ಕುಡಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ಮೂಲ ಸೌಕರ್ಯಗಳೇ ಇಲ್ಲ

| Published : Feb 04 2025, 12:32 AM IST

ಸಾರಾಂಶ

ಈ ಪ್ರದೇಶದಲ್ಲಿ ರಸ್ತೆಗಳಷ್ಟೇ ಅಲ್ಲದೇ, ಬೀದಿದೀಪ, ಕುಡಿಯುವನೀರು, ಚರಂಡಿ ವ್ಯವಸ್ಥೆ, ಉದ್ಯಾನವನ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಕಟ್ಟಡ ಕಾಮಗಾರಿಗಳನ್ನು ಸಂಪೂರ್ಣ ನಿರ್ಮಿಸುವುದು ಸೇರಿ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಸುಮಾರು ವರ್ಷಗಳಿಂದ ಇದೆ ಎಂದು ಕೈಗಾರಿಕೋದ್ಯಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಮುಖ್ಯದ್ವಾರದಲ್ಲೇ ಗುಂಡಿ ಬಿದ್ದಿರುವ ರಸ್ತೆಗಳು, ಮಳೆ ಬಂದರೆ ಕೆಸರು ಗದ್ದೆ, ಬಿಸಿಲಿದ್ದರೆ ಧೂಳುಮಯ, ವಾಹನ ಸವಾರರ ಪರದಾಟ, ದಿನನಿತ್ಯ ಅಪಘಾತಗಳ ಸರಮಾಲೆ....ಇದು ನಗರದ ಕೈಗಾರಿಕಾ ಪ್ರದೇಶದ ವಾಸ್ತವ ಸ್ಥಿತಿ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ತಾಲೂಕಿನ ಗಡಿಭಾಗದ, ಕುಡಮಲಕುಂಟೆ ಭಾಗದಲ್ಲಿ ಕೈಗಾರಿಕಾ ಪ್ರದೇಶವನ್ನು ನಿರ್ಮಿಸಿದೆ, ಆದರೆ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ. ಹಂತ- ಹಂತವಾಗಿ ಪ್ರಾರಂಭವಾದ ಕೈಗಾರಿಕಾ ಪ್ರದೇಶಕ್ಕೆ ಕೆಐಎಡಿಬಿ ವತಿಯಿಂದ ಕೈಗಾರಿಕೆಗಳಿಗೆ ನಿವೇಶನಗಳನ್ನು ಹಂಚಿಕೆಮಾಡಿದೆ, ಆದರೆ ಮೂಲಸೌಕರ್ಯಗಳ ಕಡೆ ಗಮನಹರಿಸಿಲ್ಲ.

ಈ ಪ್ರದೇಶದಲ್ಲಿ ರಸ್ತೆಗಳಷ್ಟೇ ಅಲ್ಲದೇ, ಬೀದಿದೀಪ, ಕುಡಿಯುವನೀರು, ಚರಂಡಿ ವ್ಯವಸ್ಥೆ, ಉದ್ಯಾನವನ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಕಟ್ಟಡ ಕಾಮಗಾರಿಗಳನ್ನು ಸಂಪೂರ್ಣ ನಿರ್ಮಿಸುವುದು ಸೇರಿ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಸುಮಾರು ವರ್ಷಗಳಿಂದ ಇದೆ ಎಂದು ಕೈಗಾರಿಕೋದ್ಯಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲನೇ ಹಂತವಾಗಿ 239 ಎಕರೆ, ಎರಡನೇ ಹಂತದಲ್ಲಿ 435 ಎಕರೆ ಹಾಗೂ ಮೂರನೇ ಹಂತದಲ್ಲಿ 825 ಎಕರೆ ಜಮೀನನ್ನು ಸರ್ಕಾರ ರೈತರಿಂದ ಭೂ-ಸ್ವಾಧೀನ ಪಡಿಸಿಕೊಂಡಿದೆ. ಒಟ್ಟು 1,499 ಎಕರೆಯಷ್ಟು ಜಾಗದಲ್ಲಿ ಕೈಗಾರಿಕಾ ಪ್ರದೇಶವನ್ನು ವಿಸ್ತರಣೆ ಮಾಡಲಾಗಿದೆ, ಆದರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಾತ್ರ ಆಸಕ್ತಿ ತೋರಿಲ್ಲ ಎಂದು ಅಲ್ಲಿನ ಕಾರ್ಮಿಕರು ಆರೋಪಿಸುತ್ತಿದ್ದಾರೆ.

