ಡಿಕೆಶಿ ವಿರುದ್ಧ ಇನ್ನೇನು ಸಾಕ್ಷ್ಯ ಬೇಕು?: ಎಚ್‌ಡಿಕೆ

| Published : May 22 2024, 01:18 AM IST

ಡಿಕೆಶಿ ವಿರುದ್ಧ ಇನ್ನೇನು ಸಾಕ್ಷ್ಯ ಬೇಕು?: ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪೆನ್‌ಡ್ರೈವ್‌ ಸಂಚಿನಲ್ಲಿ ಡಿಸಿಎಂ ನೇರವಾಗಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಲಿ, ಇಲ್ಲಾ ವಜಾಗೊಳಿಸಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಪೆನ್‌ಡ್ರೈವ್‌ ಸಂಚಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆಪಾದಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಈ ಸಂಬಂಧ ಶಿವಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ವಿಡಿಯೋ ಬಹಿರಂಗ ವಿಚಾರದಲ್ಲಿ ಶಿವಕುಮಾರ್ ಪಾತ್ರ ಇರುವುದು ಸ್ಪಷ್ಟವಾಗಿದೆ. ಅವರ ಮೊಬೈಲ್‌ ಸಂಭಾಷಣೆಗಿಂತ ಬೇರೆ ಸಾಕ್ಷಿ ಬೇಕಾ? ಶಿವಕುಮಾರ್ ರಾಜಿನಾಮೆ ಕೊಡಲೇಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದರು.

ಡಿ.ಕೆ.ಶಿವಕುಮಾರ್‌ ಅವರಿಗೆ ಪೆನ್ ಡ್ರೈವ್ ಸೃಷ್ಟಿಕರ್ತ ಕಾರ್ತಿಕ್ ಗೌಡ ಮೊದಲು ವಿಡಿಯೋಗಳನ್ನು ತಂದು ಕೊಟ್ಟಿದ್ದ. ಆ ಸಂದರ್ಭದಲ್ಲಿ ಅವರ ಪಕ್ಷದ ಹಾಸನದ ಅಭ್ಯರ್ಥಿಯೂ ಇದ್ದರು. ಪ್ರಕರಣದಲ್ಲಿ ಇಷ್ಟೆಲ್ಲ ಭಾಗಿಯಾದ ಮೇಲೂ ಅವರನ್ನು ಸಂಪುಟದಲ್ಲಿ ಮುಂದುವರಿಸುವುದು ಸರಿಯಲ್ಲ. ಶಿವಕುಮಾರ್‌ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ. ಸರ್ಕಾರ ಇಂತಹ ತಪ್ಪಿತಸ್ಥರಿಗೆ ರಕ್ಷಣೆ ಕೊಡಬಾರದು. ಮುಖ್ಯಮಂತ್ರಿ ಸೇರಿದಂತೆ ಇಡಿ ಸರ್ಕಾರವೇ ಅವರ ರಕ್ಷಣೆಗೆ ನಿಂತಿದೆ ಎಂದು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಅವರೇ ದೇವರಾಜೇಗೌಡ ಜತೆ ಅರ್ಧ ನಿಮಿಷ ಮಾತಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟು ಮಾತನಾಡಿರುವುದೇ ಸಾಕಲ್ಲವೇ? ಆದರೆ, ಎಸ್‌ಐಟಿ ತಂಡ 7-8 ಜನರನ್ನು ಬಂಧನ ಮಾಡಿ ಕರೆದುಕೊಂಡು ಬಂದಿದ್ದಾರೆ. ಯಾವ ಸಾಕ್ಷ್ಯಗಳ ಆಧಾರದಲ್ಲಿ ಅವರನ್ನು ಕರೆದುಕೊಂಡು ಬಂದಿದ್ದಾರೆ? ಅವರಿಗೂ ಪ್ರಕರಣಕ್ಕೂ ಏನು ಸಂಬಂಧ ಎಂದು ಖಾರವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಆರು ಪ್ರಶ್ನೆಗಳಿಟ್ಟಿದ್ದೇನೆ ಎಂದಿದ್ದಾರೆ. ಆದರೆ, ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್‌ ರೇವಣ್ಣನನ್ನು ಮುಖ್ಯಮಂತ್ರಿಗಳು ಅಪರಾಧಿ ಮಾಡಿಬಿಟ್ಟಿದ್ದಾರೆ. ಪ್ರಜ್ವಲ್ ಆರೋಪಿ ಸ್ಥಾನದಲ್ಲಿ ಇದ್ದಾನೆ. ಅಪರಾಧಿ ಎಂದು ಎಲ್ಲಿ ಸಾಬೀತಾಗಿದೆ? ನೈತಿಕತೆ ಉಳಿಸಬೇಕು ಎನ್ನುವ ಕಾರಣಕ್ಕಾಗಿ ಆತನ ವಿರುದ್ಧ ಆರೋಪ ಕೇಳಿ ಬಂದ ತಕ್ಷಣ ಪಕ್ಷದಿಂದ ಅಮಾನತು ಮಾಡಿದ್ದೇವೆ. ಸಿದ್ದರಾಮಯ್ಯ ರೀತಿ ಭಂಡತನ ಮಾಡಿಲ್ಲ ಎಂದರು.

ಮುಖ್ಯಮಂತ್ರಿಗಳು ಇಷ್ಟು ಲಘುವಾಗಿ ಮಾತನಾಡಬಾರದು. ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಈ ಪ್ರಕರಣವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಯಾರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿಲ್ಲ. ಇದು ಎಸ್‌ಐಟಿ ತಂಡ ಅಲ್ಲ, ಇದು ‘ಸಿಟ್‌’ ತಂಡ. ಸುಖಾಸುಮ್ಮನೆ ದಂಡಕ್ಕೆ ಇದನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ನಾವು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು ಎಂದು ಈಗಾಗಲೇ ಹೇಳಿದ್ದೇನೆ. ತಪ್ಪಿತಸ್ಥರನ್ನು ರಕ್ಷಣೆ ಮಾಡಲು ನಾವು ಹೋಗುವುದಿಲ್ಲ. ಆದರೆ, ಈ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡರೆ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ನಿರ್ನಾಮ ಮಾಡಬೇಕು ಎಂದು ಸಂಚು ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಡಿಕೆಶಿ ಅಧಿಕಾರ ದುರ್ಬಳಕೆ ಸ್ಪಷ್ಟದೇವರಾಜೇಗೌಡ ಜತೆ ಡಿಕೆಶಿ ಅರ್ಧ ನಿಮಿಷ ಮಾತಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟು ಮಾತನಾಡಿರುವುದೇ ಸಾಕಲ್ಲವೇ? ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ. ಸರ್ಕಾರ ಇಂತಹ ತಪ್ಪಿತಸ್ಥರಿಗೆ ರಕ್ಷಣೆ ಕೊಡಬಾರದು ಎಂದು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.