ಸಾರಾಂಶ
ತಾಲೂಕಿನ ಮರಿತೊಟ್ಲು ಗ್ರಾ.ಪಂ. ವ್ಯಾಪ್ತಿ ಕುಂಬ್ರಿಹುಬ್ಬುವಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೆಲವೆಡೆ ೨ ದಿನಕ್ಕೊಮ್ಮೆ ಅದೂ ಅತೀ ಕಡಿಮೆ ನೀರು ಸರಬರಾಜಾಗುತ್ತಿರುವುದರಿಂದ ಜನರು ಮನೆ ಬಳಕೆ ಮತ್ತು ದನಕರುಗಳಿಗೆ ನೀರು ಸಾಕಾಗದೆ ತತ್ತರಿಸಿ ಹೋಗಿದ್ದಾರೆ.
ಕೊಪ್ಪ : ತಾಲೂಕಿನ ಮರಿತೊಟ್ಲು ಗ್ರಾ.ಪಂ. ವ್ಯಾಪ್ತಿ ಕುಂಬ್ರಿಹುಬ್ಬುವಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೆಲವೆಡೆ ೨ ದಿನಕ್ಕೊಮ್ಮೆ ಅದೂ ಅತೀ ಕಡಿಮೆ ನೀರು ಸರಬರಾಜಾಗುತ್ತಿರುವುದರಿಂದ ಜನರು ಮನೆ ಬಳಕೆ ಮತ್ತು ದನಕರುಗಳಿಗೆ ನೀರು ಸಾಕಾಗದೆ ತತ್ತರಿಸಿ ಹೋಗಿದ್ದಾರೆ.
ಕುಡಿಯುವ ನೀರು ಪೂರೈಸಲು ಮುಸುರೆಹಳ್ಳ ದಡದಲ್ಲಿ ಪಂಚಾಯಿತಿಯವರು ಬಾವಿ ನಿರ್ಮಿಸಿದ್ದು ಹಳ್ಳದ ಪಕ್ಕದಲ್ಲಿಯೇ ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ಹಾಗೂ ಹಳ್ಳದ ಮೇಲ್ಭಾಗದಿಂದ ಬರುವ ತ್ಯಾಜ್ಯಗಳನ್ನು ಬಾವಿ ಹೀರಿಕೊಳ್ಳುತ್ತಿದ್ದು ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಕುಂಬ್ರಿಹುಬ್ಬುವಿನಲ್ಲಿರುವ ಸುಮಾರು ೨೦ಕ್ಕೂ ಹೆಚ್ಚು ಕುಟುಂಬಗಳು ನೀರಿಗಾಗಿ ಸರ್ಕಾರಿ ಬೋರ್‌ವೆಲ್ ಅನ್ನು ಆಶ್ರಯಿಸಿದ್ದವು. ಬೋರ್‌ವೆಲ್‌ನ ನೀರು ಕಡಿಮೆಯಾಗಿದ್ದು, ಹೊಸ ಬೋರ್‌ವೆಲ್ ಕೊರೆಯಿಸಲು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪಂಚಾಯಿತಿ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೊಸ ಬೋರ್‌ವೆಲ್ ನಿರ್ಮಾಣಕ್ಕೆ ಶಾಸಕರ ಸಹಿ ಅವಶ್ಯಕತೆ ಇದ್ದು ನೀತಿ ಸಂಹಿತೆ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿಯವರು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನೀತಿ ಸಂಹಿತೆ ಅಡ್ಡಬರಲಾರದು. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಚುನಾವಣೆಗೂ ಮುಂಚಿತವಾಗಿ ಕುಂಬ್ರಿಹುಬ್ಬುವಿನಲ್ಲಿ ನೂತನ ಸಾರ್ವಜನಿಕ ಬೋರ್‌ವೆಲ್ ಅನ್ನು ಕೊರೆಸದೆ ಹೋದಲ್ಲಿ ಈ ಭಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಿದ್ದೇವೆ ಎಂದು ಮರಿತೊಟ್ಲು ಗ್ರಾ.ಪಂ. ವ್ಯಾಪ್ತಿ ಕೆಲವು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.