ದ್ಯಾಮವ್ವ-ದುರ್ಗವ್ವ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ಉಭಯ ದೇವಿಯರ ಭವ್ಯ ಮೆರವಣಿಯಲ್ಲಿ ಮುತೈದೆಯರು ಪೂರ್ಣಕುಂಭ ಹೊತ್ತು ಸಾಗುತ್ತಿದ್ದರೆ, ಮೆರವಣಿಗೆಯುದ್ದಕ್ಕೂ ಮಂಗಳವಾದ್ಯ, ಕಹಳೆ ಹಾಗೂ ಜಯಘೋಷಗಳು ಮೊಳಗಿದವು.

ಧಾರವಾಡ:

ಇಲ್ಲಿಯ ಹಾವೇರಿಪೇಟೆಯ ದ್ಯಾಮವ್ವ-ದುರ್ಗವ್ವ ದೇವಿಯರ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ-ಸಂಭ್ರಮದಿಂದ ಜರುಗಿತು. ಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯರ ಕೃಪೆಗೆ ಪಾತ್ರರಾದರು.

ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ಉಭಯ ದೇವಿಯರ ಭವ್ಯ ಮೆರವಣಿಯಲ್ಲಿ ಮುತೈದೆಯರು ಪೂರ್ಣಕುಂಭ ಹೊತ್ತು ಸಾಗುತ್ತಿದ್ದರೆ, ಮೆರವಣಿಗೆಯುದ್ದಕ್ಕೂ ಮಂಗಳವಾದ್ಯ, ಕಹಳೆ ಹಾಗೂ ಜಯಘೋಷಗಳು ಮೊಳಗಿದವು. ಪುಷ್ಪಾಲಂಕೃತ ರಥದಲ್ಲಿ ವಿರಾಜಮಾನರಾಗಿದ್ದ ದ್ಯಾಮವ್ವ-ದುರ್ಗವ್ವ ದೇವಿಯರನ್ನು ಕಂಡ ಭಕ್ತರು ಭಕ್ತಿಪರವಶರಾಗಿ ಪೂಜೆ ಸಲ್ಲಿಸಿದರು. ಹಾವೇರಿಪೇಟೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಈ ಮೆರವಣಿಗೆ ಇಡೀ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತ್ತು.ಸಂಜೆ ದೇವಸ್ಥಾನದ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ''''''''ನಗೆ ಹಬ್ಬ'''''''' ಜನಮನ ಆಕರ್ಷಿಸಿದ್ದು, ಉತ್ತರ ಕರ್ನಾಟಕ ಶೈಲಿಯ ಭಾಷೆ ಮತ್ತು ಮ್ಯಾನರಿಸಂ ಮೂಲಕ ಸತ್ತಿಗೇರಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ಜಾತ್ರೆಯ ಅಂಗವಾಗಿ ದೇವಿಯರಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ಹಾವೇರಿಪೇಟೆ ಸೇರಿ ಧಾರವಾಡದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದರು. ಬಂದೋಬಸ್ತ್‌ಗಾಗಿ ಪೊಲೀಸರನ್ನು ನಿಯೋಜಿಸಿತ್ತು. ಜಾತ್ರಾ ಸಮಿತಿ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಕಂಠಿ ಓಣಿಯ ಮುತವಲಿ ಅರಕಿನ ಜಮಾತ್ ಯುವ ಸಮಿತಿ ಬಳಗದ ಇರ್ಫಾನ್ ಹಾವೇರಿ ಶರಬತ್ತು ಹಂಚಿದರು. ಮುಜ್ಜು ಶಿವಳ್ಳಿ, ನಿಯಾಜ್ ಹಾವೇರಿ, ರಾಕೇಶ್ ಸವಣೂರ, ಸದ್ದಾಂ ಬಂಕಾಪುರ ಹಾಗೂ ದ್ಯಾಮವ್ವ-ದುರಗವ್ವ ಜಾತ್ರೆ ಯ ಪಂಚ ಕಮಿಟಿ ಅಧ್ಯಕ್ಷರಾದ ಕೆ. ಎಸ್ ಭೀಮಣ್ಣವರ್, ವಿಜಯ ಬೋಸ್ಲೆ, ಗಂಗಣ್ಣ ಜಮದಾಳಿ, ರಾಮಕೃಷ್ಣ ಬೋಸ್ಲೆ ಮತ್ತಿತರರು ಇದ್ದರು.