ್ ಹಾಸ್ಟೆಲ್ ಹತ್ತಿರ ಇರುವ ಈ ಕ್ರೀಡಾಂಗಣದ ಸ್ಥಳ ಈಗ ಎಲ್ಲ ರೀತಿಯ ಅನೈತಿಕ ಚಟುವಟಿಕೆ ತಾಣವಾಗಿದೆ. ಕಳೆದ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಕ್ರೀಡಾಂಗಣದ ಪರಿಸ್ಥಿತಿ ನೋಡಿ ಆಘಾತಕ್ಕೆ ಒಳಗಾದರು.
ಇಷ್ಟು ವರ್ಷಗಳ ಕಾಲ ಯಾರೂ ಈ ಕ್ರೀಡಾಂಗಣದ ನಿರ್ಮಾಣ ಕಾರ್ಯ ಪೂರ್ಣಗೊಳಿಸುವತ್ತ ಗಮನ ಹರಿಸಿಲ್ಲ ಎಂಬುದು ಮತ್ತಷ್ಟು ಆಘಾತಕ್ಕೆ ಕಾರಣವಾಯಿತು. ಆದಷ್ಟು ಬೇಗ ಕ್ರೀಡಾಂಗಣದ ಸ್ಥಳದಲ್ಲಿ ಬೆಳೆದಿರುವ ಗಿಡಮರಗಳು, ಮುಳ್ಳು-ಕಂಟಿಗಳನ್ನು ತೆರವುಗೊಳಿಸಿ ಬೇರೆ ಬೇರೆ ಕಂಪನಿಗಳಿಂದ ಸಿಎಸ್‌ಆರ್ ಅಡಿಯಲ್ಲಿ ಅಗತ್ಯ ಧನ ಸಂಗ್ರಹ ಮಾಡಿ ಕ್ರೀಡಾಂಗಣ ನಿರ್ಮಾಣವನ್ನು ಪೂರ್ತಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.
ಮಿಚಿಗನ್ ವಿವಿ ಸ್ಟೇಡಿಯಂ ಮಾದರಿ: 1996ರಲ್ಲಿ ಕೆ. ರಾಮೇಗೌಡ ಕವಿವಿ ಕುಲಪತಿ ಆಗಿದ್ದಾಗ ವಿವಿ ಆವರಣದಲ್ಲಿ ಅಮೆರಿಕದ ಮಿಚಿಗನ್ ವಿವಿ ಸ್ಟೇಡಿಯಂ ಮಾದರಿಯ ವಿವಿಧೋದ್ದೇಶ ಕ್ರೀಡಾಂಗಣವೊಂದನ್ನು ಕಟ್ಟುವ ಯೋಜನೆ ರೂಪಿಸಿದರು.
ಬೆಳಗಾವಿಯ ಸಂಸ್ಥೆಯೊಂದಕ್ಕೆ ನಿರ್ಮಾಣದ ಗುತ್ತಿಗೆ ನೀಡಲಾಯಿತು. 1998ರಲ್ಲಿ ಪ್ರಥಮ ಹಂತದ ಕಾರ್ಯಗಳನ್ನು ಆರಂಭಿಸಿದ ನಿರ್ಮಾಣ ಸಂಸ್ಥೆ ₹1.46 ಕೋಟಿ ವೆಚ್ಚದಲ್ಲಿ ಭಾಗಶಃ ಪೂರ್ಣಗೊಳಿಸಿತು. ಸ್ಟೇಡಿಯಂ ಕಟ್ಟೆಗಳು, ಟ್ರ್ಯಾಕ್, ರಿಂಗ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ಭಾಗಶಃ ಪೂರ್ಣಗೊಂಡಿತು. 2000ನೇ ಜನವರಿ ವರೆಗೆ ಆಗಿದ್ದ ಒಟ್ಟು ವೆಚ್ಚ ₹2.09 ಕೋಟಿ.
ಏತಕ್ಕೆ ಕಾಮಗಾರಿ ಸ್ಥಗಿತ?
ಕೆಲವು ನಿಗೂಢ ಕಾರಣಗಳಿಂದಾಗಿ 2000 ಇಸ್ವಿಯಲ್ಲಿ ಕವಿವಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲು ತೀರ್ಮಾನಿಸಿತು. ಗುತ್ತಿಗೆದಾರ ಏಜೆನ್ಸಿ ವಿವಿಗೆ ಮನವಿ ಸಲ್ಲಿಸಿ ತನಗೆ ಬರಬೇಕಾದ ₹2.27 ಕೋಟಿ ಹಣವನ್ನು ಶೇ. 15ರ ಬಡ್ಡಿಯೊಂದಿಗೆ ನೀಡಬೇಕೆಂದು ಕೇಳಿತು.