ಕನ್ನಡ ನಾಮಪಲಕಗಳೇ ಕಾಣುವುದಿಲ್ಲ:

ಇಲ್ಲಿ ಜಾಕಿ, ಎ-1 ಸ್ಟೀಲ್, ಅಜಾಕ್ಸ್, ಯುರೋಸೂಟ್ಸ್, ಆರ್.ಎಲ್.ಎಫ್.ಸಿ, ಅಲ್ಯೂಮಿನಿಯಂ ಕಂಪನಿಗಳು, ರೀಫೈನ್ಡ್ ಆಯಿಲ್ ಕಂಪನಿಗಳು ಸೇರಿ 50ಕ್ಕೂ ಹೆಚ್ಚು ಸಣ್ಣ ಮತ್ತು ಬೃಹತ್ ಕಂಪನಿಗಳು ಕೆಲಸ ನಿರ್ವಹಿಸುತ್ತಿವೆ, ಇಲ್ಲಿ ಅಂದಾಜು 30 ರಿಂದ 40 ಸಾವಿರದಷ್ಟು ಕಾರ್ಮಿಕರು ಪ್ರತಿದಿನ ಕೆಲಸ ನಿರ್ವಹಿಸುತ್ತಾರೆ. ಬೀದಿ ದೀಪಗಳಿಲ್ಲದ ಕಾರಣ ಮಹಿಳೆಯರು ಕೆಲಸಕ್ಕೆ ಬರಲು ಹಿಂಜರಿಯುತ್ತಾರೆ ಎಂದು ಉದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಈ ಪ್ರದೇಶದಲ್ಲಿ ನಿರ್ಮಿಸಲಾದ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ಜಾಗ ಮಾತ್ರ ಒದಗಿಸಲಾಗಿದೆ, ಆದರೆ ಅದರ ನಿರ್ವಹಣೆ ಮಾಡಬೇಕಾದವರು ಮಾತ್ರ ಈ ಬಗ್ಗೆ ಗಮನಹರಿಸುತ್ತಿಲ್ಲ, ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಗಳಲ್ಲಿಯೇ ಸಂಚಾರ ಮಾಡುತ್ತವೆ, ಇಂತಹ ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಹಲವು ತಿಂಗಳುಗಳೇ ಕಳೆದರೂ, ಅದನ್ನು ದುರಸ್ತಿಮಾಡುವ ಗೋಜಿಗೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಹೋಗಿಲ್ಲ, ಚರಂಡಿಗಳು ಇದ್ದು ಇಲ್ಲದಂತಾಗಿದ್ದು, ಕಸಕಡ್ಡಿ, ಗಿಡಗಂಟಿಗಳಿಂದ ಮುಚ್ಚಿಹೋಗಿವೆ, ಉದ್ಯಾನವನಗಳಂತೂ ಎಲ್ಲೂ ಕಾಣಲು ಸಿಗುವುದಿಲ್ಲ, ಅಲ್ಲಿನ ಕೆಲವು ಕಾರ್ಖಾನೆಗಳ ಮುಂದೆ ಬೆಳೆದಿರುವ ಗಿಡ- ಮರಗಳು ಅಲ್ಲಿ ಬರುವ ರಾಸಾಯನಿಕ ಹೊಗೆಗೆ, ಕಪ್ಪು ಬಣ್ಣಕ್ಕೆ ತಿರುಗಿವೆ.

ಕೈಗಾರಿಕಾ ಪ್ರದೇಶದ ಖಾಲಿ ನಿವೇಶನದಲ್ಲಿ ಬೆಳೆದಿರುವ ಎತ್ತರದ ಹುಲ್ಲಿಗೆ ಕೆಲವು ಕಡೆ ಬೆಂಕಿ ಇಡಲಾಗಿದೆ, ಬೇಸಿಗೆ ಹತ್ತಿರ ಬರುತ್ತಿರುವುದರಿಂದ ಬೆಂಕಿ ಅವಘಡ ಸಂಭವಿಸಿದರೆ ಅದರ ಪರಿಣಾಮಗಳನ್ನು ಎದುರಿಸಲು ಪ್ರಯಾಸಪಡಬೇಕಾಗುತ್ತದೆ. ಇದರ ಬಗ್ಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೆ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ವಿಪರ್ಯಾಸವಾಗಿದೆ. ಇಡೀ ಕೈಗಾರಿಕಾ ಪ್ರದೇಶದಲ್ಲಿ ಎಲ್ಲೂ ಸಹ ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ನೀರಿನ ಟ್ಯಾಂಕ್ ಗಳಾಗಲಿ ಕಾಣಸಿಗುವುದಿಲ್ಲ, ಯಾವುದಾದರೂ ಅವಘಡ ಸಂಭವಿಸಿದರೆ, ನೀರಿಗಾಗಿ ಪರದಾಡ ಬೇಕಾದಂಥ ಪರಿಸ್ಥಿತಿ ಕಂಡುಬರುತ್ತಿದೆ.

ಇನ್ನು ಈ ಪ್ರದೇಶಕ್ಕೆ ಬಾರೀ ವಸ್ತುಗಳನ್ನು ಸಾಗಿಸುವ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಅವುಗಳ ಭಾರ ತಾಳಲಾರದೆ, ಸುತ್ತಮುತ್ತಲಿನ ಗ್ರಾಮಗಳ ರಸ್ತೆಗಳೆಲ್ಲ ಕಿತ್ತುಹೋಗುತ್ತಿವೆ. ಕಾರ್ಖಾನೆಗಳಿಂದ ರಾತ್ರಿವೇಳೆ ಹೆಚ್ಚಿನ ಹೊಗೆಬಿಡುತ್ತಾರೆ, ಇದರಿಂದ ರೋಗಗಳ ಬಾಧೆಗೆ ತುತ್ತಾಗುತ್ತಿದ್ದೇವೆ ಎಂದು ಸುತ್ತ- ಮುತ್ತಲಿನ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.