ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಲೋಕಸಭೆಗಿಂತ ಸ್ಥಳೀಯ ಹಾಗೂ ಸಹಕಾರಿ ಚುನಾವಣೆಗಳು ವಿಭಿನ್ನವಾಗಿ ನಡೆಯುತ್ತವೆ. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗಲಿದ್ದು, ಪಕ್ಷದ ಕಾರ್ಯಕರ್ತರು ಎದೆಗುಂದದೇ ಸಿದ್ಧರಾಗಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಧೈರ್ಯ ತುಂಬಿದರು.ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಿವೇಶನ, ಜನರಿಗೆ ಕುಡಿಯುವ ನೀರು ಪೂರೈಸುವ ಕೆಲಸಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಮಾಡುತ್ತೇವೆ. ನೀವೆಲ್ಲರೂ ಸೋಲಿನಿಂದ ಎದೆಗುಂದದೆ ಜನರ ವಿಶ್ವಾಸವನ್ನು ಗಳಿಸುವ ಕೆಲಸ ಮಾಡಿ ಎಂದರು.
ಮಂಚನಬೆಲೆ ಜಲಾಶಯಕ್ಕೆ ನೀರು ತಂದಿದ್ದು, ಅರ್ಕಾವತಿ ನದಿಗಳಿಗೆ ಸೇತುವೆ, ಚೆಕ್ ಡ್ಯಾಂ ನಿರ್ಮಾಣಕ್ಕೆ ಹಣ ತಂದಿದ್ದು, ಕೈಲಾಂಚ ಕೆರೆಗಳಿಗೆ ನೀರು ತುಂಬಿಸಿದ್ದು, ಕಾಳೇಗೌಡನದೊಡ್ಡಿ ಯೋಜನೆ ಸಾಕಾರ ಮಾಡಿದ್ದು, ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದು ಕ್ಷೇತ್ರದ ಜನರಿಗಾಗಿಯೇ ಹೊರತು ನನ್ನ ವೈಯಕ್ತಿಕ ಲಾಭಕ್ಕಲ್ಲ ಎಂದು ಸುರೇಶ್ ಹೇಳಿದರು.ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಈ ಸೋಲು ಡಿ.ಕೆ.ಸುರೇಶ್ ಸೋಲಲ್ಲ, ಅದು ನಮ್ಮೆಲ್ಲರ ಸೋಲಾಗಿದೆ. ಡಿ.ಕೆ.ಸುರೇಶ್ ಅವರು ಅಭಿವೃದ್ಧಿಯ ಕನಸುಗಾರರಾಗಿ, ಕಾರ್ಯಕರ್ತರ ಆಶಾಕಿರಣವಾಗಿದ್ದವರು. ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಆರೋಗ್ಯ, ಶಿಕ್ಷಣ, ವಸತಿ, ಕೃಷಿ ಕ್ಷೇತ್ರಗಳಲ್ಲಿ ಹೊಸ ಬದಲಾವಣೆ ತಂದು ಜನರ ಬದುಕನ್ನು ಹಸನು ಮಾಡಲು ಮುಂದಾದವರು. ಆದರೆ, ಜನರೇ ಅವರ ಕೈ ಹಿಡಿಯಲಿಲ್ಲ ಎಂಬ ನೋವಿದೆ ಎಂದರು.
ಡಿ.ಕೆ.ಸುರೇಶ್ ರವರು ಸೋಲು ಕಂಡಿದ್ದಾರೆ. ಆದರೆ ಸಮಾಜದಲ್ಲಿ ಅವರ ಗೌರವ, ಘನತೆಗೆ ಯಾವುದೇ ಧಕ್ಕೆ ಇಲ್ಲ. ಈ ಸೋಲನ್ನು ಸವಾಲಾಗಿ ತೆಗೆದುಕೊಂಡಿದ್ದು, ಕಾರ್ಯಕರ್ತರು ನಿಮ್ಮ ಜೊತೆ ಸದಾ ಇರುತ್ತೇವೆ ಎಂದು ಹೇಳಿದರು.ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಮಾತನಾಡಿ, ನರೇಗಾದಂತಹ ಹತ್ತಾರು ಅಭಿವೃದ್ಧಿ ಶಾಶ್ವತ ಕೆಲಸಗಳು, ಕೊರೋನಾ ಸಂಕಷ್ಟದಲ್ಲಿ ಜನರಿಗೆ ಆರೋಗ್ಯ ಸೇವೆ ಮತ್ತು ಮೂಲಭೂತ ಸೌಕರ್ಯಗಳನ್ನು ಸಾಕಾರಗೊಳಿಸಿದ ಡಿ.ಕೆ.ಸುರೇಶ್ ಅವರಿಗೆ ಮತದಾರರು ಚುನಾವಣೆಯಲ್ಲಿ ತಿರಸ್ಕರಿಸಿದ್ದು ಏಕೆ ಎಂಬ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ತು ಸದಸ್ಯ ಎಸ್.ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆ.ರಾಜು, ನಗರಸಭಾ ಸದಸ್ಯ ಕೆ.ಶೇಷಾದ್ರಿ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಗಂಗಾಧರ್, ಮಾಜಿ ಶಾಸಕ ಕೆ.ರಾಜು, ಬ್ಲಾಕ್ ಅಧ್ಯಕ್ಷ ವಿ.ಎಚ್.ರಾಜು, ಎ.ಬಿ.ಚೇತನ್‌ಕುಮಾರ್, ಅಶೋಕ್, ಜಿ.ಎನ್.ನಟರಾಜು, ಮುಖಂಡರಾದ ಡಾ.ದೀಪಾಮುನಿರಾಜು, ಗುರುಪ್ರಸಾದ್, ಪುಟ್ಟರಾಜು,ಕೆ.ರಮೇಶ್, ಪಿ.ನಾಗರಾಜು, ಹರೀಶ್ ಕುಮಾರ್, ರಾಜಶೇಖರ್, ಸಿಎನ್ ಆರ್ ವೆಂಕಟೇಶ್, ವಿಜಯಕುಮಾರಿ, ಅನಿಲ್ ಜೋಗಿಂದರ್, ಶ್ರೀನಿವಾಸ್, ವಸೀಂ, ಸಮದ್ ಮತ್ತಿತರರು ಉಪಸ್ಥಿತರಿದ್ದರು.
ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿ, ಮರಳವಾಡಿ, ಕಸಬಾ, ಕೈಲಂಚಾ ಹಾಗೂ ರಾಮನಗರ ಟೌನ್ ಭಾಗದ ನೂರಾರು ಮುಖಂಡರುಗಳು ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿದ್ದರು.