ವಿವಿ ಈ ಮನವಿಯನ್ನು ಪುರಸ್ಕರಿಸದೇ ಇದ್ದಾಗ 2004ನೇ ಇಸ್ವಿಯಲ್ಲಿ ಗುತ್ತಿಗೆದಾರ ಸಂಸ್ಥೆಯು ಧಾರವಾಡ ನ್ಯಾಯಾಲಯದಲ್ಲಿ ವಿವಿ ವಿರುದ್ಧ ದಾವೆ ದಾಖಲು ಮಾಡಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 2019 ಜೂನ್‌ನಲ್ಲಿ ತೀರ್ಪು ನೀಡಿ ಕವಿವಿ ಗುತ್ತಿಗೆದಾರರಿಗೆ ₹2.27 ಕೋಟಿ ಮತ್ತು ಅದರ ಮೇಲೆ ಶೇ. 15ರಂತೆ ಬಡ್ಡಿ ಹಾಕಿ ನೀಡಬೇಕೆಂದು ಆದೇಶಿಸಿತು. ಈ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ವಿವಿ ಪ್ರಶ್ನಿಸಿತು.
2020 ಫೆಬ್ರುವರಿ 25ರಂದು ಉಚ್ಚ ನ್ಯಾಯಾಲಯ ಆದೇಶ ನೀಡಿ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿತು. ಜತೆಗೆ ಕವಿವಿ ನ್ಯಾಯಾಲಯದಲ್ಲಿ ಗುತ್ತಿಗೆದಾರ ಕೇಳಿದ ಒಟ್ಟು ಹಣದ ಶೇ. 50ರಷ್ಟನ್ನು ಠೇವಣಿಯಾಗಿ ಇಡಬೇಕೆಂಬ ಕರಾರು ಹಾಕಿತ್ತು.
ಕವಿವಿ ₹1.13 ಕೋಟಿ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟಿದ್ದು, ಪ್ರಕರಣದ ವಿಚಾರಣೆ ಇನ್ನೂ ನಡೆದಿದೆ ಎಂದು ಕವಿವಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಏತನ್ಮಧ್ಯೆ, 1996ರಿಂದ 2000ರ ವರೆಗೆ ಹಣದ ಈಗಿನ ಮೌಲ್ಯದಲ್ಲಿ ವೆಚ್ಚವಾಗಿರುವ ಮೊತ್ತ ₹35 ಕೋಟಿ. ಸಚಿವ ಸಂತೋಷ ಲಾಡ್ ಈ ಪ್ರಕರಣವನ್ನು ಹೇಗೆ ಬಗೆಹರಿಸಿ ಶಾಪಗ್ರಸ್ತವಾಗಿರುವ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
27 ವರ್ಷಗಳಿಂದ ನನೆಗುದಿಗೆ: 1996ರಿಂದ ಇಲ್ಲಿಯ ವರೆಗೆ 27 ವರ್ಷಗಳ ಕಾಲ ಈ ಕ್ರೀಡಾಂಗಣದ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಚಕಾರ ಎತ್ತಿಲ್ಲ. ಈಗಿನ ಬಹಳಷ್ಟು ವಿದ್ಯಾರ್ಥಿಗಳು ಹಾಗೂ ಕವಿವಿ ಸಿಬ್ಬಂದಿಗೆ ಕ್ರೀಡಾಂಗಣ ಕಾಮಗಾರಿ ನಡೆದಿತ್ತು ಎಂಬ ಮಾಹಿತಿಯೂ ಇಲ್ಲ. ಅಷ್ಟೊಂದು ಗಿಡಮರ, ಕಂಟಿಗಳು ಅಲ್ಲಿ ಬೆಳೆದಿವೆ.
ಕವಿವಿ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕರ್ನಾಟಕ ವ್ಯಾಪ್ತಿ ಹೊಂದಿದೆ. ವಿವಿಯಲ್ಲಿ 79 ವಿವಿಧ ಕೋರ್ಸ್‌ಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಸದ್ಯ ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಸೀಮಿತ ಕ್ರೀಡಾ ಚಟುವಟಿಕೆಗೆ ಅವಕಾಶ ಇದೆ. ಸಮೀಪದಲ್ಲಿಯೇ ಈಜುಗೊಳ ಇದ್ದು, ಐದು ದಶಕಗಳಿಂದ ಅದೂ ಸ್ಥಗಿತಗೊಂಡಿದೆ. ವಿವಿಧೋದ್ದೇಶ ಕ್ರೀಡಾಂಗಣ ಸಂಪೂರ್ಣ ಸಿದ್ಧಗೊಂಡು ಅದರ ಜತೆಗೆ ಈಜುಗೊಳವೂ ಕಾಯಕಲ್ಪ ಪಡೆದರೆ ವಿವಿಯಲ್ಲಿ ಕ್ರೀಡಾ ಚಟುವಟಿಕೆಗೆ ಪುನಶ್ಚೇತನ ದೊರಕಿ, ವಿವಿ ಕ್ರೀಡಾ ಕ್ಷೇತ್ರದಲ್ಲಿ ತನ್ನ ಗತವೈಭವವನ್ನು ಪುನಃ ಪ್ರತಿಷ್ಠಾಪಿಸಲು ಸಾಧ್ಯವಾಗುತ್ತದೆ ಎಂಬುದು ಕ್ರೀಡಾಭಿಮಾನಿಗಳ ಆಶಯ.