ಸಾರಾಂಶ
ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಕರ್ನಾಟಕದ ಪ್ರಗತಿಗೆ ಶ್ರಮಿಸಲಿದ್ದಾರೆ.
ಬಳ್ಳಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಂಪುಟ ದರ್ಜೆ ಸಚಿವರಾಗಿ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮ ಆಚರಿಸಿದರು.
ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಕರ್ನಾಟಕದ ಪ್ರಗತಿಗೆ ಶ್ರಮಿಸಲಿದ್ದಾರೆ. ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಕುಮಾರಸ್ವಾಮಿ ಕೆಚ್ಚೆದೆಯ ಹೋರಾಟ ನಡೆಸಿ, ಪಕ್ಷವನ್ನು ಸಂಘಟಿಸಿದ್ದಾರೆ. ಅವರ ನಿರಂತರ ಹೋರಾಟ ಹಾಗೂ ಶ್ರಮದ ಫಲವಾಗಿಯೇ ಇಂದು ಕೇಂದ್ರದ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. ರೈತರು, ಕೃಷಿ ಕಾರ್ಮಿಕರು ಹಾಗೂ ದುಡಿವ ಜನರ ಪರ ರಾಜಕೀಯ ಹೋರಾಟಗಳನ್ನು ನಡೆಸಿರುವ ಕುಮಾರಸ್ವಾಮಿ ಇಂದಿಗೂ ರೈತರ ಪರ ಕಾಳಜಿಯನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ ಎಂದು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ತಿಳಿಸಿದರು.ಸಂಡೂರು ಕ್ಷೇತ್ರದ ಹಿರಿಯ ಜೆಡಿಎಸ್ ಮುಖಂಡ ಎನ್.ಕುರೇಕುಪ್ಪ ಸೋಮಪ್ಪ ಮಾತನಾಡಿ, ಮಾಜಿ ಸಿಎಂ ಕುಮಾರಣ್ಣ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಅತ್ಯಂತ ಸಂತಸ ತಂದಿದೆ. ಬರುವ ದಿನಗಳಲ್ಲಿ ತಾಪಂ, ಜಿಪಂ ಚುನಾವಣೆಗಳು ಎದುರಾಗಿದ್ದು, ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕಾಗಿದೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾಗಿದ್ದು, ವರಿಷ್ಠರು ಸೂಚನೆಯಂತೆ ಎಲ್ಲರೂ ಪಾಲಿಸೋಣ, ಮತ್ತೆ ಜೆಡಿಎಸ್ ನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು.
ಪಕ್ಷದ ಮುಖಂಡರಾದ ಲಕ್ಷ್ಮಿಕಾಂತ ರೆಡ್ಡಿ, ಮದಿರೆ ವಿಜಯಕುಮಾರ್, ಯಲ್ಲನಗೌಡ, ಹೊನ್ನೂರು ಸ್ವಾಮಿ, ಅದ್ದಿಗೇರಿ ರಾಮಣ್ಣ, ಅಶೋಕ್, ರಾಮಂಜನೇಯಲು, ಚಾಗನೂರು ನಾಗರಾಜ್, ಭವಾನಿ, ಜಮೀಲಾ, ರೇಣುಕಾ, ಶಬಾನಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗಡಗಿಚನ್ನಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪರ ಘೋಷಣೆಗಳನ್ನು ಕೂಗಿದರು.