ಸಾರಾಂಶ
ನರಸಿಂಹರಾಜಪುರ, ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ಇದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಪ್ರಸ್ತುತ ನಡೆದಿರುವ ಪರೀಕ್ಷೆ ರದ್ದುಪಡಿಸಿ ಮರಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಭಾರತೀಯ ರಾಷ್ಟ್ರೀಯ ಒಕ್ಕೂಟ(ಎನ್ಎಸ್ ಯುಐ) ತಾಲೂಕು ಘಟಕ ರಾಷ್ಟ್ರಪತಿ ಅವರಿಗೆ ತಹಸೀಲ್ದಾರ್ ಮೂಲಕ ಸೋಮವಾರ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಮೂಲಕ ಎನ್‌ಎಸ್‌ಯುಐ ರಾಷ್ಟಪತಿಗೆ ಮನವಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ಇದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಪ್ರಸ್ತುತ ನಡೆದಿರುವ ಪರೀಕ್ಷೆ ರದ್ದುಪಡಿಸಿ ಮರಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಭಾರತೀಯ ರಾಷ್ಟ್ರೀಯ ಒಕ್ಕೂಟ(ಎನ್ಎಸ್ ಯುಐ) ತಾಲೂಕು ಘಟಕ ರಾಷ್ಟ್ರಪತಿ ಅವರಿಗೆ ತಹಸೀಲ್ದಾರ್ ಮೂಲಕ ಸೋಮವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ, ನೀಟ್ ಪರೀಕ್ಷೆ ವಿವಾದಗಳಿಂದ ಕೂಡಿದ್ದು ಭಾರಿ ಅಕ್ರಮ ನಡೆದಿರುವ ಸಾಧ್ಯತೆಯಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣದಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿ ಪಡಿಸಲು ಕೇಂದ್ರ ಸರ್ಕಾರ ನೀಟ್ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂಬುದು ದೇಶದಾದ್ಯಂತ ಇರುವ ವಿದ್ಯಾರ್ಥಿಗಳ ಆಗ್ರಹವಾಗಿದೆ. ನೀಟ್ ಫಲಿತಾಂಶ ವಿವಾದವಾಗಲು ಅನೇಕ ಅಂಶಗಳು ಕಾರಣ. ಒಟ್ಟು 67 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಬಂದಿರುವುದು ಹಾಗೂ ಒಂದೇ ಪರೀಕ್ಷಾ ಕೇಂದ್ರದ 8 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿರುವುದು ನೀಟ್ ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಂತಿದೆ. ರ‍್ಯಾಂಕ್ ಬಂದಿರುವವರಲ್ಲಿ 6 ವಿದ್ಯಾರ್ಥಿಗಳು ಒಂದೇ ತರಬೇತಿ ಕೇಂದ್ರದವರಾಗಿರುವುದು ಇನ್ನಷ್ಟು ಅನುಮಾನ ಹುಟ್ಟುಹಾಕಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಒಂದೇ ತರಬೇತಿ ಕೇಂದ್ರ ಇವೆಲ್ಲವೂ ನೀಟ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಎಂಬುದು ವಿದ್ಯಾರ್ಥಿಗಳ ದೂರಿದ್ದಾರೆ.ತರಾತುರಿಯಲ್ಲಿ ಕೃಪಾಂಕ ನೀಡಿರುವುದು, ಲೋಕಸಭಾ ಚುನಾವಣಾ ಫಲಿತಾಂಶ ದಿನದಂದು ನೀಟ್ ಫಲಿತಾಂಶ ಪ್ರಕಟಿಸಿರುವುದು ಅನುಮಾನಗಳನ್ನು ಹೆಚ್ಚಿಸಿದೆ. ನೀಟ್ ಪರೀಕ್ಷಾ ಫಲಿತಾಂಶ ನಂತರ ದೇಶದ ಕೆಲವೆಡೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವ ವಿದ್ಯಾರ್ಥಿಗಳು ಪ್ರಾಣ ಕಳೆದು ಕೊಳ್ಳದಂತೆ ಸೂಕ್ತ ನಿರ್ಧಾರ ತೆಗೆದು ಕೊಳ್ಳಬೇಕು. ಉನ್ನತ ಮಟ್ಟದ ತನಿಖೆ ನಡೆಸಿ, ಪ್ರಸ್ತುತ ನಡೆದಿರುವ ಪರೀಕ್ಷೆ ರದ್ದುಪಡಿಸಿ ಕೂಡಲೇ ಮರುಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಎನ್ಎಸ್ ಯುಐ ತಾಲೂಕು ಘಟಕದ ಅಧ್ಯಕ್ಷ ಕಿರಣ್ ವರ್ಕಾಟೆ, ಯುವಕಾಂಗ್ರೆಸ್ ರಾಜ್ಯಪ್ರಧಾನ ಕಾರ್ಯದರ್ಶಿ ಶ್ರೀಜಿತ್ ದಂಡಿನಮಕ್ಕಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತನ್ ಅರಗಿ, ಯುವಕಾಂಗ್ರೆಸ್ ನರಸಿಂಹರಾಜಪುರ ಪಟ್ಟಣದ ಅಧ್ಯಕ್ಷ ಎನ್.ಕೆ. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ಅಭಿಲಾಷ್, ಮುಖಂಡರಾದ ಮಂಜೇಶ್ ಬಿಳುವ, ಹರೀಶ್ ಇದ್ದರು.