ಕನ್ನಡಪ್ರಭ ವಾರ್ತೆ ಕಳಸ

ಕಳಸ ತಾಲೂಕಿನಾದ್ಯಂತ ಮಳೆ ಬಿರುಸಾಗಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಕಳಸದಿಂದ ಕಾರ್ಕಳ ಮಂಗಳೂರು ಹೋಗುವ ರಸ್ತೆ ಬಂದಾಗಿದ್ದು , ಜಾಂಬ್ಳೆ , ನೆಲ್ಲಿಬೀಡು ಗಳ ಸೇತುವೆ ಮೇಲೆ ನೀರು ನಿಂತು ವಾಹನ ಸಂಚಾರ ಸ್ಥಗಿತವಾಗಿದೆ. ಕುದುರೆಮುಖ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಬ್ಲಾಕ್ ಆಗಿದೆ.

ಕಳಸ ಸುತ್ತಮುತ್ತ ಬಾರಿ ಮಳೆ: ಸಣ್ಣ ಸೇತುವೆಗಳಾದ ಜಾಂಬ್ಳೆ , ನೆಲ್ಲಿಬೀಡು ಸೇತುವೆ ಅತಿಯಾದ ಮಳೆಗೆ ಸೇತುವೆ ಮೇಲೆ ನೀರು ಹರಿದು ವಾಹನ, ಜನ ಸಂಚಾರ ನೀರು ಇಲ್ಲದಂತಾಗಿದೆ.

ಕಳಸ ಹೊರನಾಡು ಸೇತುವೆ ನೂತನವಾಗಿ ನಿರ್ಮಾಣವಾಗಿದ್ದು ಹೆಚ್ಚು ಅಡಿ ಎತ್ತರವಿದೆ. ಇಲ್ಲಿನ ಹಳೆಯ ಸೇತುವೆ ಈ ವರ್ಷ ಮೊದಲ ಬಾರಿಗೆ ಮುಳುಗಡೆಯಾಗಿದೆ. ಭದ್ರಾ ನದಿ ಉಕ್ಕಿ ಹರಿದು ಕೆಲವೆಡೆ ತೋಟ, ಗದ್ದೆಗಳಿಗೂ ನೀರು ನುಗ್ಗಿದೆ.

ತಡವಾಗಿ ಶಾಲೆಗಳಿಗೆ ರಜೆ ಘೋಷಣೆ: ಕಳಸ ಆಡಳಿತ, ಅಧಿಕಾರಿಗಳಿಗೆ ತರಾಟೆ


ಅತಿಯಾದ ಮಳೆ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಖಾಸಗಿ ಶಾಲೆಗಳು ಮುಂಜಾಗ್ರತೆಯಾಗಿ ಮುಂಜಾನೆಯೇ ರಜೆ ಘೋಷಿಸಿದರೆ ಸ್ಥಳೀಯ ಆಡಳಿತ ಮಾತ್ರ ನಿದ್ರಾವಸ್ಥೆಯಲ್ಲಿದ್ದು ,ಹಳ್ಳಿ ಬಾಗದ ಮಕ್ಕಳು ಶಾಲೆ ಸಮೀಪ ಬಂದ ನಂತರ ಎಚ್ಚೆತ್ತುಕೊಂಡು 8.30ರ ವೇಳೆಗೆ ರಜೆ ಘೋಷಿಸಿದ್ದರಿಂದ ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಸೇತುವೆಗಳ ಮೇಲೆ ನೀರು ಉಕ್ಕಿದರೂ ವಾಹನ ಚಾಲಕರ, ಪ್ರವಾಸಿಗರ ಪುಂಡಾಟ: ನೆಲ್ಲಿಬೀಡು ಮತ್ತು ಸಂಸೆ ಸೇತುವೆ ನೀರು ಬಂದು ಸಂಚಾರ ಬಂದ್ ಆಗಿತ್ತು, ಸಾಕಷ್ಟು ವಾಹನ ಸವಾರರು ಅದರಲ್ಲಿಯೇ ಪ್ರಯಾಣಿಸಿದರು. ಇದು ಅಪಾಯದ ಪ್ರಯಾಣ ಬೇಡ ಎಂದು ಸ್ಥಳೀಯರು ಹೇಳಿದರು ಕೇಳದೆ ಕೆಲವರು ಪುಂಡಾಟ ಮೆರೆದಿದ್ದು ಕಂಡುಬಂತು. ನಂತರ ಬ್ಯಾರಿಕೇಡ್ ಹಾಕಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ.ನೀರು ಕಡಿಮೆಯಾದ ನಂತರ ವಾಹನ ಸಂಚಾರ ಮುಕ್ತಗೊಳಿಸಲಾಯಿತು.

ಸಂಸೆ ಮಾರ್ಕೋಡು ಕಾಲು ಸಂಕ ಮುಳುಗಡೆಯಾಗಿದ್ದು, ನೀರಿನ ಹರಿವು ಹೆಚ್ಚಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೆಲವೆಡೆ ಮರಗಳು ಮತ್ತು ಸಣ್ಣ ಸಣ್ಣ ಮಣ್ಣಿಗುಡ್ಡೆ ಜಾರಿದ ಪ್ರಕರಣಗಳು ಕಂಡುಬಂದರೂ ಹೆಚ್ಚಿನ ಪ್ರಮಾಣದ ಅವಘಡ ಸಂಭವಿಸಿಲ್ಲ.