ಕುದ್ಮುಲ್‌ ಸಾಧನೆ ಗಾಂಧೀಜಿಗೂ ಪ್ರೇರಣೆ: ಕ್ಯಾ. ಬ್ರಿಜೇಶ್‌ ಚೌಟ

| Published : Jul 02 2025, 11:52 PM IST

ಸಾರಾಂಶ

ಕುದ್ಮುಲ್‌ ರಂಗರಾವ್‌ ಎಜ್ಯುಕೇಶನ್‌ ಟ್ರಸ್ಟ್‌ ಸಹಯೋಗದಲ್ಲಿ ಕುದ್ಮುಲ್‌ ರಂಗರಾವ್‌ 166ನೇ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಬಾಬುಗುಡ್ಡೆಯ ಕುದ್ಮುಲ್‌ ರಂಗರಾವ್‌ ಸಮಾಧಿ ಬಳಿ ಪುಷ್ಪಾರ್ಚನೆ ಹಾಗೂ ಗೌರವ ನಮನ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ತನ್ನ ಜೀವನವನ್ನೇ ದೀನದಲಿತರ ಸೇವೆಗೆ ಮುಡಿಪಾಗಿರಿಸಿದ ಕುದ್ಮುಲ್‌ರಂಗರಾವ್‌ ಸಾಧನೆ ಮಹಾತ್ಮಾ ಗಾಂಧೀಜಿಗೆ ಪ್ರೇರಣೆಯಾಗಿತ್ತು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ.ಕುದ್ಮುಲ್‌ ರಂಗರಾವ್‌ ಎಜ್ಯುಕೇಶನ್‌ ಟ್ರಸ್ಟ್‌ ಸಹಯೋಗದಲ್ಲಿ ಕುದ್ಮುಲ್‌ ರಂಗರಾವ್‌ 166ನೇ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಬಾಬುಗುಡ್ಡೆಯ ಕುದ್ಮುಲ್‌ ರಂಗರಾವ್‌ ಸಮಾಧಿ ಬಳಿ ಪುಷ್ಪಾರ್ಚನೆ ಹಾಗೂ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧಿ 1934 ಫೆ. 24ರಂದು ಮಂಗಳೂರನ್ನು ಸಂದರ್ಶಿಸಿದಾಗ ಶೇಡಿಗುಡ್ಡೆಯಲ್ಲಿ ಕುದ್ಮುಲ್‌ ರಂಗರಾಯರು ಸ್ಥಾಪಿಸಿದ್ದ ಡಿಪ್ರೆಸ್ಡ್‌ ಕ್ಲಾಸ್‌ ಮಿಷನ್‌ ಸಂಸ್ಥೆಗೆ ಭೇಟಿ ಕೊಟ್ಟರು. ಆಗ ರಂಗರಾಯರು ನಿಧನರಾಗಿ ಆರು ವರ್ಷ ಕಳೆದಿತ್ತು. ಗಾಂಧೀಜಿ ಆ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶಾಲಾ ಮಕ್ಕಳು ರಚಿಸಿದ ಕರಕುಶಲ ವಸ್ತುಗಳನ್ನು ಮತ್ತು ಅಂದವಾದ ಹೂದೋಟವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸಾರ್ವಜನಿಕ ಭಾಷಣದಲ್ಲಿ ಗಾಂಧೀಜಿ ದಲಿತ ಉದ್ಧಾರಕ ಕುದ್ಮುಲ್‌ ರಂಗರಾಯರನ್ನು ತನ್ನ ಗುರು ಎಂದು ಘೋಷಿಸಿ ಅವರ ಸಮಾಜಮುಖಿ ಕೆಲಸಗಳಿಂದ ತಾನು ಪ್ರಭಾವಿತನಾದೆ ಎಂದು ಸಾರಿರುವುದು ವಿಶೇಷ. ಈ ಮೂಲಕ ರಂಗರಾವ್‌ ಮಹತ್ಮ ಗಾಂಧಿಜಿಗೆ ಪ್ರೇರಣಾದಾಯಕವಾಗಿ ಸೇವಾಕಾರ್ಯ ಮಾಡಿದ್ದರು ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಕುದ್ಮುಲ್‌ ರಂಗರಾವ್‌ ಸಮಾಧಿ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಈ ಹಿಂದೆ ಇದ್ದ ಬಿಜೆಪಿ ಸರ್ಕಾರ 3.5 ಕೋ.ರು. ಅನುದಾನ ಮೀಸಲಿರಿಸಿದರೂ ಈಗಿನ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ಜಾಗತಿಕ ಮಟ್ಟದಲ್ಲಿ ಪರಿಚಯಕ್ಕೆ ಸಿದ್ಧತೆ:

ಸಾಮಾಜಿಕ ಕಾರ್ಯಕರ್ತ ವಾದಿರಾಜ್‌ ಮಾತನಾಡಿ, ಕುದ್ಮುಲ್‌ ರಂಗರಾವ್‌ ಅವರ ಜನ್ಮಶತಮಾನ ಆಚರಿಸಲು ಸಾಧ್ಯವಾಗಿಲ್ಲ, ಮುಂದಿನ 2028 ರ ಜ.28 ಕ್ಕೆ ಕುದ್ಮುಲ್‌ ರಂಗರಾವ್‌ ನಿಧನರಾಗಿ ಶತಮಾನ ಕಳೆದ ಹಿನ್ನೆಲೆಯಲ್ಲಿ ದೇಶಾದ್ಯಂತ ಇವರ ಸಾಧನೆಯನ್ನು ಪರಿಚಯಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅವರ ಸಾಧನೆಯ ಪುಸ್ತಕ, ಅಂಚೆ ಚೀಟಿ ಹೊರತರುವ ಕಾರ್ಯ ನಡೆಸಲಾಗುವುದು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಸಾಮಾಜಿಕ ಕಾರ್ಯಕರ್ತ ವಾದಿರಾಜ್‌, ಕುದ್ಮುಲ್‌ ರಂಗರಾವ್‌ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಬಿ.ಆರ್‌. ಹೃಯನಾಥ್‌, ಮಾಜಿ ಮೇಯರ್‌ ಮನೋಜ್‌ ಕೋಡಿಕಲ್‌, ಪಾಲಿಕೆ ಮಾಜಿ ಸದಸ್ಯರಾದ ಸಂದೀಪ್‌ ಗರೋಡಿ, ಶೈಲೇಶ್‌, ಭರತ್‌, ಉಪನ್ಯಾಸಕ ಪುಟ್ಟಸ್ವಾಮಿ ಮತ್ತಿತತರು ಇದ್ದರು.ಕುದ್ಮುಲ್‌ ರಂಗರಾವ್‌ ಎಜುಕೇಶನ್‌ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ರಘುವೀರ್‌ ಬಾಬುಗುಡ್ಡೆ ನಿರೂಪಿಸಿದರು.