ಸಾರಾಂಶ
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು, ವ್ಯಕ್ತಿತ್ವಕ್ಕೆ ವ್ಯಕ್ತಿಯನ್ನು ಗೆಲ್ಲುವ ಶಕ್ತಿ ಇರುತ್ತದೆ ಎಂದು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕುಮಾರ್ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಪ್ರಜ್ಞೆ, ನಾಡನುಡಿಯ ಬಗ್ಗೆ ಅಭಿಮಾನ ದೇಶಾಭಿಮಾನ, ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿ ವಿದ್ಯಾರ್ಥಿ ದೆಸೆಯಲ್ಲೇ ಮನಸ್ಸಿನಲ್ಲಿ ಭದ್ರವಾಗಿ ಬೇರೂರಬೇಕು. ಇದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಗಳಿಂದ ಸಾಧ್ಯ. ಶಿಕ್ಷಣಕ್ಕೆ ಪೂರಕವಾದ ಇಂತಹ ಯೋಜನೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು, ವ್ಯಕ್ತಿತ್ವಕ್ಕೆ ವ್ಯಕ್ತಿಯನ್ನು ಗೆಲ್ಲುವ ಶಕ್ತಿ ಇರುತ್ತದೆ ಎಂದು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕುಮಾರ್ ಅಭಿಪ್ರಾಯಪಟ್ಟರು.ತಾಲೂಕಿನ ಬಿಡಾರದಹಳ್ಳಿ ಗ್ರಾಮದಲ್ಲಿ ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಪ್ರಜ್ಞೆ, ನಾಡನುಡಿಯ ಬಗ್ಗೆ ಅಭಿಮಾನ ದೇಶಾಭಿಮಾನ, ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿ ವಿದ್ಯಾರ್ಥಿ ದೆಸೆಯಲ್ಲೇ ಮನಸ್ಸಿನಲ್ಲಿ ಭದ್ರವಾಗಿ ಬೇರೂರಬೇಕು. ಇದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಗಳಿಂದ ಸಾಧ್ಯ. ಶಿಕ್ಷಣಕ್ಕೆ ಪೂರಕವಾದ ಇಂತಹ ಯೋಜನೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.ಬೂದೇಶ್ವರ ಮಠದ ಧರ್ಮದರ್ಶಿ ತಮ್ಮಣ್ಣಗೌಡ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆ ಕುರಿತು ಅರಿವು, ಶಾಂತಿಪಾಲನೆ, ಶಿಸ್ತು, ಸಂಯಮ ಕಲಿಸುವ ಕಾರ್ಯಕ್ರಮ. ಉನ್ನತ ಶಿಕ್ಷಣದ ಜೊತೆ ವಿದ್ಯಾರ್ಥಿಗಳಿಗೆ ಉನ್ನತ ಚಿಂತನೆಯು ಮುಖ್ಯ. ಬೂದೇಶ್ವರ ಮಠ ಹಲವಾರು ವರ್ಷಗಳಿಂದ ಈ ಹಿಂದೆ ನಡೆದ ಎಲ್ಲಾ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಿಗೆ ಬೆಂಬಲವನ್ನು ನೀಡುತ್ತಾ ಬಂದಿದೆ. ಹಾಗೆಯೇ ಮುಂದೆಯೂ ನೀಡುತ್ತೇವೆ. ಬೂದೇಶ್ವರ ಮಠ ಎಂದಿಗೂ ಸೇವಾ ಯೋಜನೆಗಳಿಗೆ ತನ್ನ ಬೆಂಬಲವನ್ನು ನೀಡುತ್ತದೆ ಎಂದರು. ಬೂದೇಶ್ವರ ಮಠದ ಮಾಜಿ ಧರ್ಮದರ್ಶಿ ಮೂರ್ತಣ್ಣ ಮಾತನಾಡಿ, ಗ್ರಾಮದಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಮೊಬೈಲ್‌ಗಳಿಂದ ವಿದ್ಯಾರ್ಥಿಗಳು ದೂರವಿದ್ದು ಗ್ರಾಮೀಣರಂತೆಯೇ ಬದುಕು ನಡೆಸಬೇಕು ಎಂದು ಕರೆಕೊಟ್ಟರು. ಹಾಸನ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಯೋಗೇಶ್ ಮಾತನಾಡಿ, ಸೇವಾ ಯೋಜನೆ ದೇಶಕ್ಕೆ ಮಹಾತ್ಮ ಗಾಂಧೀಜಿಯವರ ಅದ್ಭುತ ಕೊಡುಗೆ. ಅಂದು ಕೇವಲ ೪೦೦ ಜನರಿಂದ ಪ್ರಾರಂಭವಾದ ಇದು ಇಂದು ೪೦ ಕೋಟಿ ಸದಸ್ಯರನ್ನು ರಾಷ್ಟ್ರಾದ್ಯಂತ ಹೊಂದಿದ್ದು, ಸೇವೆಯೇ ಪರಮಧರ್ಮ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ. ಕವಿತಾ ಮಾತನಾಡಿ, ಶಿಬಿರಾರ್ಥಿಗಳು ಏಳು ದಿವಸಗಳ ಕಾಲ ಪುಣ್ಯಕ್ಷೇತ್ರದಲ್ಲಿದ್ದು ಇಲ್ಲಿನ ಸೇವೆ ಮಾಡಲು ಅವಕಾಶವನ್ನು ಪಡೆದಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಊರಿನ ಹಸಿರು ಮತ್ತು ಪ್ರಶಾಂತತೆ ನಿಜಕ್ಕೂ ಅದ್ಭುತ. ಒಂದೇ ಸ್ಥಳದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಸವಿರುವುದು ಪರಸ್ಪರ ಹೊಂದಾಣಿಕೆಯೊಂದಿಗೆ ಬಾಳುವುದನ್ನು ಕಲಿಸುತ್ತದೆ. ಹೀಗೆ ಸೌಹಾರ್ದದಿಂದ ಬಾಳುವುದು ಇಂದಿನ ಸಮಾಜದಲ್ಲಿ ಬಹಳ ಮುಖ್ಯವಾದಂತಹ ಕೌಶಲ್ಯ. ಈ ಶಿಬಿರ ನಿಮಗೆ ಇದನ್ನು ಕಲಿಸುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಬೂದೇಶ್ವರ ಮಠದ ಕಾರ್ಯದರ್ಶಿ, ಗುರುರಾಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರು, ನಿಟ್ಟೂರು ಗ್ರಾಮದ ಎಸ್.ಕೆ. ರಘುನಾಥ್, ವೆಂಕಟೇಶ್, ಭರತ್, ನಾಯಕ್, ಚಂದ್ರಶೇಖರ್, ನಟರಾಜ್, ಮಹಿಳಾ ಕಾಲೇಜಿನ ವ್ಯವಸ್ಥಾಪಕ ಹರ್ಷ, ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.