ಕುಮಾರ ಬಂಗಾರಪ್ಪ ಮೌನದಿಂದ ಪಕ್ಷಕ್ಕೆ ಧಕ್ಕೆ

| Published : Dec 08 2023, 01:45 AM IST

ಕುಮಾರ ಬಂಗಾರಪ್ಪ ಮೌನದಿಂದ ಪಕ್ಷಕ್ಕೆ ಧಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕರ್ತರು ಅವರ ನಾಯಕತ್ವದ ಮೇಲೆ ಇಟ್ಟುಕೊಂಡ ನಂಬಿಕೆ ಹುಸಿಯಾಗಿದೆ. ಅಧಿಕಾರವಿದ್ದಾಗ ಕಾರ್ಯಕರ್ತರನ್ನು ದೂರವಿಟ್ಟು ದುರಾಡಳಿತ ವರ್ತನೆ ತೋರಿ ಕ್ಷೇತ್ರದ ಕಡೆ ಮುಖ ಮಾಡುತ್ತಿರಲಿಲ್ಲ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು, ಮುಖಂಡರು ಸಮಸ್ಯೆಯಲ್ಲಿದ್ದಾಗ ಸೌಜನ್ಯಕ್ಕೂ ಭೇಟಿ ಮಾಡಿ ಅವರ ಸುಖ, ಕಷ್ಟ ಆಲಿಸದೆ ಬೆಂಗಳೂರಿನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾರ್ಯಕರ್ತರು ಅಸಮಾಧಾನ । ನಿಲುವು ಪ್ರಕಟಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಸೊರಬ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ನಂತರ ಬಿಜೆಪಿಯ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದ ಮಾಜಿ ಶಾಸಕ ಕುಮಾರ ಬಂಗಾರಪ್ಪ ಅವರ ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಅವರ ಮೌನದ ನಡೆಯಿಂದ ಪಕ್ಷಕ್ಕೆ ಧಕ್ಕೆಯಾಗಿದೆ. ತಕ್ಷಣ ತಮ್ಮ ನಿಲುವನ್ನು ಪ್ರಕಟಿಸಿದರೆ ಪಕ್ಷದ ಸಂಘಟನೆಯ ಹೊಸ ನಾಯಕತ್ವದ ಜವಾಬ್ದಾರಿಯನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಬಿಜೆಪಿ ಮುಖಂಡ ಡಾ. ಎಚ್.ಇ. ಜ್ಞಾನೇಶ್ ಹೇಳಿದರು.

ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನವಣೆಯಲ್ಲಿ ಪಕ್ಷಕ್ಕೆ ೫೪ ಸಾವಿರ ಮತ ಬಂದಿರುವುದು ವ್ಯಕ್ತಿಯಿಂದಲ್ಲ. ಬದಲಾಗಿ ಪಕ್ಷದ ವರ್ಚಸ್ಸಿನಿಂದ ಮತದಾರರು ಬೆಂಬಲಿಸಿದ್ದಾರೆ. ಗೌರವಯುತ ಮತ ನೀಡಿದ ಮತದಾರರ ಋಣಕ್ಕಾಗಿ ನಾವು ಅವರ ಕಷ್ಟ, ನೋವುಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ. ಇಂತಹ ಸಂದರ್ಭದಲ್ಲಿ ಕುಮಾರ್ ಬಂಗಾರಪ್ಪ ಎಷ್ಟು ಬಾರಿ ಜನರು ಹಾಗೂ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ಪ್ರಶ್ನಿಸಿದರು.

ಕಾರ್ಯಕರ್ತರು ಅವರ ನಾಯಕತ್ವದ ಮೇಲೆ ಇಟ್ಟುಕೊಂಡ ನಂಬಿಕೆ ಹುಸಿಯಾಗಿದೆ. ಅಧಿಕಾರವಿದ್ದಾಗ ಕಾರ್ಯಕರ್ತರನ್ನು ದೂರವಿಟ್ಟು ದುರಾಡಳಿತ ವರ್ತನೆ ತೋರಿ ಕ್ಷೇತ್ರದ ಕಡೆ ಮುಖ ಮಾಡುತ್ತಿರಲಿಲ್ಲ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು, ಮುಖಂಡರು ಸಮಸ್ಯೆಯಲ್ಲಿದ್ದಾಗ ಸೌಜನ್ಯಕ್ಕೂ ಭೇಟಿ ಮಾಡಿ ಅವರ ಸುಖ, ಕಷ್ಟ ಆಲಿಸದೆ ಬೆಂಗಳೂರಿನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ದೇಶದಾದ್ಯಂತ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸುತ್ತಿದ್ದರೆ ಕುಮಾರ್ ಬಂಗಾರಪ್ಪ ಯಾವುದೇ ಹರ್ಷ ವ್ಯಕ್ತಪಡಿಸಿಲ್ಲ. ಬಿ.ವೈ. ವಿಜಯೇಂದ್ರ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರೂ ಸೌಜನ್ಯಕ್ಕೂ ಅಭಿನಂದನೆ ತಿಳಿಸದೆ ಇರುವುದು ಅವರ ಸಣ್ಣತನ ತೋರಿಸುತ್ತದೆ ಎಂದು ಟೀಕಿಸಿದರು.

ಕುಮಾರ ಬಂಗಾರಪ್ಪ ಕಾರ್ಯಕರ್ತರೊಂದಿಗೆ ಸ್ಪಂದಿಸದ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು. ಲೋಕಸಭಾ ಚುನಾವಣೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ತಾಲೂಕು ಬಿಜೆಪಿ ನಾವಿಕನಿಲ್ಲದ ದೋಣಿಯಂತಾಗಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗುವುದು ನಿಶ್ಚಿತ. ಈ ಕಾರಣದಿಂದ ಕುಮಾರ ಬಂಗಾರಪ್ಪ ತಕ್ಷಣ ತಮ್ಮ ನಿಲುವನ್ನು ಪ್ರಕಟಿಸಬೇಕು. ಅಲ್ಲದೇ ಪಕ್ಷದ ವರಿಷ್ಟರು ಮಧ್ಯ ಪ್ರವೇಶಿಸಿ ಪಕ್ಷದಲ್ಲಿ ಉದ್ಭವಿಸಿರುವ ನಾಯಕತ್ವದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸುರೇಂದ್ರ ಮಾವಲಿ, ಶಿವಾನಂದ ಇದ್ದರು.

- - -

೦೭ಕೆಪಿಸೊರಬ-೦೨ :

ಸೊರಬ ಪಟ್ಟಣದಲ್ಲಿ ಬಿಜೆಪಿ ಮುಖಂಡ ಡಾ. ಎಚ್.ಇ. ಜ್ಞಾನೇಶ್ ಸುದ್ದಿಗೋಷ್ಠಿ ನಡೆಸಿದರು.