ಕನ್ನಡಪ್ರಭ ವಾರ್ತೆ ಮಂಡ್ಯ

ಬಂಗಾರಪ್ಪನವರ ಶಿಷ್ಯ ಎಂದು ಹೇಳಿಕೊಳ್ಳುವ ನೀವು ಕಾವೇರಿ ನೀರಿನ ವಿಚಾರದಲ್ಲಿ ಅವರಂತೆಯೇ ಸುಗ್ರೀವಾಜ್ಞೆ ಹೊರಡಿಸುವಂತಹ ದಿಟ್ಟ ನಿರ್ಧಾರವನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕುಮಾರ್ ಬಂಗಾರಪ್ಪ ಸವಾಲು ಹಾಕಿದರು.

ನಗರದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಿದಂತೆ ಸುಪ್ರೀಂಕೋರ್ಟ್ ಆದೇಶವನ್ನೂ ಧಿಕ್ಕರಿಸುವ ಎದೆಗಾರಿಕೆ ಪ್ರದರ್ಶಿಸಬೇಕು. ಬಂಗಾರಪ್ಪನವರು ಸುಪ್ರೀಂ ಆದೇಶವನ್ನು ಮೆಟ್ಟಿ ನಿಂತು ನೀರಿನ ರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸಿದರು. ಅಂತಹದೇ ಕೆಚ್ಚೆದೆಯನ್ನು ಪ್ರದರ್ಶಿಸಬೇಕು. ಬಂಗಾರಪ್ಪನವರ ಶಿಷ್ಯರಾಗಿ ಕರ್ನಾಟಕದ ನೆಲ, ಜಲ ರಕ್ಷಣೆ ನಿಮ್ಮ ಕರ್ತವ್ಯ ಎಂದು ಹೇಳಿದರು.

ಉತ್ತಮ ಮಳೆಯಾಗಿದ್ದರೆ ಯಾರೂ ಯೋಚನೆ ಮಾಡಬೇಕಿರಲಿಲ್ಲ. ಈ ವರ್ಷ ಕರ್ನಾಟಕ ಬರಗಾಲದ ಪರಿಸ್ಥಿತಿಯಲ್ಲಿದೆ. ರೈತರು ಕಬ್ಬು ಬೆಳೆದು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿ.ಕೆ.ಶಿವಕುಮಾರ್ ಕಾವೇರಿ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾದ ಕಾಲ ಎದುರಾಗಿದೆ ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ, ನ್ಯಾಯಯುತವಾಗಿಲ್ಲ. ತಮಿಳುನಾಡಿನ ಮುಖ್ಯಮಂತ್ರಿಗೆ ವೈಮಾನಿಕ ಸಮೀಕ್ಷೆ ಮಾಡಿಸುತ್ತೇನೆ ಎನ್ನುತ್ತೀರಿ. ತಮಿಳುನಾಡಿನವರನ್ನು ಕರೆದುಕೊಂಡು ಮಾಡಿಸುವುದಕ್ಕಿಂದ ಪ್ರಾಧಿಕಾರಕ್ಕೆ ನೀರಿನ ವಾಸ್ತವ ಪರಿಸ್ಥಿತಿಯನ್ನು ತೋರಿಸಿ ಸಲಹೆ ನೀಡಿದರು.


ಮೇಕೆದಾಟು ಅಣೆಕಟ್ಟು ಕಟ್ಟಬೇಕು. ಹಿಂದಿನಿಂದಲೂ ಗೇಜ್ ಇಟ್ಟುಕೊಂಡು ಒದ್ದಾಡುತ್ತಿದ್ದೇವೆ. ನಾವು ಕೊಟ್ಟ ನೀರು ಸಮುದ್ರಕ್ಕೆ ಹೋಗುತ್ತಿದೆ. ಕೇಂದ್ರ ಸರ್ಕಾರದ ಸಹಕಾರ ತೆಗೆದುಕೊಂಡು ಮೇಕೆದಾಟು ಅಣೆಕಟ್ಟು ಕಟ್ಟಿ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯ ಆಗಬಾರದು ಎಂದರು.