ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡಿದ ಹಾನಗಲ್ಲ ಕುಮಾರ ಶಿವಯೋಗಿಗಳು ಈ ನಾಡು ಕಂಡ ಅಪ್ರತಿಮ ಶಿವಯೋಗಿಗಳಲ್ಲಿ ಒಬ್ಬರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗದಗ

ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡಿದ ಹಾನಗಲ್ಲ ಕುಮಾರ ಶಿವಯೋಗಿಗಳು ಈ ನಾಡು ಕಂಡ ಅಪ್ರತಿಮ ಶಿವಯೋಗಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಪ್ರವಚನಕಾರ, ಮಲಕಸಮುದ್ರಮಠದ ಪಂ. ಶೇಖರಯ್ಯ ಶಾಸ್ತ್ರೀಗಳು ಹೇಳಿದರು.

ನಗರದ ಶ್ರೀಅನ್ನಪೂರ್ಣೇಶ್ವರಿ ಮಂದಿರದ ಶ್ರೀಅಡವಿಂದ್ರಸ್ವಾಮಿ ಮಠದ 352ನೇ ಮಾಸಿಕ ಶಿವಾನುಭವ ಹಾಗೂ ಲಿಂ.ಹಾನಗಲ್ ಕುಮಾರ ಶಿವಯೋಗಿಗಳ 159ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಕಾರಣಿಕ ಯುಗಪುರುಷ ಹಾನಗಲ್ಲ ಶ್ರೀಕುಮಾರೇಶ್ವರ ಶಿವಯೋಗಿಗಳು ಎಂಬ ವಿಷಯ ಕುರಿತು ಅವರು ಮಾತನಾಡಿದರು.

ದೇಶದಲ್ಲಿಯೇ ಅಪರೂಪವೆನ್ನಬಹುದಾದ ಶ್ರೀಯೋಗ ಮಂದಿರವನ್ನು ಸ್ಥಾಪಿಸಿ ಅದನ್ನು ಅಭಿವೃದ್ಧಿಪಡಿಸಿದಲ್ಲದೆ, ಹರಿದು ಹಂಚು ಹೋಗಿದ್ದ ಸಮಾಜವನ್ನು ಒಂದುಗೂಡಿಸಲು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ ಕೀರ್ತಿ ಪೂಜ್ಯ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿಯ ಅಧ್ಯಕ್ಷ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಲಿಂ.ಹಾನಗಲ್ ಕುಮಾರೇಶ್ವರ ಶಿವಯೋಗಿಗಳು ತಮ್ಮ 37ನೇ ವಯಸ್ಸಿನಲ್ಲಿ ಧಾರ್ಮಿಕ, ಸಾಮಾಜಿಕ ಸೇವೆಗೆ ಪಾದಾರ್ಪಣೆ ಮಾಡಿ 63ನೇ ವಯಸ್ಸಿನಲ್ಲಿಯೇ ಲಿಂಗೈಕ್ಯರಾದರೂ ಕೂಡ ನೂರಾರು ವರ್ಷಗಳ ಕಾಲ ಮಾಡಬಹುದಾದಷ್ಟು ಕಾರ್ಯಗಳನ್ನು ಈ ನಾಡಿನಲ್ಲಿ ಮಾಡಿದ್ದು ಒಂದು ಐತಿಹಾಸಿಕ ದಾಖಲೆಯಾಗಿದೆ ಎಂದರು.

ರೋಣದ ನೃತ್ಯ ಶಿಕ್ಷಕ ಜಗದೀಶ್ವರ ಸ್ವಾಮಿಗಳು ಹಿರೇಮಠ, ಶ್ರೀಮಠದ ಧರ್ಮದರ್ಶಿ ವೇದಮೂರ್ತಿ ಶ್ರೀಮಹೇಶ್ವರ ಸ್ವಾಮಿಗಳು ಮಾತನಾಡಿದರು. ಜಯಶ್ರೀ ರಾಜಶೇಖರ ವಸ್ತ್ರದ ಹಾಗೂ ಸಂಗಡಿಗರಿಂದ ಲಲಿತ ಸಹಸ್ರನಾಮಾವಳಿ ಪಠಣ ಜರುಗಿತು. ಇತ್ತೀಚೆಗೆ ಲಿಂ. ಶ್ರೀಮಠದ ಸದ್ಭಕ್ತರಾದ ಎ.ಎನ್. ಬಸ್ತಿ, ಶ್ರೀಶೈಲಪ್ಪ ಎಸ್.ಕಾವೇರಿ, ಸಿದ್ದಲಿಂಗಯ್ಯ (ಸಂಜಯ) ಎಂ.ಹುಬಳಿಮಠ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಕ್ತಿಸೇವೆ ವಹಿಸಿದ್ದ ಹರೀಶ್‌ಕುಮಾರ್ ಸೋಹನ್‌ಲಾಲಜಿ ಶಹಾ, ಶೈಲೇಂದ್ರ ಕುಮಾರ್ ಸೋಹನ್‌ಲಾಲಜಿ ಶಹಾ ಹಾಗೂ ಚಾರಧಾಮ ಯಾತ್ರೆಯನ್ನು ಮುಗಿಸಿಕೊಂಡು ಆಗಮಿಸಿದ ಗುರಣ್ಣ ನಿಡಗುಂದಿ ದಂಪತಿಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಕೆ.ಎಚ್. ಬೇಲೂರ, ಬಿ.ಎಂ. ಬೀಳೆಯಲಿ, ಜಿ.ಎಂ. ಯಾನಮಶೆಟ್ಟಿ, ಡಿ.ಬಿ. ಕಿಲಬನವರ, ಸುಶೀಲಾ ಕೋಟಿ, ಮಾರುತಿ ಹೆಬ್ಬಾರೆ, ಬಿ.ಬಿ. ಪಾಟೀಲ, ಪ್ರಭುಗೌಡ ಪಾಟೀಲ, ಎ.ಎನ್. ನವಲೆ ಮುಂತಾದವರು ಇದ್ದರು. ಶ್ರೀವೀರೇಶ್ವರಸ್ವಾಮಿ ಹೊಸಳ್ಳಿಮಠ ಹಾಗೂ ವಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು. ಯು.ಆರ್. ಭೂಸನೂರಮಠ ಸ್ವಾಗತಿಸಿ, ವಂದಿಸಿದರು.