ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದೇವರ ಹೊರಾಂಗಣ ಉತ್ಸವಾದಿಗಳು ಶನಿವಾರ ತೆರೆ ಕಂಡಿತು.
ಸುಬ್ರಹ್ಮಣ್ಯ: ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದೇವರ ಹೊರಾಂಗಣ ಉತ್ಸವಾದಿಗಳು ಶನಿವಾರ ತೆರೆ ಕಂಡಿತು.
ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಶ್ರೀ ದೇವರ ನಿತ್ಯೋತ್ಸವ ಕೊನೆಯಾಯಿತು. ಶುದ್ಧ ಷಷ್ಠಿಯ ದಿನ ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿದ ಬಳಿಕ ಶ್ರೀ ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಅಂತ್ಯವಾಯಿತು.ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವಮೂರ್ತಿ ಗರ್ಭಗುಡಿ ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ದೀಪಾವಳಿ ಅಮವಾಸ್ಯೆಯಂದು ಉತ್ಸವ ಆರಂಭವಾಗಿ ಜೇಷ್ಠ ಶುದ್ಧ ಷಷ್ಠಿಯಂದು ಕೊನೆಯ ಉತ್ಸವ ನಡೆಯುತ್ತದೆ.
ಜೇಷ್ಠ ಶುದ್ಧಷಷ್ಠಿಯ ದಿನ ರಾತ್ರಿ ಮಹಾಪೂಜೆ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವಗಳು ನೆರವೇರಿತು. ಆನೆ, ಬಿರುದಾವಳಿ, ಬ್ಯಾಂಡ್, ನಾದಸ್ವರ, ಸ್ಯಾಕ್ಸೋಪೋನ್‌ಗಳನ್ನೊಳಗೊಂಡ ಹೊರಾಂಗಣ ಉತ್ಸವ ನಡೆಯಿತು. ಈ ನಂತರ ದೇವಾಲಯ ನಗರದಲ್ಲಿ ದೇವರು ಗರ್ಭಗೃಹ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವಕ್ಕೆ ತೆರೆ ಬಿತ್ತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ಎ ಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ. ರಘು, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಅಜಿತ್ ಪಾಲೇರಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.